ಚಾಣಾಕ್ಷ ರಾಜಕಾರಣಿ ಸಿದ್ದರಾಮಯ್ಯ

Update: 2017-12-31 07:58 GMT

ಮಹಾದಾಯಿ ನದಿ ನೀರು ಹಂಚಿಕೆ ಮತ್ತು ಪ್ರತ್ಯೇಕ ಲಿಂಗಾಯತ ಧರ್ಮ- ಇವೆರಡು ಸದ್ಯಕ್ಕೆ ರಾಜ್ಯದ ಮುಂದಿರುವ ಜ್ವಲಂತ ಸಮಸ್ಯೆಗಳು. ಈ ಸಮಸ್ಯೆ ವಿವಾದವಾಗಿ, ವಿವಾದಕ್ಕೆ ರಾಜಕಾರಣ ಪ್ರವೇಶವಾಗಿ, ಪಕ್ಷಗಳ ಪ್ರತಿಷ್ಠೆು ಪ್ರಶ್ನೆಯಾಗಿ, ಕಗ್ಗಂಟಾಗಿ ಕೂತಿದೆ.
ಈ ವಿವಾದಗಳಿಗೆ ಪರಿಹಾರ ಸಿಗುತ್ತದೋ, ಜನರಲ್ಲಿ ನೆಮ್ಮದಿ ನೆಲೆಯೂರುತ್ತದೋ ಗೊತ್ತಿಲ್ಲ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಇವೆರಡೂ ವಿವಾದಗಳು ಅನಾಯಾಸವಾಗಿ ದಕ್ಕಿದ ಅನುಕೂಲಕರ ಅಸ್ತ್ರಗಳಾಗಿವೆ. ಆ ಅಸ್ತ್ರಗಳನ್ನು ಅವರು ಅತ್ಯಂತ ಜಾಣ್ಮೆಯಿಂದ, ಚಾಣಾಕ್ಷತನದಿಂದ ನಿಭಾಯಿಸುತ್ತಿರುವ ರೀತಿ, ಅವರ ರಾಜಕೀಯ ಪ್ರೌಢಿಮೆಯನ್ನು ಸಾರುತ್ತಿದೆ. ಹಾಗೆಯೇ ಅವರು ಹೈಕಮಾಂಡ್‌ಗೆ ಆಪ್ತರಾಗಿದ್ದು, ನಾಯಕತ್ವಕ್ಕೆ ಬಲ ಬಂದಿದ್ದು ಮತ್ತು ರಾಜಕೀಯವಾಗಿ ಕಾಂಗ್ರೆಸ್‌ಗೆ ಲಾಭವಾಗುತ್ತಿರುವುದು ಅದನ್ನು ಪುಷ್ಟೀಕರಿಸುತ್ತಿದೆ.
ಮೇಲಿನೆರಡೂ ವಿವಾದಗಳು ಬಹುಪಾಲು ಉತ್ತರ ಕರ್ನಾಟಕದ ಜನರ ಬದುಕಿನೊಂದಿಗೆ ಭಾವನಾತ್ಮಕವಾಗಿ ಬೆಸೆದುಕೊಂಡಿವೆ. ಅದರಲ್ಲೂ ಮೂರ್ನಾಲ್ಕು ಜಿಲ್ಲೆಗಳ ಕುಡಿಯುವ ನೀರಿನ ದಾಹ ನಿವಾರಿಸುವ ಮಹಾದಾಯಿ ನದಿ ನೀರಿನ ಯೋಜನೆಯಂತೂ, ಕಳೆದ ನಾಲ್ಕೂವರೆ ವರ್ಷಗಳಿಂದ ಕಾಂಗ್ರೆಸ್ ಸರಕಾರಕ್ಕೆ ಕಗ್ಗಂಟಾಗಿ ಪರಿಣಮಿಸಿತ್ತು. ಪರಿಹರಿಸಬೇಕಾದ ಆಡಳಿತಾರೂಢ ಕಾಂಗ್ರೆಸ್, ಕೇಂದ್ರ ಸರಕಾರದ ಮಧ್ಯಸ್ಥಿಕೆಯನ್ನು ಮುಂದೆ ಮಾಡಿ ಜವಾಬ್ದಾರಿಯಿಂದ ನುಣುಚಿಕೊಂಡಿತ್ತು. ಕಾಂಗ್ರೆಸ್‌ನ ವೈಫಲ್ಯವನ್ನು ರಾಜಕೀಯವಾಗಿ ಲಾಭ ಪಡೆಯಲು ಮುಂದಾದ ಬಿಜೆಪಿಯ ಯಡಿಯೂರಪ್ಪನವರು, ‘ಹದಿನೈದು ದಿನಗಳಲ್ಲಿ ನೀರು ಹರಿಸುತ್ತೇವೆ’ ಎಂದು ಹೋರಾಟಗಾರರಿಗೆ ವಚನವಿತ್ತರು. ಸಾಲದು ಎಂದು ಗೋವಾ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್‌ರಿಂದ ‘ಮಾತುಕತೆಗೆ ಸಿದ್ಧ’ ಎಂಬ ಪತ್ರ ಬರೆಸಿ, ಬಹಿರಂಗವಾಗಿ ಓದಿ ಭರವಸೆ ಬಿತ್ತಿದರು.

