ಪ್ರಧಾನಿ ಮೋದಿ, ಅಮಿತ್ ಶಾರಿಂದ ಸಂವಿಧಾನಕ್ಕೆ ಅವಮಾನ: ಡಾ.ಜಿ.ಪರಮೇಶ್ವರ್

Update: 2017-12-28 14:28 GMT

ಬೆಂಗಳೂರು, ಡಿ.28: ಸಚಿವ ಅನಂತಕುಮಾರ್ ಹೆಗಡೆ ಸಂವಿಧಾನ ವಿರೋಧಿ ಹೇಳಿಕೆಯನ್ನು ನೀಡಿದ್ದರೂ ಪ್ರಧಾನಿ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಯಾವುದೆ ಪ್ರತಿಕ್ರಿಯೆಯನ್ನು ನೀಡದೆ ಸಂವಿಧಾನಕ್ಕೆ ಅವಮಾನ ಮಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಆಪಾದಿಸಿದ್ದಾರೆ.

ಗುರುವಾರ ನಗರದ ಅಂಬೇಡ್ಕರ್ ಭವನದಲ್ಲಿ ಕೆಪಿಸಿಸಿ ಆಯೋಜಿಸಿದ್ದ 133ನೆ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರು ಸಂವಿಧಾನ ಬದಲಾಯಿಸುವ ಉದ್ದೇಶವನ್ನಿಟ್ಟುಕೊಂಡಿದ್ದರೆ ಅದನ್ನು ಸೂಕ್ತ ವೇದಿಕೆಯಲ್ಲಿ ಹೇಳಬೇಕು. ಆದರೆ, ಅನಂತಕುಮಾರ್ ಹೆಗಡೆ ಅವರಿಂದ ಹೇಳಿಕೆ ನೀಡಿಸಿ ಆಮೇಲೆ ಕ್ಷಮೆ ಕೇಳಲು ಸೂಚಿಸುವುದು ಸರಿಯಲ್ಲ ಎಂದು ಹೇಳಿದರು.    

ಪ್ರಧಾನಿ ನರೇಂದ್ರ ಮೋದಿ ಅವರು ಗೋವಾ ಮುಖ್ಯಮಂತ್ರಿಗೆ ಫೋನ್ ಮಾಡಿದರೆ ಮಹಾದಾಯಿ ಸಮಸ್ಯೆ ಬಗೆಹರಿಯುತ್ತದೆ, ಆದರೆ ಮೋದಿ ಅವರು ಗೋವಾ ಸಿಎಂಗೆ ಫೋನ್ ಮಾಡದೆ ಕರ್ನಾಟಕ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದ್ದು, ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕಾಗಿದೆ ಎಂದು ಕರೆ ನೀಡಿದರು. ಕಾಂಗ್ರೆಸ್ ಪಕ್ಷ ಸ್ಥಾಪನೆಯಾಗಿ 133 ವರ್ಷವಾಗಿದ್ದು, ಕಾಂಗ್ರೆಸ್ ಕಂಡ ಕನಸುಗಳಾದ ಸಾಮಾಜಿಕ ನ್ಯಾಯ, ಆರ್ಥಿಕ ಸಮಾನತೆ, ಶೈಕ್ಷಣಿಕ ಸಮಾನತೆ ಈ ಎಲ್ಲವೂ ಸಫಲವಾಗಿವೆ. ಈ ಸಫಲತೆಯನ್ನು ಸಹಿಸದ ಬಿಜೆಪಿಯವರು ಕಾಂಗ್ರೆಸ್ ಪಕ್ಷ ಈ ದೇಶಕ್ಕಾಗಿ ಏನೂ ಮಾಡಿಲ್ಲ ಎಂದು ಆರೋಪಿಸುತ್ತಿದ್ದಾರೆ ಎಂದು ಕಿಡಿಕಾರಿದರು. 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಗೆಲುವಿನ ಉಡುಗೊರೆಯನ್ನು ನೀಡಬೇಕಾಗಿದೆ. ಅಲ್ಲದೆ, ಕೇಂದ್ರದಲ್ಲೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಎಲ್ಲ ರೀತಿಯ ಪ್ರಯತ್ನ ಮಾಡಬೇಕಾಗಿದೆ ಎಂದು ಹೇಳಿದರು.

ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ್ ಮಾತನಾಡಿ, ಕಾಂಗ್ರೆಸ್ ಪಕ್ಷದ ಇತಿಹಾಸವನ್ನು ಅರಿಯದವರು ಕಾಂಗ್ರೆಸ್ ವಿರೋಧಿಗಳಾಗಿದ್ದಾರೆ. ಕಾಂಗ್ರೆಸ್ ಅರಿತವರು ಕಾಂಗ್ರೆಸ್‌ನ ಅಭಿಮಾನಿಗಳಾಗಿದ್ದಾರೆ. ಸಚಿವ ಅನಂತಕುಮಾರ್ ಹೆಗಡೆ ಅವರು ಕಾಂಗ್ರೆಸ್ ಪಕ್ಷವನ್ನು ಅರಿತಿಲ್ಲ. ಸಂವಿಧಾನವನ್ನೂ ಅರಿತಿಲ್ಲ ಎಂದು ತೀವ್ರ ವಾಗ್ದಾಳಿ ನಡೆಸಿದರು.

ಗುಜರಾತ್ ರಾಜ್ಯ ಸೇರಿ ಇನ್ನಿತರ ರಾಜ್ಯಗಳಲ್ಲಿ ಬಿಜೆಪಿ ಪಕ್ಷ ಕುತಂತ್ರದಿಂದ ಅಧಿಕಾರವನ್ನು ಹಿಡಿದಿದೆ. ಈ ಕುತಂತ್ರಕ್ಕೆ ಕಡಿವಾಣ ಹಾಕಲು ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಎಚ್ಚರಿಕೆಯಿಂದ ಇರಬೇಕೆಂದು ಹೇಳಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಮೂರುವರೆ ವರ್ಷ ಕಳೆದರೂ ಈ ದೇಶಕ್ಕೆ ಅಚ್ಚೆ ದಿನ್ ಬಂದಿಲ್ಲ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಆಗಿಲ್ಲ. ಬಿಜೆಪಿ ಹಾಗೂ ಸಂಘ ಪರಿವಾರದವರು ಹಿಂದುತ್ವದ ಮೇಲೆ ನಂಬಿಕೆಯನ್ನಿಯಿಟ್ಟಿದ್ದು, ಈ ನಂಬಿಕೆ ಮೇಲೆಯೆ ಮತ ಕೇಳುವ, ದೇಶ ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಬಿಜೆಪಿ ಅವರು ನ್ಯಾಯಾಂಗ, ಚುನಾವಣೆ ಆಯೋಗ, ಮಾಧ್ಯಮಗಳನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡಿದ್ದು, ಈ ಹಿಡಿತದಿಂದಲೆ ಎಲ್ಲ ರಾಜ್ಯಗಳಲ್ಲೂ ಕುತಂತ್ರದಿಂದ ಗೆಲವು ಕಾಣುತ್ತಿದ್ದಾರೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸಚಿವ ಕೃಷ್ಣಭೈರೇಗೌಡ, ಮಾಜಿ ಸಚಿವೆ ರಾಣಿ ಸತೀಶ್, ಬಿ.ಎಲ್.ಶಂಕರ್, ಸುದರ್ಶನ್, ಮಲ್ಲಾಜಮ್ಮ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News