×
Ad

ಪ್ರಧಾನಿ ಮೋದಿ ಮಧ್ಯಸ್ಥಿಕೆಗೆ ಪಟ್ಟು: ಕರಾಳ ದಿನಾಚರಣೆ ಆಚರಿಸಿದ ಹೋರಾಟಗಾರರು

Update: 2017-12-28 18:56 IST

ಬೆಂಗಳೂರು, ಡಿ.28: ಮಹಾದಾಯಿ ನದಿ ನೀರು ಹಂಚಿಕೆ ವಿವಾದ ಬಗೆಹರಿಸಲು ಪ್ರಧಾನಿ ನರೇಂದ್ರ ಮೋದಿ ಮಧ್ಯಸ್ಥಿಕೆ ವಹಿಸಬೇಕು ಎಂದು ಆಗ್ರಹಿಸಿ ಕನ್ನಡ ಪರ ಹೋರಾಟಗಾರರು ಕರಾಳ ದಿನಾಚರಣೆ ಆಚರಿಸಿ ಆಕ್ರೋಶ ವ್ಯಕ್ತಪಡಿಸಿದರು.

ಗುರುವಾರ ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಕನ್ನಡ ಒಕ್ಕೂಟ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು, ಕಪ್ಪು ಪಟ್ಟಿ ಧರಿಸಿ ಕರಾಳ ದಿನ ಆಚರಿಸಿ ಪ್ರತಿಭಟನೆ ನಡೆಸಿದರು.

 ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ವಾಟಾಳ್ ನಾಗರಾಜ್, ಕಳೆದ 900 ದಿನಗಳಿಂದ ಉತ್ತರ ಕರ್ನಾಟಕದ ಜನ ಕುಡಿಯುವ ನೀರಿಗಾಗಿ ಆಗ್ರಹಿಸಿ ಸತ್ಯಾಗ್ರಹ ನಡೆಸುತ್ತಿದ್ದರೂ ರಾಜ್ಯ ಹಾಗೂ ಕೇಂದ್ರ ಸರಕಾರ ಯಾವುದೇ ಕ್ರಮ ಕೈಗೊಳ್ಳದೆ ರಾಜಕೀಯ ನಾಟಕವಾಡುತ್ತಿರುವುದು ಸರಿಯಲ್ಲ ಎಂದರು.

ಮೂರು ರಾಜ್ಯಗಳ ಅಂತರ್ಜಲ ವಿವಾದವಾಗಿರುವ ಮಹಾದಾಯಿ ವಿವಾದವನ್ನು ಪ್ರಧಾನಿ ಮಧ್ಯಸ್ಥಿಕೆ ವಹಿಸಿ ಬಗೆಹರಿಸಬೇಕು. ಗೋವಾ, ಮಹಾರಾಷ್ಟ್ರ, ಕರ್ನಾಟಕ ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯನ್ನು ಕರೆದು ಜಲ ವಿವಾದವನ್ನು ಬಗೆಹರಿಸಿ ಕುಡಿಯುವ ನೀರಿನ ಸಮಸ್ಯೆಯನ್ನು ಪ್ರಧಾನಿ ಮೋದಿ ಕೂಡಲೇ ಬಗೆಹರಿಸಬೇಕೆಂದು ಆಗ್ರಹಿಸಿದರು.

ನಮ್ಮ ರಾಜ್ಯದ ಸಂಸದರು ಅದರಲ್ಲೂ ಬಿಜೆಪಿ ಸಂಸದರಿಗೆ ಹೆಚ್ಚು ಜವಾಬ್ದಾರಿ ಇದ್ದು, ಕೇಂದ್ರದ ಮೇಲೆ ಒತ್ತಡ ತಂದು ಈ ಸಮಸ್ಯೆಯನ್ನು ಬಗೆಹರಿಸಬೇಕು. ಈವರೆಗೆ ಅಂತಹ ಪ್ರಯತ್ನ ಮಾಡಿಲ್ಲ. ರಾಜ್ಯದ ಕೇಂದ್ರ ಸಚಿವರು ಈ ಬಗ್ಗೆ ಮೌನವಾಗಿದ್ದಾರೆ. ನಮ್ಮ ಯಾವ ಸಂಸದರೂ ಸಂಸತ್‌ನಲ್ಲಿ ಈ ವಿಷಯದ ಬಗ್ಗೆ ದನಿ ಎತ್ತಿಲ್ಲ. ಇವರ್ಯಾರಿಗೂ ನಮ್ಮ ರಾಜ್ಯದ ಜಲದ ಜ್ವಲಂತ ಸಮಸ್ಯೆಗಳ ಬಗ್ಗೆ ಅರಿವಿಲ್ಲ. ಅದರ ಅಗತ್ಯವೂ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ ಎಂದು ಹೇಳಿದರು.

ಜ.10ಕ್ಕೆ ಸಭೆ: ಜ.10ರಂದು ಎಲ್ಲ ಹೋರಾಟಗಾರರು, ಕನ್ನಡಪರ ಸಂಘಟನೆಗಳನ್ನೊಳಗೊಂಡ ರಾಜ್ಯಮಟ್ಟದ ಸಭೆಯನ್ನು ಕರೆದು ಮುಂದಿನ ಹೋರಾಟದ ರೂಪುರೇಷೆ ನಿರ್ಧರಿಸಿ ಈ ಸಮಸ್ಯೆಗೆ ತಾರ್ಕಿಕ ಅಂತ್ಯ ಕಾಣಿಸುತ್ತೇವೆ. ಇದನ್ನು ಇಷ್ಟಕ್ಕೆ ಬಿಡುವುದಿಲ್ಲ ಎಂದು ಎಚ್ಚರಿಸಿದರು.

ಕರ್ನಾಟಕ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಮಾತನಾಡಿ, ಕನ್ನಡ ಒಕ್ಕೂಟ ನಾಡಿನ ನೆಲ, ಜಲ, ಭಾಷೆಗೆ ಧಕ್ಕೆಯಾದಾಗ ನಿರಂತರ ಹೋರಾಟ ಮಾಡಿದೆ. ಮಹಾದಾಯಿಗಾಗಿ ಕರ್ನಾಟಕ ಬಂದ್ ಮಾಡಿ ಜಾಗೃತಿ ಮೂಡಿಸಿದೆ. ಈ ಹೋರಾಟವನ್ನು ನಾವು ಇಷ್ಟಕ್ಕೆ ಕೈ ಬಿಡುವುದಿಲ್ಲ. ಇತ್ಯರ್ಥ ವಾಗುವವರೆಗೂ ಮುಂದುವರೆಸುತ್ತೇವೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಕೆ.ಆರ್.ಕುಮಾರ್, ಮಂಜುನಾಥ್ ದೇವು, ಗಿರೀಶ್‌ಗೌಡ, ಪ್ರವೀಣ್‌ಕುಮಾರ್ ಶೆಟ್ಟಿ, ಶಿವರಾಮೇಗೌಡ ಸೇರಿ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News