×
Ad

ಸಂಚಾರಿ ಪೊಲೀಸರಿಗೆ ಕನ್ನಡ ಅಂಕಿ ಪರೀಕ್ಷೆ ಅಗತ್ಯವಿದೆ: ಡಾ.ವಸುಂಧರಾ ಭೂಪತಿ

Update: 2017-12-28 19:32 IST

ಬೆಂಗಳೂರು, ಡಿ.28: ವಾಹನದ ಮೇಲಿರುವ ಕನ್ನಡ ಅಂಕಿಗಳನ್ನು ಓದುವಲ್ಲಿ ಸಂಚಾರಿ ಪೊಲೀಸರು ವಿಲರಾಗುತ್ತಿದ್ದಾರೆ. ಆದ್ದರಿಂದ ಸಂಚಾರಿ ಪೊಲೀಸರಿಗೆ ಸರಕಾರ ಕಡ್ಡಾಯವಾಗಿ ಕನ್ನಡ ಅಂಕಿ ಪರೀಕ್ಷೆ ನಡೆಸಬೇಕೆಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ ಅಭಿಪ್ರಾಯಿಸಿದ್ದಾರೆ.

ಕನ್ನಡ ಅನುಷ್ಠಾನ ಮಂಡಳಿ ವತಿಯಿಂದ ನಗರದ ಮಲ್ಲೇಶ್ವರಂನ ಆಟದ ಮೈದಾನದ ಮುಖ್ಯ ದ್ವಾರದಲ್ಲಿ ಹಮ್ಮಿಕೊಂಡ ಕನ್ನಡ ಅಂಕಿ ಸಪ್ತಾಹದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕನ್ನಡದ ಅಂಕಿಗಳನ್ನು ಮುಖ್ಯ ಭೂಮಿಕೆಗೆ ತರಬೇಕು. ಸಂವಹನ ಸಂಕೇತವಾದ ಅಂಕಿಗಳು ಭಾಷೆ ವಿಸ್ತರಣೆಗೆ ಸಹಾಯಕವಾಗಿವೆ ಎಂದರು.

ಎರಡು ಸಾವಿರ ವರ್ಷ ಇತಿಹಾಸವಿರುವ ಕನ್ನಡ ಅಂಕಿಗಳನ್ನು ಬಳಸಲು ಹಿಂದೇಟು ಹಾಕುತ್ತಿರುವ ನಾವು ಕೇವಲ 300ವರ್ಷ ಇತಿಹಾಸವಿರುವ ಇಂಗ್ಲಿಷ್ ಅಂಕಿಗಳನ್ನು ಎಲ್ಲ ಕಡೆಗಳಲ್ಲಿ ಬಳಕೆ ಮಾಡುತ್ತೇವೆ. ಕನ್ನಡ ಅಂಕಿ ಹೊಂದಿರುವ ವಾಹನಕ್ಕೆ ಪೊಲೀಸರು ತಡೆಯೊಡ್ಡಲು ಮೂಲ ಕಾರಣ ಕನ್ನಡ ಅಂಕಿಯ ಬಗೆಗಿನ ಅಜ್ಞಾನ. ಈ ಹಿನ್ನೆಲೆ ಸಂಚಾರಿ ಪೊಲೀಸ್ ಹುದ್ದೆಗೆ ಸೇರುವ ಅಭ್ಯರ್ಥಿಗಳಿಗೆ ಕಡ್ಡಾಯವಾಗಿ ಕನ್ನಡ ಅಂಕಿ ಪರೀಕ್ಷೆ ನಡೆಸುವಂತೆ ವಸುಂಧರಾ ಭೂತಿ ಸರಕಾರವನ್ನು ಒತ್ತಾಯಿಸಿದರು.

ಕರ್ತವ್ಯ ಚ್ಯುತಿ ಆಗಲಿದೆ: ಮಹಾರಾಷ್ಟ್ರದಲ್ಲಿ ಅಲ್ಲಿನ ಸ್ಥಳೀಯಭಾಷೆ ಮರಾಠಿಯನ್ನು ವಾಹನದ ಸಂಖ್ಯೆ ಸೇರಿದಂತೆ ಆಡಳಿತದಲ್ಲಿಯೂ ಸಮರ್ಪಕವಾಗಿ ಅನುಷ್ಠಾನ ಮಾಡಲಾಗಿದೆ. ಅದೇ ರೀತಿ ರಾಜ್ಯದಲ್ಲಿ ಕನ್ನಡ ಬಳಕೆಯಾಗಬೇಕು. ಕರ್ನಾಟಕ ಮೋಟಾರು ವಾಹನ ಕಾಯಿದೆ ಅನುಸಾರ ವಾಹನದ ಒಂದುಕಡೆ ಕನ್ನಡದಲ್ಲಿ ಅಂಕಿ ಬರೆಸಲು ಅವಕಾಶವಿದೆ. ಇದನ್ನು ಸರಿಯಾಗಿ ಅರ್ಥೈಸಿಕೊಳ್ಳದ ಪೊಲೀಸರು ಡೆಫಿಸಿಟ್ ಸಂಖ್ಯೆ ಎಂದು ಪ್ರಕರಣ ದಾಖಲಿಸುತ್ತಾರೆ. ಈ ಕುರಿತು ಅರಿವು ಮೂಡಿಸುವುದು ಹಾಗೂ ವಾಹನದಲ್ಲಿ ಕನ್ನಡ ಅಂಕಿ ಬಳಸುವಂತೆ ಪ್ರೋತ್ಸಾಹಿಸಲು ಕನ್ನಡ ಅಂಕಿ ಬಳಕೆ ಸಪ್ತಾಹ ಹಮ್ಮಿಕೊಳ್ಳಲಾಗಿದೆ. ಸಪ್ತಾಹದಲ್ಲಿ ಎರಡು ಸಾವಿರ ವಾಹನಗಳಿಗೆ ಕನ್ನಡ ಅಂಕಿ ಬರೆಯುವ ಗುರಿ ಹೊಂದಿದ್ದು, ಕಳೆದ 22 ವರ್ಷದಲ್ಲಿ 30 ಸಾವಿರಕ್ಕೂ ಅಧಿಕ ವಾಹನಗಳಿಗೆ ಕನ್ನಡದಲ್ಲಿ ಅಂಕಿ ಬರೆದಿದ್ದೇವೆ ಎಂದು ಕನ್ನಡ ಅನುಷ್ಠಾನ ಮಂಡಳಿ ಅಧ್ಯಕ್ಷ ಆರ್.ಎ. ಪ್ರಸಾದ್ ಮಾಹಿತಿ ನೀಡಿದರು. ಇದೇ ವೇಳೆ ಶಾಸಕ ಡಾ.ಸಿ.ಎನ್. ಅಶ್ವಥ ನಾರಾಯಣ ಅವರು ಬೈಕ್‌ಗೆ ಕನ್ನಡದಲ್ಲಿ ಅಂಕಿ ಬರೆಯುವ ಮೂಲಕ ಸಪ್ತಾಹಕ್ಕೆ ಚಾಲನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News