ದಿನಗಳುರುಳಿದಂತೆ ಕೊಟ್ಟ ಗಡುವೂ ಮುಗಿಯಿತು, ಪತ್ರಕ್ಕೆ ಮಾನ್ಯತೆಯೂ ಸಿಗದಂತಾಯಿತು. ರೊಚ್ಚಿಗೆದ್ದ ಉತ್ತರ ಕರ್ನಾಟಕದ ರೈತ ಹೋರಾಟಗಾರರು ಬೆಂಗಳೂರಿಗೆ ಬಂದು ಬಿಜೆಪಿ ಕಚೇರಿ ಎದುರು ಧರಣಿ ಕೂತರು. ಸಂಧಾನದ ನೆಪದಲ್ಲಿ ಸಮಾಧಾನಿಸಲು ಮುಂದಾದ ಯಡಿಯೂರಪ್ಪ ಹೋರಾಟಗಾರರ ಮಾತಿಗೆ ಉತ್ತರಿಸಲಾಗದೆ ಅಸಹಾಯಕತೆ ವ್ಯಕ್ತಪಡಿಸಿದರು. ಕೊನೆಗೆ ‘ನನ್ನಿಂದ ಸಾಧ್ಯವಿಲ್ಲ’ ಎಂದು ಬಹಿರಂಗವಾಗಿ ಒಪ್ಪಿಕೊಂಡರು. ಆ ಭಾಗದ ಜನರ ದೃಷ್ಟಿಯಲ್ಲಿ ಖಳನಾಯಕರಾದರು. ಇದು ಸಹಜವಾಗಿಯೇ ಕಾಂಗ್ರೆಸ್‌ಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸಿತು. ಸಿದ್ದರಾಮಯ್ಯ ಅವರನ್ನು ಇನ್ನಷ್ಟು ಗಟ್ಟಿಗೊಳಿಸಿತು.

