ಮುಖ್ಯಮಂತ್ರಿಗಳ ಬಹುಮಹಡಿ ವಸತಿ ಯೋಜನೆ: ಅರ್ಜಿ ಸಲ್ಲಿಕೆಗೆ ಜ.5 ಅಂತಿಮ ದಿನ
ಬೆಂಗಳೂರು, ಡಿ.28: ರಾಜ್ಯ ಸರಕಾರವು ಬೆಂಗಳೂರಿನಲ್ಲಿ ವಾಸಿಸುತ್ತಿರುವ ವಸತಿ ರಹಿತರಿಗೆ ಶಾಶ್ವತ ಸೂರು ಕಲ್ಪಿಸುವ ಮಹತ್ವದ ಉದ್ದೇಶದೊಂದಿಗೆ ಚಾಲನೆ ನೀಡಿರುವ ಮುಖ್ಯಮಂತ್ರಿಗಳ ಒಂದು ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆಗೆ ಅರ್ಜಿ ಸಲ್ಲಿಸಲು 2018ನೆ ಸಾಲಿನ ಜನವರಿ 5 ಅಂತಿಮ ದಿನವಾಗಿದೆ.
ಅರ್ಜಿದಾರರ ಅರ್ಹತೆ: ಕುಟುಂಬದ ವಾರ್ಷಿಕ ಆದಾಯ ಗರಿಷ್ಠ 87,600 ರೂ.ಮೀರಿರಬಾರದು, ಕನಿಷ್ಟ 5 ವರ್ಷಗಳಿಗಿಂತ ಮೇಲ್ಪಟ್ಟು ಬೆಂಗಳೂರು ನಿವಾಸಿಯಾಗಿರಬೇಕು(ಬಿಡಿಎ ವ್ಯಾಪ್ತಿ), ಆಧಾರ್ ಕಾರ್ಡ್ ಹೊಂದಿರಬೇಕು, ಸರಕಾರದ ಯಾವುದೇ ವಸತಿ ಯೋಜನೆಯ ಫಲಾನುಭವಿಯಾಗಿರಬಾರದು, ರಾಜ್ಯದಲ್ಲಿ ಎಲ್ಲಿಯೂ ಸ್ವಂತ ಮನೆ ಹೊಂದಿರಬಾರದು.
ಕಡ್ಡಾಯವಾಗಿ ಸಲ್ಲಿಸಬೇಕಾದ ದಾಖಲೆಗಳು: ಕಂದಾಯ ಇಲಾಖೆಯ ಆರ್‌ಡಿ ಸಂಖ್ಯೆಯನ್ನು ಮಾತ್ರ ನಮೂದಿಸಬೇಕಾಗಿದೆ. ಜಾತಿ ಪ್ರಮಾಣ ಪತ್ರ ಸಂಖ್ಯೆ, ಆದಾಯ ಪ್ರಮಾಣ ಪತ್ರ ಸಂಖ್ಯೆ, ವಾಸ ದೃಢೀಕರಣದ ಪತ್ರ ಸಂಖ್ಯೆ, ಪಡಿತರ ಚೀಟಿ ಸಂಖ್ಯೆ, ಆಧಾರ್ ಕಾರ್ಡ್ ಸಂಖ್ಯೆ, ಕಾರ್ಮಿಕ ಇಲಾಖೆಯ ನೋಂದಣಿ ಸಂಖ್ಯೆ(ಕಟ್ಟಡ ನಿರ್ಮಾಣ ಕಾರ್ಮಿಕರಾಗಿದ್ದಲ್ಲಿ), ಚುನಾವಣಾ ಆಯೋಗದ ಗುರುತಿನ ಚೀಟಿ ಸಂಖ್ಯೆ ಹಾಗೂ ಬ್ಯಾಂಕ್ ಖಾತೆ ಸಂಖ್ಯೆ.
