ಜುಮೈರಾ: ನೂತನ ತುಂಬೆ ಎಲೈಟ್ ಕ್ಲಿನಿಕ್, ಫಾರ್ಮಸಿ ಉದ್ಘಾಟನೆ

Update: 2017-12-30 07:46 GMT

ಜುಮೈರಾ, ಡಿ.30: ಅಂತಾರಾಷ್ಟ್ರೀಯ ಆರೋಗ್ಯ ಕ್ಷೇತ್ರದ ದಿಗ್ಗಜ ಸಂಸ್ಥೆ ತುಂಬೆ ಸಮೂಹವು, ದುಬೈಯ ಜುಮೈರಾದಲ್ಲಿ ನಿರ್ಮಿಸಿರುವ ನೂತನ ಎಲೈಟ್ ಕ್ಲಿನಿಕ್ ಮತ್ತು ಔಷಧಾಲಯವನ್ನು ಬುಧವಾರ ಎಂಬಿಎಂ ಸಮೂಹದ ಮುಖ್ಯಸ್ಥ ಎಚ್.ಎಚ್.ಶೇಕ್ ಮುಹಮ್ಮದ್ ಬಿನ್ ಮಕ್ತೂಮ್ ಬಿನ್ ಜುಮ ಅಲ್ ಮಕ್ತೂಮ್ ಉದ್ಘಾಟಿಸಿದರು. ಈ ವೇಳೆ ತುಂಬೆ ಸಮೂಹದ ಸ್ಥಾಪಕಾಧ್ಯಕ್ಷ ಡಾ. ತುಂಬೆ ಮೊಯ್ದಿನ್, ಆರೋಗ್ಯ ವಿಭಾಗದ ಉಪಾಧ್ಯಕ್ಷ ಅಕ್ಬರ್ ಮೊಯ್ದಿನ್ ತುಂಬೆ ಹಾಗೂ ತುಂಬೆ ಸಮೂಹ ಮಂಡಳಿಯ ಇತರ ಸದಸ್ಯರು ಉಪಸ್ಥಿತರಿದ್ದರು.

ಉದ್ಘಾಟನೆಯ ನಂತರ ನೂತನ ಕ್ಲಿನಿಕ್ ಮತ್ತು ಔಷಧಾಲಯದಲ್ಲಿ ದೊರೆಯುವ ಸೇವೆಗಳ ಬಗ್ಗೆ ಮಾಹಿತಿ ಪಡೆದ ಎಚ್.ಎಚ್.ಶೇಕ್ ಮುಹಮ್ಮದ್ ಬಿನ್ ಮಕ್ತೂಮ್ ಬಿನ್ ಜುಮ ಅಲ್ ಮಕ್ತೂಮ್, ಉನ್ನತ ಗುಣಮಟ್ಟದ ಆರೋಗ್ಯ ರಕ್ಷಣೆಯನ್ನು ಒದಗಿಸಲು ತುಂಬೆ ಸಮೂಹ ನಡೆಸುತ್ತಿರುವ ಪ್ರಯತ್ನ ಮತ್ತು ಸಮೂಹದ ಶೈಕ್ಷಣಿಕ ಆಸ್ಪತ್ರೆ ಹಾಗೂ ಇತರ ಆರೋಗ್ಯರಕ್ಷಣಾ ವಿಭಾಗಗಳನ್ನು ವಿಸ್ತರಿಸುವ ಸಮೂಹದ ಅವಿತರ ಪ್ರಯತ್ನವನ್ನು ಶ್ಲಾಘಿಸಿದರು.

ನೂತನ ಎಲೈಟ್ ಕ್ಲಿನಿಕ್ ಹಾಗೂ ಔಷಧಾಲಯದ ನಿರ್ಮಾಣವು ಮುಂದಿನ 4-5 ವರ್ಷಗಳಲ್ಲಿ ಉದ್ಯೋಗಿಗಳ ಸಂಖ್ಯೆಯನ್ನು 25,000ಕ್ಕೆ ಏರಿಸುವ ಮತ್ತು ಸಂಸ್ಥೆಯನ್ನು ಜಾಗತಿಕ ಮಟ್ಟದಲ್ಲಿ ವಿಸ್ತರಿಸುವ ತುಂಬೆ ಸಮೂಹದ ಯೋಜನೆಯ ಭಾಗವಾಗಿದೆ ಎಂದು ಡಾ. ತುಂಬೆ ಮೊಯ್ದಿನ್ ತಿಳಿಸಿದರು. 2022ರ ವೇಳೆಗೆ ತುಂಬೆ ಸಮೂಹ ಸಂಸ್ಥೆಯ ಶೈಕ್ಷಣಿಕ ಆಸ್ಪತ್ರೆಗಳ ಸರಣಿಯಡಿ, ದುಬೈಯಲ್ಲಿ 1,000 ಹಾಸಿಗೆ ಗಳು, ಭಾರತದಲ್ಲಿ 1,500 ಹಾಸಿಗೆಗಳು, ಗಲ್ಫ್ ಮತ್ತು ಆಫ್ರಿಕಾದ ಇತರ ಭಾಗಗಳಲ್ಲಿ 750 ಹಾಸಿಗೆಗಳನ್ನು ಹೊಂದುವ ಯೋಜನೆಯನ್ನು ಹಾಕಲಾಗಿದೆ ಎಂದು ಡಾ. ತುಂಬೆ ಮೊಯ್ದಿನ್ ತಿಳಿಸಿದರು.

ತುಂಬೆ ಸಮೂಹದ ಎಲೈಟ್ ಕ್ಲಿನಿಕ್ ಜುಮೈರಾದಲ್ಲಿ ನಿರ್ಮಾಣವಾಗಿರುವುದರಿಂದ ದುಬೈಯ ಸುತ್ತಮುತ್ತಲ ಹಾಗೂ ಇತರ ಕೊಲ್ಲಿರಾಷ್ಟ್ರಗಳಿಂದ ಆಗಮಿಸುವ ರೋಗಿಗಳಿಗೆ ಸಹಾಯವಾಗಲಿದೆ. ಈ ಕ್ಲಿನಿಕ್ ಅತ್ಯಾಧುನಿಕ ಸಾಧನಗಳನ್ನು ಹೊಂದಿದ್ದು, ಇದರ ವಿನ್ಯಾಸ ಮತ್ತು ಆರೋಗ್ಯದಾಯಕ ವಾತಾವರಣದಿಂದ ರೋಗಿಗಳಿಗೆ ಉನ್ನತ ಗುಣಮಟ್ಟದ ಚಿಕಿತ್ಸೆಯನ್ನು ಪಡೆಯಲು ಅನುಕೂಲವಾಗಲಿದೆ. ಇಲ್ಲಿ ಅತೀವೇಗದ ‘ಮರ್ಹಬ’ ಸೇವೆಯನ್ನು ಒದಗಿಸಲಾಗುತ್ತಿದ್ದು, ಇದರಿಂದ ಕಾಯುವಿಕೆಯ ಸಮಯ ಕಡಿಮೆಯಾಗಲಿದೆ ಮತ್ತು ರೋಗಿಗಳಿಗೆ ಸಹಕಾರಿಯಾಗಲಿದೆ ಎಂದು ಅಕ್ಬರ್ ತುಂಬೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News