ಹಾಗೆಯೇ ಪ್ರತ್ಯೇಕ ಲಿಂಗಾಯತ ಧರ್ಮದ ಬೇಡಿಕೆ ವಿಷಯವೂ ಕೂಡ ಬಿಜೆಪಿಗೆ ಭಾರೀ ಹೊಡೆತವನ್ನೇ ಕೊಟ್ಟಿದೆ. ಉತ್ತರ ಕರ್ನಾಟಕದ ಲಿಂಗಾಯತ ಸಮುದಾಯ ಯಡಿಯೂರಪ್ಪನವರ ಬೆಂಬಲಕ್ಕಿದೆ ಎಂದರಿತ ಬಿಜೆಪಿ, ಅವರನ್ನು ರಾಜ್ಯಾಧ್ಯಕ್ಷರನ್ನಾಗಿಸಿತು. 2008ರ ಫಲಿತಾಂಶ ಮರುಕಳಿಸುವ ನಿರೀಕ್ಷೆಯಲ್ಲಿತ್ತು. ಆದರೆ ಈ ಸಂದರ್ಭದಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮದ ಬೇಡಿಕೆ ಹುಟ್ಟಿತು. ಸಾಮಾನ್ಯರಿಂದ ಹಿಡಿದು ಸ್ವಾಮೀಜಿಗಳವರೆಗೆ, ಮಠಾಧೀಶ ರಿಂದ ಹಿಡಿದು ಪಂಚಪೀಠಸ್ಥರವರೆಗೆ ಎಲ್ಲರೂ ಬೀದಿಗೆ ಬಂದರು. ಪರ-ವಿರೋಧಗಳಡಿಯಲ್ಲಿ ಬಹುಸಂಖ್ಯಾತ ಲಿಂಗಾಯತರು ಇಬ್ಭಾಗವಾದರು. ಹೋರಾಟ, ಜಾಥಾ, ರ್ಯಾಲಿ, ಸಭೆ ಸಮಾರಂಭಗಳಾದವು. ಆದರೆ ಲಿಂಗಾಯತರ ಪ್ರಶ್ನಾತೀತ ನಾಯಕ ಎನಿಸಿಕೊಂಡ ಯಡಿಯೂರಪ್ಪನವರು ಪರ-ವಿರೋಧ ಮಾತನಾಡದ, ಯಾವ ನಿಲುವನ್ನೂ ತಾಳದ ಅಸಹಾಯಕ ಸ್ಥಿತಿಗೆ ದೂಡಲ್ಪಟ್ಟರು. ಬಹುಸಂಖ್ಯಾತ ಲಿಂಗಾಯತ ಸಮುದಾಯ ಗೊಂದಲಕ್ಕೆ ಬಿತ್ತು. ಇದು ಕೂಡ ರಾಜಕೀಯವಾಗಿ ಸಿದ್ದರಾಮಯ್ಯನವರಿಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸಿತು.

ಇಲ್ಲಿ ಗಮನಿಸಬೇಕಾದ ಮುಖ್ಯವಾದ ಸಂಗತಿ ಎಂದರೆ, ಈ ಎರಡೂ ವಿವಾದಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ನೇರ ಪಾತ್ರವಿಲ್ಲದ್ದು ಮತ್ತು ಹಿನ್ನೆಲೆಯಲ್ಲಿ ನಿಂತುಕೊಂಡೇ ಸೂಕ್ಷ್ಮವಾಗಿ ಸಂಭಾಳಿಸಿದ್ದು.

