ತನ್ನ ಗ್ರಾಹಕರಿಗೆ ವಂಚಿಸಿದ ಆರೋಪ ಎದುರಿಸುತ್ತಿರುವ ಆ್ಯಪಲ್ ಈಗ ಹೇಳುತ್ತಿರುವುದೇನು ?

Update: 2017-12-29 10:18 GMT

ಸ್ಯಾನ್ ಫ್ರಾನ್ಸಿಸ್ಕೋ,ಡಿ.29 : ತನ್ನ ಹಳೆಯ ಐಪೋನ್ ಗಳನ್ನು ಉದ್ದೇಶಪೂರ್ವಕವಾಗಿ ರಹಸ್ಯವಾಗಿ ನಿಧಾನಗತಿಯಲ್ಲಿ ಕಾರ್ಯಾಚರಿಸುವಂತೆ ಮಾಡಿದ್ದಕ್ಕೆ ಆ್ಯಪಲ್ ಕ್ಷಮೆ ಕೋರಿದ್ದು ಬ್ಯಾಟರಿ ಮೇಲಿನ ಒತ್ತಡದಿಂದಾಗಿ ಅನಿರೀಕ್ಷಿತವಾಗಿ ಫೋನ್ ಗಳು ಶಟ್ ಡೌನ್ ಆಗುವುದನ್ನು ತಡೆಯಲು ಈ ರೀತಿ ಮಾಡಲಾಗಿತ್ತು ಎಂದು ಹೇಳಿಕೊಂಡಿದೆ.

ಆದರೆ ಇಂತಹ ಒಂದು ಕ್ರಮವು ಹೊಸ ಐಫೋನ್ ಮಾಡೆಲ್ ಗಳ ಬೇಡಿಕೆ ಹೆಚ್ಚಿಸುವ ಉದ್ದೇಶ ಹೊಂದಿದೆ ಎಂದು ಹಲವು ಆ್ಯಪಲ್ ಗ್ರಾಹಕರು ಹೇಳಿಕೊಂಡಿದ್ದಾರೆ. ಆರಂಭದಲ್ಲಿ ತನ್ನ ಫೋನ್ ಗಳು ವೇಗ ಕಳೆದುಕೊಳ್ಳಲು ಕಾರಣವೇನೆಂದು ಆ್ಯಪಲ್ ಹೇಳದೇ ಇರುವುದೇ ಈ ರೀತಿಯ ಸಂಶಯ ಬರಲು ಕಾರಣವೆನ್ನಲಾಗಿದೆ.

ಬದಲಿ ಬ್ಯಾಟರಿಗಾಗಿ ಬೆಲೆಯನ್ನು 50 ಡಾಲರ್ ನಿಂದ 29 ಡಾಲರ್ ಗೆ ಮುಂದಿನ ವರ್ಷ ಇಳಿಸುವುದಾಗಿಯೂ ಕಂಪೆನಿ ಹೇಳಿಕೊಂಡಿದೆ. ಆ್ಯಪಲ್ ಕೇರ್ ಮೈಂಟನೆನ್ಸ್ ಪ್ಲಾನ್ ಖರೀದಿಸದವರಿಗೆ ಈ ಹಿಂದೆ ಹೊಸ ಬ್ಯಾಟರಿಗಳು 79 ಡಾಲರ್ ಗೆ ದೊರೆಯುತ್ತಿದ್ದವು.

“ನಾವು ಕ್ಷಮಿಸುತ್ತೇವೆ.  ನಾವು  ಯಾವತ್ತೂ ಹಾಗೂ ಮುಂದೆಯೂ  ಯಾವುದೇ ಆ್ಯಪಲ್ ಉತ್ಪನ್ನದ ಬಾಳಿಕೆಯನ್ನು ಉದ್ದೇಶಪೂರ್ವಕವಾಗಿ ಕಡಿಮೆಗೊಳಿಸಲು  ಅಥವಾ  ಗ್ರಾಹಕರಿಗೆ ಅನಾನುಕೂಲ ಸೃಷ್ಟಿಸಿ ಅವರು ಅಪ್ ಗ್ರೇಡ್ ಗೆ ಮೊರೆ ಹೋಗುವಂತೆ  ಮಾಡುವುದಿಲ್ಲ'' ಎಂದು ಕಂಪೆನಿ ತನ್ನ ವೆಬ್ ಸೈಟ್ ನಲ್ಲಿ ಹೇಳಿಕೊಂಡಿದೆ.

ಐಫೋನ್ 6 ಹೊಂದಿರುವವರಿಗೆ ಹಾಗೂ ಹೊಸ ಬ್ಯಾಟರಿಯ ಅಗತ್ಯವಿರುವವರಿಗೆ ಬದಲಿ ಬ್ಯಾಟರಿ ಒದಗಿಸುವ ಯೋಜನೆ ಜನವರಿ ತಿಂಗಳ ಅಂತ್ಯದಲ್ಲಿ ಪ್ರಾರಂಭವಾಗುವ ಸೂಚನೆಯಿದೆ.

ತಮ್ಮ ಫೋನಿನ ಬ್ಯಾಟರಿಯ ಆರೋಗ್ಯದ ಬಗ್ಗೆ ಬಳಕೆದಾರರ ಜ್ಞಾನ ಹೆಚ್ಚಿಸುವ ಸಲುವಾಗಿ ಮುಂದಿನ ವರ್ಷ ಅಪ್ ಡೇಟ್ ಒಂದನ್ನು ಬಿಡುಗಡೆಗೊಳಿಸುವುದಾಗಿಯೂ ಆ್ಯಪಲ್ ತಿಳಿಸಿದೆ.

ಆ್ಯಪಲ್ ಐಫೋನ್ ಗಳ ವೇಗ ಕಡಿಮೆಗೊಳ್ಳುತ್ತಿದೆ ಎಂದು ಗ್ರಾಹಕರು ಆಕ್ರೋಶ ವ್ಯಕ್ತಪಡಿಸುತ್ತಿರುವಂತೆಯೇ ಕಳೆದ ವರ್ಷ ತಾನು ಕಂಡುಕೊಂಡ  ಪರಿಹಾರದಿಂದ ಈ ಸಮಸ್ಯೆ ಎದುರಾಗಿದೆ ಎಂದು ಸಂಸ್ಥೆ ಆರಂಭದಲ್ಲಿ ಹೇಳಿಕೊಂಡಿತ್ತು. ಈ ಬೆಳವಣಿಗೆಯ ನಂತರ ಕಂಪೆನಿಯ ಶೇರು ಮೌಲ್ಯ ಕೂಡ ಶೇ 2.5ರಷ್ಟು ಕಡಿಮೆಯಾಗಿತ್ತು.

ಫೋನ್ ವೇಗ ಕಡಿಮೆಯಾಗಿದೆ ಎಂಬ ವಿಚಾರ ಹೊರಬೀಳುತ್ತಿದ್ದಂತೆಯೇ  ಟೆಕ್ಸಾಸ್,  ಇಲ್ಲಿನೋಸ್, ಕ್ಯಾಲಿಫೋರ್ನಿಯಾ ಮತ್ತು ನ್ಯೂಯಾರ್ಕ್ ಮುಂತಾದೆಡೆಗಳ ಗ್ರಾಹಕರು ನ್ಯಾಯಾಲಯದ ಮೊರೆ ಹೋಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News