ಮೀಸಲಾತಿ: ಪರಿಶಿಷ್ಟ ಜಾತಿಗೆ ಶೇ.30, ಪರಿಶಿಷ್ಟ ಪಂಗಡಕ್ಕೆ ಶೇ.10, ಅಲ್ಪಸಂಖ್ಯಾತರಿಗೆ ಶೇ.10, ಸಾಮಾನ್ಯ ವರ್ಗಕ್ಕೆ ಶೇ.50ರಷ್ಟು ಮನೆಗಳನ್ನು ಮೀಸಲಿಡಲಾಗಿದೆ. ಪ್ರತಿ ಘಟಕದ ಅಂದಾಜು ವೆಚ್ಚವು 5.50 ಲಕ್ಷ ರೂ.ಗಳಿಂದ 6 ಲಕ್ಷ ರೂ.ಗಳಾಗಿರುತ್ತದೆ. ಘಟಕ ವೆಚ್ಚದ ಬಾಕಿ ಮೊತ್ತವನ್ನು ಅರ್ಜಿದಾರರು ರಾಜೀವ್‌ಗಾಂಧಿ ಗ್ರಾಮೀಣ ವಸತಿ ನಿಗಮ ಸೂಚಿಸಿದ ಸಂದರ್ಭದಲ್ಲಿ ಪಾವತಿಸಬೇಕಾಗಿದೆ.
ಸಹಾಯಧನ: ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳಿಗೆ 3.50 ಲಕ್ಷ ರೂ. ಹಾಗೂ ಸಾಮಾನ್ಯ ವರ್ಗಗಳಿಗೆ 2.70 ಲಕ್ಷ ರೂ.ಗಳ ಸಹಾಯಧನ ನೀಡಲಾಗುತ್ತದೆ. ಅರ್ಜಿ ಶುಲ್ಕ ಪಾವತಿ: ಅರ್ಜಿ ಶುಲ್ಕ 100 ರೂ.ನಿಗದಿಪಡಿಸಲಾಗಿದ್ದು, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವವರು ಅರ್ಜಿ ಶುಲ್ಕವನ್ನು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್‌ಬ್ಯಾಂಕಿಂಗ್ ಮೂಲಕ ಪಾವತಿಸಬಹುದು. ನಗದಾಗಿ ಪಾವತಿಸುವವರು ಬೆಂಗಳೂರು ಒನ್ ಕೇಂದ್ರಗಳು, ಆಕ್ಸಿಸ್, ಎಚ್‌ಡಿಎಫ್‌ಸಿ ಬ್ಯಾಂಕುಗಳಲ್ಲಿ ಪಾವತಿಸಬಹುದಾಗಿದೆ.
ಅರ್ಜಿ ಸಲ್ಲಿೆ: ಬೆಂಗಳೂರು ಒನ್ ಕೇಂದ್ರಗಳು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಎಲ್ಲ ವಾರ್ಡ್ ಕಚೇರಿಗಳಲ್ಲಿ, ಯಾವುದೇ ಬ್ರೌಸಿಂಗ್ ಸೆಂಟರ್‌ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಯಾವುದೇ ಪ್ರಮಾಣ ಪತ್ರಗಳನ್ನು ನೀಡುವ ಅಗತ್ಯವಿರುವುದಿಲ್ಲ.
ಇದು ಆನ್‌ಲೈನ್ ಅರ್ಜಿಯಾಗಿರುವುದರಿಂದ ಕೈ ಬರಹದ ಅರ್ಜಿ ಸಲ್ಲಿಸುವಂತಿಲ್ಲ. ಎಲ್ಲ ಸೂಚನೆಗಳನ್ನು ಕಾಲಕಾಲಕ್ಕೆ ವೆಬ್‌ಸೈಟ್‌ನಲ್ಲಿ ನೀಡಲಾಗುತ್ತದೆ. ಮಧ್ಯವರ್ತಿಗಳಿಗೆ ಯಾವುದೆ ಅವಕಾಶವಿರುವುದಿಲ್ಲ. ಅರ್ಜಿ ಸಲ್ಲಿಕೆ, ಮನೆ ವಿನ್ಯಾಸ, ಮಾದರಿ, ಸ್ಥಳ ಇತ್ಯಾದಿ ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್ http://www.ashraya.kar.nic.in/cmonelakh ನೋಡಬಹುದಾಗಿದೆ.