ಇವೆರಡೇ ಅಲ್ಲ, 2013ರಲ್ಲಿ ರಾಜ್ಯದ 22ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಗಳಿಗೆಯಿಂದ ಎದುರಾದ- ಡಿ ನೋಟಿಫಿಕೇಷನ್, ಹ್ಯೂಬ್ಲೊಟ್ ವಾಚ್, ಮಗನ ಭೂ ಹಗರಣ, ತೀರ್ಥಹಳ್ಳಿ ನಂದಿತಾ ಕೇಸ್, ಲೋಕಾಯುಕ್ತಕ್ಕೆ ಬೀಗ ಜಡಿದಿದ್ದನ್ನು ಸದನದಲ್ಲಿ ಏಕಾಂಗಿಯಾಗಿ ನಿಂತು ಸಮರ್ಥಿಸಿಕೊಂಡರು. ಬಿಡಿಎ ಬರಿದು ಮಾಡಿದ ಶ್ಯಾಂ ಭಟ್‌ರನ್ನು ಕೆಪಿಎಸ್ಸಿ ಛೇರ್ಮನ್ ಮಾಡಿದ್ದು; ಹಲವರ ವಿರೋಧಗಳ ನಡುವೆಯೂ ಕುರುಬ ಕೆಂಪಯ್ಯರನ್ನು ಡಿಫ್ಯಾಕ್ಟೋ ಗೃಹ ಸಚಿವರನ್ನಾಗಿಸಿದ್ದು; ಬಹುಮತವಿಲ್ಲದಿದ್ದರೂ ಜೆಡಿಎಸ್‌ನೊಂದಿಗೆ ಹೊಂದಾಣಿಕೆ ಮಾಡಿಕೊಂಡು ಬಿಬಿಎಂಪಿ ಅಧಿಕಾರ ಹಿಡಿದದ್ದನ್ನು ಕೂಡ ಅರಗಿಸಿಕೊಂಡರು. ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್‌ಗೆ ಸಚಿವ ಸ್ಥಾನ ಕೊಡದೆ ಸತಾಯಿಸಿದ್ದು, ಶ್ರೀನಿವಾಸ್ ಪ್ರಸಾದ್‌ರನ್ನು ಸಚಿವ ಸಂಪುಟದಿಂದ ಕೈ ಬಿಟ್ಟಿದ್ದು, ದಲಿತ ವಿರೋಧಿ ಎಂಬ ಕೂಗು ಕೇಳಿಬಂದಾಗ ಪ್ರಿಯಾಂಕ್‌ರನ್ನು ಮಂತ್ರಿ ಮಾಡಿ ಮಲ್ಲಿಕಾರ್ಜುನ ಖರ್ಗೆ ಯನ್ನು ಸುಮ್ಮನಿರಿಸಿದ್ದು, ಸಾಮಾನ್ಯವಾದ ಸಂಗತಿಯಲ್ಲ. ಒಕ್ಕಲಿಗ ನಾಯಕ ಎಸ್.ಎಂ.ಕೃಷ್ಣ ಕಾಂಗ್ರೆಸ್ ತೊರೆದಾಗ, ಅಬ್ಬರದ ಅಂಬರೀಷ್‌ರನ್ನು ಸಚಿವ ಸ್ಥಾನದಿಂದ ಕೈ ಬಿಟ್ಟಾಗ ಭುಗಿಲೇಳಬಹುದಾದ ಒಕ್ಕಲಿಗ ಸಮುದಾಯದ ಆಕ್ರೋಶವನ್ನು ಶಮನಗೊಳಿಸಲು ಡಿ.ಕೆ.ಶಿವಕುಮಾರ್‌ಗೆ ಹೆಚ್ಚಿನ ಪ್ರಾಶಸ್ತ್ಯ ಕೊಟ್ಟಿದ್ದು, ಜೆಡಿಎಸ್‌ನ ದೇವೇಗೌಡರನ್ನು ಆತ್ಮೀಯವಾಗಿ ಅಪ್ಪಿಕೊಂಡದ್ದು, ಅಸಾಮಾನ್ಯ ರಾಜಕೀಯ ನಡೆಯಾಗಿ ಕಾಣತೊಡಗಿತು. ಪಕ್ಷದೊಳಗಿನ ಮೂಲ ಮತ್ತು ವಲಸಿಗರ ನಡುವಿನ ತಿಕ್ಕಾಟವನ್ನು ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡದ್ದು ಬುದ್ಧಿವಂತಿಕೆಯನ್ನು ಬಿಂಬಿಸಿತ್ತು. ಡಿ.ಕೆ.ರವಿ ಆತ್ಮಹತ್ಯೆ, ಮಡಿಕೇರಿ ಟಿಪ್ಪುಗಲಭೆ, ಕರಾವಳಿ ಕೊಲೆಗಳು, ಎಚ್.ವೈ.ಮೇಟಿ ಸೆಕ್ಸ್ ಸಿಡಿ, ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ, ಸ್ಟೀಲ್ ಬ್ರಿಡ್ಜ್ ವಿರೋಧವನ್ನೂ ಧೈರ್ಯ ವಾಗಿ ಎದುರಿಸಿ ವಿರೋಧಿಗಳ ಬಾಯಿ ಮುಚ್ಚಿಸಿದರು.

ಅಧಿಕಾರದುದ್ದಕ್ಕೂ ಎದುರಾದ ಎಡರು ತೊಡರುಗಳನ್ನು ಸಿದ್ದರಾಮಯ್ಯನವರು, ತಮ್ಮ ಅಪಾರ ರಾಜಕೀಯ ಅನುಭವ ಮತ್ತು ಚಾಣಾಕ್ಷತನದಿಂದ ನಿರ್ವಹಿಸಿದ ರೀತಿ, ಈಗ ರಾಜಕೀಯ ವಿಶ್ಲೇಷಕರ ವಸ್ತುವಾಗಿದೆ. ರಾಮಕೃಷ್ಣ ಹೆಗಡೆ, ಎಚ್.ಡಿ.ದೇವೇಗೌಡ ಮತ್ತು ಎಸ್.ಎಂ.ಕೃಷ್ಣರಿಗಿಂತ ಮೆಚ್ಯೂರ್ಡ್ ಪಾಲಿಟಿಷಿಯನ್ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.

