ದೇವಸ್ಥಾನದ ಹುಂಡಿಯಲ್ಲಿದ್ದ ಹಣ ದೋಚಿ ಪರಾರಿ
Update: 2017-12-28 19:28 IST
ಬೆಂಗಳೂರು, ಡಿ.28: ಗಂಗಮ್ಮನ ದೇವಾಲಯಕ್ಕೆ ನುಗ್ಗಿದ ದುಷ್ಕರ್ಮಿಗಳು ಹುಂಡಿಯಲ್ಲಿದ್ದ ಹಣ ದೋಚಿ ಪರಾರಿಯಾಗಿರುವ ಘಟನೆ ನೆಲಮಂಗಲದ ನ್ಯಾಮಗೊಂಡ್ಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ತ್ಯಾಮಗೊಂಡ್ಲು ಹೋಬಳಿಯ ಬದನೂರು ಗ್ರಾಮದಲ್ಲಿರುವ ಗಂಗಮ್ಮ ದೇವಸ್ಥಾನದಲ್ಲಿ ಕಳ್ಳರು ಬುಧವಾರ ರಾತ್ರಿ ಹುಂಡಿ ಒಡೆದು ಹಣ ದೋಚಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಟ್ರಸ್ಟ್‌ನವರು ದೇವಾಲಯವನ್ನು ವರ್ಷಕ್ಕೆ ಎರಡು ಬಾರಿ ತೆರೆಯುತ್ತಾರೆ. ಒಂದು ಬಾರಿಗೆ ಲಕ್ಷಾಂತರ ಹಣ ಸಂಗ್ರಹವಾಗುತ್ತದೆ. ಕಳೆದ ಆರು ತಿಂಗಳ ಹಿಂದೆ ಹುಂಡಿಯನ್ನು ತೆರೆಯಲಾಗಿತ್ತು. ಈ ವಿಚಾರವನ್ನು ತಿಳಿದವರು ಶಾಮೀಲಾಗಿ ಈ ಕೃತ್ಯ ಎಸಗಿದ್ದಾರೆ ಎಂದು ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ನ್ಯಾಮಗೊಂಡ್ಲು ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.