ಬೆಂಗಳೂರು: 4 ಸ್ಟ್ರೋಕ್ ಆಟೊ ಖರೀದಿಗೆ ಸಾಲ ಸೌಲಭ್ಯ ಕಲ್ಪಿಸಲು ಆಗ್ರಹ
ಬೆಂಗಳೂರು, ಡಿ.30: ನಗರದಲ್ಲಿ 2 ಸ್ಟ್ರೋಕ್ ಆಟೊ ನಿಷೇಧಿಸಿ 4 ಸ್ಟ್ರೋಕ್ ಆಟೊ ಖರೀದಿಸಲು ಸರಕಾರ ಆದೇಶಿಸಿದ್ದು, ಅದಕ್ಕೆ ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಸಾಲ ಸೌಲಭ್ಯ ಕಲ್ಪಿಸಬೇಕು ಎಂದು ಅಸಂಘಟಿತ ಆಟೊ ಚಾಲಕರ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಸೋಮಶೇಖರ್, 2ಸ್ಟ್ರೋಕ್ ಆಟೊ ಬಂದ್ ಮಾಡಿದಲ್ಲಿ 4 ಸ್ಟ್ರೋಕ್ ಆಟೊ ಖರೀದಿಸಲು ಚಾಲಕರಿಗೆ ಸಮಸ್ಯೆ ಆಗಲಿದೆ. ಆಟೊ ಖರೀದಿಗೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲದ ಸಮಸ್ಯೆ ಆಗಲಿದೆ. ಈ ಬ್ಯಾಂಕ್‌ಗಳಲ್ಲಿ ಸಾಲದ ಮರುಪಾವತಿ ಅಸಲು ಹಾಗೂ ಬಡ್ಡಿ ಹೆಚ್ಚಲಿದೆ. ಆದುದರಿಂದ ಸರಕಾರ ಸಾಲ ಸೌಲಭ್ಯಕ್ಕೆ ನೆರವು ಕಲ್ಪಿಸಬೇಕು ಅಥವಾ 2 ಸ್ಟ್ರೋಕ್ ಆಟೊ ಬಂದ್ ಆದೇಶಕ್ಕೆ ತಡೆ ನೀಡಬೇಕು ಎಂದರು.
ನಗರದಲ್ಲಿ ಹೆಚ್ಚುತ್ತಿರುವ ವಾಯು ಹಾಗೂ ಶಬ್ದಮಾಲಿನ್ಯ ತಡೆಗಟ್ಟಲು ಸರಕಾರ ಈ ನಿರ್ಧಾರಕ್ಕೆ ಬಂದಿದ್ದು, 2018ರಿಂದ ಜಾರಿಗೆ ತರಲು ಮುಂದಾಗಿದೆ. ಇದರಿಂದಾಗಿ ಚಾಲಕರಿಗೆ ಸಮಸ್ಯೆ ಆಗಲಿದ್ದು. ಹೀಗಾಗಿ ಚಾಲಕರ ಸಮಸ್ಯೆಯನ್ನು ಪರಿಗಣಿಸಿ ಈ ಆದೇಶವನ್ನು 2019ರ ಏಪ್ರಿಲ್‌ಗೆ ಮುಂದೂಡಬೇಕು ಎಂದು ಮನವಿ ಮಾಡಿದರು.
ಆಟೊ ಚಾಲಕರು ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಆಟೊ ಖರೀದಿಸಲು 1.50 ಲಕ್ಷ ರೂ. ಸಾಲ ಪಡೆದರೆ ಪ್ರತಿ ತಿಂಗಳು 2500 ಸಾವಿರ ರೂ. ಸಾಲದ ಕಂತು ಹಾಗೂ 700 ರೂ. ಬಡ್ಡಿಯಂತೆ 3200ರೂ.ನ್ನು 60 ಕಂತುಗಳಲ್ಲಿ ಮರು ಪಾವತಿ ಮಾಡಲು ಬ್ಯಾಂಕ್‌ಗಳು ಅವಕಾಶ ನೀಡುತ್ತವೆ. ಆದರೆ ಖಾಸಗಿ ಬ್ಯಾಂಕ್, ಹಣಕಾಸು ಸಂಸ್ಥೆಗಳಿಂದ ಆಟೊ ಖರೀದಿಸಲು 1.50 ಲಕ್ಷ ರೂ. ಸಾಲ ಪಡೆದರೆ, ಸಾಲದ ಮರುಪಾವತಿ ಅಸಲು 3,750 ರೂ. ಹಾಗೂ ಬಡ್ಡಿ 2 ಸಾವಿರ ರೂ. ಸೇರಿದರೆ 5,750 ರೂಪಾಯಿಯಂತೆ 40 ಕಂತು ಪಾವತಿಸಬೇಕು. ಇದರಿಂದ ಆಟೊ ಚಾಲಕರು ಜೀವನ ಸಾಗಿಸಲು ಕಷ್ಟವಾಗುತ್ತದೆ ಎಂದು ತಿಳಿಸಿದರು.