ಕರ್ನಾಟಕದ ರಾಜಕಾರಣದಲ್ಲಿ ಬಹುಸಂಖ್ಯಾತರೂ, ಬಲಾಢ್ಯರೂ ಆದ ಲಿಂಗಾಯತರು, ಒಕ್ಕಲಿಗರದೇ ದರ್ಬಾರು. ಹಿಂದುಳಿದ ಜಾತಿ ಜನಾಂಗಗಳಿಂದ ಬಂದ ನಾಯಕರು ಉನ್ನತ ಸ್ಥಾನವನ್ನ ಅಲಂಕರಿಸಲು ಅಡ್ಡಗಾಲು ಹಾಕುವುದನ್ನು ಕಂಡಿದ್ದ ಸಿದ್ದರಾಮಯ್ಯನವರು, ಈಗ ಆ ಸಮುದಾಯಗಳ ಒಗ್ಗಟ್ಟನ್ನು ರಾಜಕೀಯ ತಂತ್ರಗಾರಿಕೆಯ ಮೂಲಕ ಮುರಿಯುವಲ್ಲಿ, ಮೂರೂ ಪಕ್ಷಗಳಲ್ಲಿ ಹರಿದು ಹಂಚಿಹೋಗುವಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನು ತಮ್ಮದೇ ಜಾತಿಯ ಕುರುಬರು ತಮ್ಮೊಂದಿಗಿರುತ್ತಾರೆಂದು ಹಾಗೂ ದಲಿತರು-ಮುಸ್ಲಿಮರು ಕಾಂಗ್ರೆಸ್ ಬಿಟ್ಟು ಇನ್ನೆಲ್ಲಿಗೆ ಹೋಗುತ್ತಾರೆಂದು ಪ್ರಜ್ಞಾ ಪೂರ್ವಕವಾಗಿಯೇ ನಿರ್ಲಕ್ಷಿಸಿದ್ದಾರೆ. ಇದೇ ಸಂದರ್ಭದಲ್ಲಿ ಪ್ರಬಲ ಬಿಜೆಪಿ ಗುಂಪುಗಾರಿಕೆಗೆ ಬಲಿಯಾಗಿ, ವಿರೋಧ ಪಕ್ಷದ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಲಾಗದೆ ನಿಸ್ತೇಜವಾಗಿದೆ.

ಜೆಡಿಎಸ್ ಸೀಮಿತ ಕ್ಷೇತ್ರಗಳತ್ತ ಗಮನ ಹರಿಸಿ, ಉಪಮುಖ್ಯಮಂತ್ರಿ ಸ್ಥಾನ ಸಿಕ್ಕಿದರೆ ಸಾಕು ಎಂಬ ಲೆಕ್ಕಾಚಾರದಲ್ಲಿದೆ. ಇನ್ನು ಕಾಂಗ್ರೆಸ್‌ನೊಳಗೇ ಇರುವ ಮುಖ್ಯಮಂತ್ರಿ ಆಕಾಂಕ್ಷಿಗಳಾದ ಡಿ.ಕೆ.ಶಿವಕುಮಾರ್, ಆರ್.ವಿ.ದೇಶಪಾಂಡೆಯವರ ಬಳಿ ಹಣವಿದ್ದು, ಜನಬಲವಿಲ್ಲದಂತಾಗಿದೆ. ಅರ್ಹ, ಯೋಗ್ಯ ಮಲ್ಲಿಕಾರ್ಜುನ ಖರ್ಗೆಯವರಿಗೆ ವೇದಿಕೆ ಇನ್ನೂ ಸಿದ್ಧವಾಗಿಲ್ಲ. ಇನ್ನು ಎಚ್.ಕೆ.ಪಾಟೀಲ್, ಜಯಚಂದ್ರ ರೇಸ್‌ನಲ್ಲಿ ಇದ್ದರು ಎಂಬುದಕ್ಕಷ್ಟೇ ಸಮಾಧಾನಪಟ್ಟುಕೊಳ್ಳುವಂತಾಗಿದೆ. ಇವೆಲ್ಲ ಕಾರಣಗಳಿಂದ, ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಇನ್ನೈದು ವರ್ಷಗಳ ಕಾಲ ಮುಂದುವರಿಯಲು ಯಾವ ಅಡ್ಡಿ ಆತಂಕಗಳಿಲ್ಲ ಎನ್ನುವ ವಾತಾವರಣ ಸೃಷ್ಟಿಯಾಗಿದೆ. ಜೊತೆಗೆ ಅದೃಷ್ಟವೂ ಕೂಡಿ ಬಂದಿದೆ.

