×
Ad

ಕಸ ವಿಂಗಡಿಸಿ ಬೆಂಗಳೂರು ಸ್ವಚ್ಛತೆಗೆ ಸಹಕರಿಸಿ: ದಾಸೇಗೌಡ

Update: 2017-12-30 20:05 IST

ಬೆಂಗಳೂರು, ಡಿ.30: ನಾಗರಿಕರು ತಮ್ಮ ಮನೆಯಲ್ಲಿ ಉತ್ಪತ್ತಿಯಾಗುವ ಕಸವನ್ನು ವಿಂಗಡಿಸಿ ಪೌರಕಾರ್ಮಿಕರಿಗೆ ನೀಡಿದರೆ ಮಾತ್ರ ಬೆಂಗಳೂರನ್ನು ಸ್ವಚ್ಛವಾಗಿಡಬಹುದು. ಹೀಗಾಗಿ ಸಾರ್ವಜನಿಕರು ಹಸಿ ಕಸ, ಒಣ ಕಸ ಹಾಗು ಸ್ಯಾನಿಟರಿ ಕಸ ಎಂದು ಮೂರು ಬಗೆಯಲ್ಲಿ ಕಸವನ್ನು ವಿಂಗಡಿಸುವ ಮೂಲಕ ನಗರವನ್ನು ಸ್ವಚ್ಛವಾಗಿಡಲು ಕೈಜೋಡಿಸಬೇಕು ಎಂದು ಮೂಡಲಪಾಳ್ಯ ವಾರ್ಡ್‌ನ ಸದಸ್ಯ ದಾಸೇಗೌಡ ಮನವಿ ಮಾಡಿದರು.

ಬಿಬಿಎಂಪಿ, ಸೆಂಟರ್ ಪಾರ್ ಅಡ್ವೋಕೆಸಿ ಎಂಡ್ ರಿಸರ್ಚ್ ಸಂಸ್ಥೆ, ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನ ಹಾಗೂ ಮಹಿಳಾ ಆರೋಗ್ಯ ಸಮಿತಿ ವತಿಯಿಂದ ಇಲ್ಲಿನ ಪಂಚಶೀಲನಗರದಲ್ಲಿ ಆಯೋಜಿಸಿದ್ದ ‘ಸ್ವಚ್ಛತಾ ಅಭಿಯಾನ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದರು.

ಸಾರ್ವಜನಿಕರು ತಮ್ಮ ತಮ್ಮ ಮನೆಯನ್ನು ಶುಚಿಯಾಗಿಟ್ಟಲ್ಲಿ ಕಸದ ಸಮಸ್ಯೆಯೇ ಇರುವುದಿಲ್ಲ. ಸಾರ್ವಜನಿಕರು ಎಲ್ಲೆಂದರಲ್ಲಿ ಕಸವನ್ನು ಬಿಸಾಡುವುದರಿಂದಲೇ ಕಸದ ಸಮಸ್ಯೆಗೆ ಮೂಲ ಕಾರಣವಾಗಿದೆ. ಇಂತಹ ದುರ್ವರ್ತನೆಯನ್ನು ಬಿಟ್ಟು, ಕಸವನ್ನು ಮೂರು ಬಗೆಯಲ್ಲಿ ವಿಂಗಡಿಸಿ ಪೌರಕಾರ್ಮಿಕರಿಗೆ ನೀಡಬೇಕು. ಇಷ್ಟು ಕೆಲಸವನ್ನು ಪ್ರತಿದಿನ ಚಾಚುತಪ್ಪದೆ ಮಾಡಿದರೆ ನಗರವನ್ನು ಸ್ವಚ್ಛವಾಗಿಡುವುದರ ಜೊತೆಗೆ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಅವರು ಆಶಿಸಿದರು.

ಬಿಬಿಎಂಪಿ ಸಹಾಯಕ ಕಾರ್ಯಪಾಲಕ ಅಭಿಯಂತರ ಜಾವೆದ್ ಮಾತನಾಡಿ, ’ಪ್ರತಿಯೊಂದು ವಾರ್ಡ್‌ನಲ್ಲಿ ಸುಮಾರು 90ಕ್ಕಿಂತಲೂ ಹೆಚ್ಚು ಪೌರಕಾರ್ಮಿಕರನ್ನು ನೇಮಕ ಮಾಡಲಾಗಿದೆ. ಅವರು ಪ್ರತಿದಿನ ಮನೆಮನೆ ಭೇಟಿ ನೀಡಿ ಕಸ ಸಂಗ್ರಹ ಮಾಡುತ್ತಾರೆ. ಸಾರ್ವಜನಿಕರು ಮೂಲದಲ್ಲಿಯೇ ಕಸ ವಿಂಗಡಣೆಗೆ ಸಹಕರಿಸಿದರೆ ಕಸಮುಕ್ತ ಬೆಂಗಳೂರು ಕನಸು ನನಸು ಮಾಡಲು ಸಾಧ್ಯ ಎಂದು ಹೇಳಿದರು.

ಹಿರಿಯ ವೈದ್ಯಾಧಿಕಾರಿ ಡಾ. ಮಾಲತಿ ಮಾತನಾಡಿ, ಸ್ವಚ್ಛ ಭಾರತ ಅಭಿಯಾನ ಯಶಸ್ವಿಯಾಗಬೇಕಾದರೆ ಪ್ರತಿಯೊಬ್ಬ ನಾಗರಿಕನೂ ಸಹಕರಿಸಬೇಕು. ತಮ್ಮ ಸುತ್ತಮತ್ತಲಿನ ಪ್ರದೇಶವನ್ನು ಶುಚಿಯಾಗಿಟ್ಟಲ್ಲಿ ಬಹಳಷ್ಟು ರೋಗಗಳಿಂದ ದೂರವಾಗಿಸಲು ಸಾಧ್ಯ. ಈ ನಿಟ್ಟಿನಲ್ಲಿ ಮಕ್ಕಳಲ್ಲಿ ಚಿಕ್ಕಂದಿನಿಂದಲೇ ಶುಚಿತ್ವದ ಬಗ್ಗೆ ಅರಿವು ಮೂಡಿಸುವ ಕೆಲಸವಾಗಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಹಿರಿಯ ವೈದ್ಯಾಧಿಕಾರಿ ಸುಲೋಚನ, ಸಂಗೊಳ್ಳಿ ರಾಯಣ್ಣ ಸಂಘದ ಪದಾದಿಕಾರಿ ದೇವರಾಜ್ ಉಪಸ್ಥಿತರಿದ್ದರು. ಈ ವೇಳೆ ಪಂಚಶೀಲ ನಗರದ ಮುಖ್ಯ ರಸ್ತೆಗಳನ್ನು ಸ್ವಚ್ಛತೆ ಮತ್ತು ಬಡಾವಣೆಯಲ್ಲಿ ಜಾಥಾ ಮೂಲಕ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News