ರಾಷ್ಟ್ರೀಕೃತ ಬ್ಯಾಂಕಿನಿಂದ ಸಾಲ ಪಡೆದರೆ 60 ತಿಂಗಳಿಗೆ 42 ಸಾವಿರ ರೂ. ಬಡ್ಡಿ ಹಾಗೂ ಖಾಸಗಿ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದರೆ 40 ತಿಂಗಳಿಗೆ 80 ಸಾವಿರ ರೂ. ಬಡ್ಡಿ ಆಗುತ್ತದೆ. ಬ್ಯಾಂಕಿಗೂ ಹಾಗೂ ಖಾಸಗಿ ಹಣಕಾಸು ಸಂಸ್ಥೆಗೂ ಹೋಲಿಕೆ ಮಾಡಿದರೆ ಚಾಲಕರು 38 ಸಾವಿರ ರೂ.ಗಳಷ್ಟು ಹೆಚ್ಚುವರಿ ಬಡ್ಡಿ ಪಾವತಿಸಬೇಕಾಗುತ್ತದೆ. ಹೀಗಾಗಿ ಅಗತ್ಯ ನೆರವು ಕಲ್ಪಿಸಬೇಕು ಎಂದು ಕೋರಿದರು.
ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎಂ.ವೆಂಕಟೇಶ್‌ಗೌಡ ಮಾತನಾಡಿ, ಆಟೊರಿಕ್ಷಾ ಗುಜರಿ ಕೇಂದ್ರಗಳನ್ನು ಬಂದ್ ಮಾಡಬೇಕು. ಆಟೊಗೆ ಸಂಬಂಧಿಸಿದ ನೋಂದಣಿ ದಾಖಲೆಗಳನ್ನು ಆರ್‌ಟಿಓ (ಪ್ರಾದೇಶಿಕ ಸಾರಿಗೆ ಕಚೇರಿ)ಗೆ ಹಿಂದಿರುಗಿಸಿ, ಚಾಲಕನೇ ತನ್ನ ವಾಹನವನ್ನು ಗುಜರಿಗೆ ಹಾಕುವಂತೆ ಯೋಜನೆ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.
4 ಸ್ಟ್ರೋಕ್ ಆಟೊ ಖರೀದಿಸಲು 30 ಸಾವಿರದಂತೆ 10 ಸಾವಿರ ಚಾಲಕರಿಗೆ ಸಹಾಯಧನ ನೀಡಿ ಪ್ರತಿ ಆಟೊರಿಕ್ಷಾಗೆ 30 ಸಾವಿರದಂತೆ ಕೇವಲ 10 ಸಾವಿರ ಆಟೊರಿಕ್ಷಾಗಳಿಗೆ ಸಹಾಯ ಧನ ನೀಡಲು ಮುಂದಾಗಿದೆ. ಉಳಿದ ಚಾಲಕರನ್ನು ಬೀದಿಗೆ ತಳ್ಳಲು ಮುಂದಾಗಿದೆ. ಅಲ್ಲದೆ ಕಳೆದ 8 ತಿಂಗಳಿನಿಂದ ಸಹಾಯಧನ ನೀಡುವ ಯೋಜನೆಯನ್ನು ಜಾರಿಗೆ ತಂದಿಲ್ಲ. ಇದರ ಹಿಂದೆ ಸಾರಿಗೆ ಇಲಾಖೆ ಅಧಿಕಾರಿಗಳ ಕೈವಾಡ ಇರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದರು. ಈ ಕುರಿತು ಪ್ರತಿಭಟನೆ ನಡೆಸಿದಾಗ ಸಾರಿಗೆ ಸಚಿವ ರೇವಣ್ಣ ಬೇಜವಾಬ್ದಾರಿ ಉತ್ತರ ನೀಡಿದರು. ಚಾಲಕರನ್ನು ಬದಿಗೊತ್ತಿ, ಅಧಿಕಾರಿಗಳಿಗೆ ಒಲವು ತೋರುತ್ತಿದ್ದಾರೆ ಎಂದು ಆರೋಪಿಸಿದರು.