×
Ad

ಬೆಂಗಳೂರು: ವೈದ್ಯಕೀಯ ಮಂಡಳಿ ವಿಧೇಯಕ ಜಾರಿಗೆ ವಿರೋಧ

Update: 2017-12-30 19:01 IST

ಬೆಂಗಳೂರು, ಡಿ.30: ಕೇಂದ್ರ ಸರಕಾರವು ರಾಷ್ಟ್ರೀಯ ವೈದ್ಯಕೀಯ ಮಂಡಳಿ ವಿಧೇಯಕಕ್ಕೆ ತಿದ್ದುಪಡಿ ಮಾಡಲು ಅವಕಾಶ ನೀಡದೆ ಇದ್ದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳಿಂದ ಹೊಸ ವರ್ಷವನ್ನು ಶ್ರದ್ಧಾಂಜಲಿ ದಿನವನ್ನಾಗಿ ಆಚರಿಸಲಾಗುವುದೆಂದು ಮೆಡಿಕಲ್ ಕೌನ್ಸಿಲ್ ಆಫ್ ಅಸೋಸಿಯೇಷನ್ ಅಧ್ಯಕ್ಷ ಡಾ.ಎಚ್.ಎನ್.ರವೀಂದ್ರ ಎಚ್ಚರಿಕೆ ನೀಡಿದ್ದಾರೆ.

ಶನಿವಾರ ವಸಂತನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮೆಡಿಕಲ್ ಕೌನ್ಸಿಲ್ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಆರೋಪ ಹೊರಿಸಿ ಅದಕ್ಕೆ ಕೇಂದ್ರ ಸರಕಾರ ಮೂಗುದಾರ ಹಾಕಲು ಹೊರಟಿದೆ. ಭ್ರಷ್ಟಾಚಾರದಲ್ಲಿ ತೊಡಗಿದ ವೈದ್ಯರ ಮೇಲೆ ಕಾನೂನು ಕ್ರಮ ಕೈಗೊಳ್ಳಲಿ, ಆದರೆ ಎಂಸಿಎಯ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡುವುದು ಸರಿಯಲ್ಲ ಎಂದು ಹೇಳಿದರು.

ಸಂಸತ್ತಿನಲ್ಲಿ ಈಗಾಗಲೇ ವಿಧೇಯಕ ಮಂಡಿಸಲಾಗಿದೆ. ಇದರ ಪ್ರಕಾರ ಶೇ. 40 ರಷ್ಟು ವೈದ್ಯಕೀಯ ಶಿಕ್ಷಣದ ಪ್ರವೇಶಾತಿ ಶುಲ್ಕವನ್ನು ನಿರ್ಧರಿಸಿದರೆ, ಶೇ.60ರಷ್ಟು ಖಾಸಗಿ ಸಂಸ್ಥೆಗಳು ಶುಲ್ಕವನ್ನು ನಿಗದಿ ಪಡಿಸಬಹುದಾಗಿದೆ ಎಂದ ಅವರು, ಇದರಿಂದ ಖಾಸಗಿ ವೈದ್ಯಕೀಯ ಸಂಸ್ಥೆಗಳು ಹೆಚ್ಚಿನ ಶುಲ್ಕವನ್ನು ವಿಧಿಸುವುದಲ್ಲದೇ, ಬಡವರು, ಮಧ್ಯಮ ವರ್ಗದವರು ಎಂಬಿಬಿಎಸ್ ಓದಲು ಸಾಧ್ಯವಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ಎಂಸಿಎಯ ಬೇಡಿಕೆಗಳನ್ನು ಬಿಲ್‌ಗೆ ಸೇರಿಸಿ ತಿದ್ದುಪಡಿ ತರಬೇಕು. ಈ ಸಂಬಂಧ ರಾಜ್ಯದ ಸಂಸದರಿಗೆ ಮನವಿ ಸಲ್ಲಿಸಿ ಕೇಂದ್ರದ ಮನವೊಲಿಸುವ ಪ್ರಯತ್ನ ನಡೆಸಲಾಗುವುದು. ಎಂಸಿಎ ಅಸೋಸಿಯೇಷನ್‌ಗೆ 64 ಸದಸ್ಯರನ್ನು ಚುನಾವಣೆ ಮೂಲಕ ಆರಿಸಿದರೆ, 59 ಸದಸ್ಯರುಗಳನ್ನು ಸರಕಾರವೇ ನಾಮ ನಿರ್ದೇಶನಗೊಳಿಸಬೇಕು ಎಂದರು.

ಶ್ರದ್ಧಾಂಜಲಿ: ಅಸೋಸಿಯೇಷನ್‌ನ ವಿರೋಧದ ನಡುವೆಯೂ ವಿಧೇಯಕಕ್ಕೆ ತಿದ್ದುಪಡಿ ತರದೇ ಹೋದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳಿಂದ ಹೊಸ ವರ್ಷವನ್ನು ಮೊಂಬತ್ತಿ ಹಚ್ಚಿ ವೈದ್ಯಕೀಯ ಕ್ಷೇತ್ರದ ಶ್ರದ್ಧಾಂಜಲಿ ದಿನವನ್ನಾಗಿ ಆಚರಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ವೈದ್ಯಕೀಯ ವಿದ್ಯಾರ್ಥಿಗಳು ಪದವಿ ಹಂತದಲ್ಲಿ ಎಲ್ಲ್ಲ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಉತ್ತೀರ್ಣರಾದರೂ ಮತ್ತೆ ನಿರ್ಗಮಿತ ಪರೀಕ್ಷೆಯನ್ನು ಎದುರಿಸಬೇಕಿದೆ. ಮೆಡಿಕಲ್ ಎಜುಕೇಶನ್ ಬೋರ್ಡ್‌ಗೆ ಸರಕಾರವೇ ಅಧ್ಯಕ್ಷರನ್ನು ಆರಿಸುವ ಕ್ರಮಗಳು ಬಿಲ್‌ನಲ್ಲಿದ್ದು ಇದರಿಂದ ವೈದ್ಯಕೀಯ ಕ್ಷೇತ್ರದ ಮೇಲೆ ಗಂಭೀರ ಪ್ರಭಾವ ಬೀರಲಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಡಿ.31ರಂದು ಸಭೆ: 
ಭಾರತೀಯ ವೈದ್ಯಕೀಯ ಪರಿಷತ್ತಿನಲ್ಲಿ ವಿವಿಧ ರಾಜ್ಯಗಳ ಪ್ರತಿನಿಧಿಗಳಿಂದ ಮುಂದಿನ ಕಾರ್ಯ ನಡೆಯ ಬಗ್ಗೆ ಡಿ.31ರಂದು ದೆಹಲಿಯಲ್ಲಿ ಚರ್ಚೆ ನಡೆಯಲಿದೆ ಎಂದು ಡಾ.ಎಚ್.ಎನ್.ರವೀಂದ್ರ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News