ಬೆಂಗಳೂರು: ವಿಷ್ಣುವರ್ಧನ್‌ಗೆ ಅಭಿಮಾನಿಗಳಿಂದ ಪುಷ್ಪನಮನ
ಬೆಂಗಳೂರು, ಡಿ.30: ಕನ್ನಡ ಚಿತ್ರರಂಗದ ಮೇರು ನಟ ವಿಷ್ಣುವರ್ಧನ್‌ರ 8ನೆ ಪುಣ್ಯತಿಥಿ ಅಂಗವಾಗಿ ಶನಿವಾರ ನಗರದ ಅಭಿಮಾನ್ ಸ್ಟುಡಿಯೋ ಬಳಿ ಸಾವಿರಾರು ಅಭಿಮಾನಿಗಳು ಪುಷ್ಪನಮನ ಸಲ್ಲಿಸಿ ಗೌರವ ಸೂಚಿಸಿದರು.
ರಾಜ್ಯದ ಮೂಲೆಮೂಲೆಗಳಿಂದ ಆಗಮಿಸಿದ್ದ ವಿಷ್ಣು ಅಭಿಮಾನಿಗಳು ಸಮಾಧಿಗೆ ಪೂಜೆ ಸಲ್ಲಿಸಿ ಭಾವುಕರಾದರು. ಅಲ್ಲದೆ, ವಿಷ್ಣು ಪುಣ್ಯತಿಥಿಯನ್ನು ಅರ್ಥಪೂರ್ಣವಾಗಿ ಆಚರಿಸುವ ಸಲುವಾಗಿ ಹಲವೆಡೆ ಉಚಿತ ಆರೋಗ್ಯ ತಪಾಸಣಾ ಶಿಬಿರ, ರಕ್ತದಾನ, ಅಂಗವಿಕಲರಿಗೆ ಸಾಧನ ಸಲಕರಣೆಗಳ ವಿತರಣೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಸ್ಮಾರಕ ನಿರ್ಮಿಸಲು ಆಗ್ರಹ: ಇದೇ ಸಂದರ್ಭದಲ್ಲಿ ವಿಷ್ಣುವರ್ಧನ್ ನಮ್ಮನ್ನಗಲಿ ಎಂಟು ವರ್ಷಗಳು ಕಳೆಯುತ್ತಿದ್ದರೂ ರಾಜ್ಯದ ರಾಜಧಾನಿಯಲ್ಲಿ ಒಂದು ನೆನಪಿನ ಸ್ಮಾರಕ ನಿರ್ಮಾಣ ಮಾಡಲು ಸಾಧ್ಯವಾಗಿಲ್ಲ ಎಂದು ವಿಷ್ಣು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ, ವಿಷ್ಣು ಸ್ಮಾರಕವನ್ನು ಬೆಂಗಳೂರಿನಲ್ಲಿಯೇ ನಿರ್ಮಾಣ ಮಾಡಬೇಕು ಎಂದು ಸರಕಾರವನ್ನು ಒತ್ತಾಯಿಸಿದರು. ಹಾಗೂ ನಗರದ ಸ್ಯಾಟಲೈಟ್ ಬಸ್ ನಿಲ್ದಾಣ ಸೇರಿದಂತೆ ಮೂರು ಸ್ಥಳಗಳಲ್ಲಿ ವಿಷ್ಣು ಪುತ್ಥಳಿಯನ್ನು ಅನಾವರಣ ಮಾಡಲಾಯಿತು.
ವಿಷ್ಣು ಅವರ ಪತ್ನಿ ಭಾರತಿ ವಿಷ್ಣವರ್ಧನ್ ಅವರು ಮನೆಯಲ್ಲಿಯೇ ವಿಷ್ಣುವರ್ಧನ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಬಡಮಕ್ಕಳಿಗೆ ನೋಟ್ ಪುಸ್ತಕಗಳನ್ನು ವಿತರಿಸಿ ವಿಶೇಷವಾಗಿ ಆಚರಿಸಿದರು. ವಿಷ್ಣುವರ್ಧನ್ ತಮ್ಮ ಕೊನೆಯ ದಿನಗಳನ್ನು ಮೈಸೂರಿನಲ್ಲಿ ಕಳೆಯಬೇಕೆಂಬ ಬಯಕೆ ಹೊಂದಿದ್ದರು. ಹೀಗಾಗಿ, ಸರಕಾರ ಮೈಸೂರಿನಲ್ಲಿಯೇ ವಿಷ್ಣು ಸ್ಮಾರಕವನ್ನು ಶೀಘ್ರವೇ ನಿರ್ಮಿಸಿಕೊಡಬೇಕು ಎಂಬ ಬಯಕೆಯನ್ನು ಭಾರತಿ ವಿಷ್ಣುವರ್ಧನ್ ಹೊಂದಿದ್ದಾರೆ ಎಂದರು.