ಹಾಗಾಗಿ ಕಳೆದ ಬಾರಿಯ ‘ಈ ಚುನಾವಣೆಯೇ ಕೊನೆ’ ಎಂಬುದನ್ನು ಈಗ ಹಿಂದಕ್ಕೆ ಸರಿಸಿರುವ ಸಿದ್ದರಾಮಯ್ಯನವರಲ್ಲಿ ‘ಒಂದು ಕೈ ನೋಡೋಣ’ ಎಂಬ ಉಮೇದು ಉಕ್ಕಿದೆ. ಪ್ರತಿಪಕ್ಷಗಳನ್ನು ಎದುರಿಸುತ್ತಿರುವ ರೀತಿ, ಸಾಧನಾ ಸಮಾವೇಶಗಳಿಗೆ ಸಿಗುತ್ತಿರುವ ಜನಬೆಂಬಲ ಅದಕ್ಕೆ ಪುಷ್ಟಿ ಕೊಟ್ಟಿದೆ. 2018ರ ಚುನಾವಣೆಯ ನೇತೃತ್ವ ತಾನಾಗಿಯೇ ಬಂದು ಹೆಗಲೇರಿದೆ.

ಹಾಗೆ ನೋಡಿದರೆ ಸಿದ್ದರಾಮಯ್ಯ ಮೀಡಿಯಾಗಳನ್ನು ಮ್ಯಾನೇಜ್ ಮಾಡಿದವರಲ್ಲ. ಕಾಲಕಾಲಕ್ಕೆ ಹೈಕಮಾಂಡನ್ನು ಸಂತೃಪ್ತರನ್ನಾಗಿಸಿದರೂ ಕಡು ಭ್ರಷ್ಟರ ಪಟ್ಟಿಗೆ ಸೇರಿದವರಲ್ಲ. ಅಹಂಕಾರ, ವ್ಯಂಗ್ಯ, ಉಡಾಫೆಯ ವ್ಯಕ್ತಿಯಂತೆ ಕಂಡರೂ ಮನುಷ್ಯತ್ವವನ್ನು ಮರೆತವರಲ್ಲ. ಸಾರ್ವಜನಿಕ ಸಭೆ, ಸಮಾರಂಭಗಳಲ್ಲಿ ನಿದ್ದೆ ಮಾಡುವವರಂತೆ ಕಂಡರೂ ಜನಪರ ಕಾಳಜಿ ಕಡೆಗಣಿಸಿದವರಲ್ಲ. ಅದಕ್ಕಿಂತಲೂ ಮುಖ್ಯವಾಗಿ ಕಳೆದ ನಾಲ್ಕೂವರೆ ವರ್ಷಗಳ ಕಾಲ ಹಲವಾರು ಜನಪರ ಯೋಜನೆಗಳನ್ನು, ಕಾರ್ಯಕ್ರಮಗಳನ್ನು ಕೊಟ್ಟರೂ ಪ್ರಚಾರ ಬಯಸಿದವರಲ್ಲ. ತಮ್ಮ ರಾಜಕೀಯ ಪ್ರಾಬಲ್ಯಕ್ಕಾಗಿ ಜಾತಿ-ಜನಾಂಗಗಳನ್ನು ಒಡೆದು ಆಳಿಸಬಹುದು, ಆದರೆ ಅಪಾಯಕಾರಿಯಲ್ಲ.

ಇಂತಹ ಸಿದ್ದರಾಮಯ್ಯನವರು ಹುಟ್ಟಿದ್ದು ಬಡವರ ಹಟ್ಟಿಯಲ್ಲಿ, 12 ಆಗಸ್ಟ್, 1948ರಲ್ಲಿ, ಮೈಸೂರು ತಾಲೂಕಿನ ವರುಣಾ ಹೋಬಳಿಯ ಸಿದ್ದರಾಮನ ಹುಂಡಿಯಲ್ಲಿ. ಓದಿದ್ದು ಬಿಎಸ್ಸಿ, ಎಲ್ಎಲ್‌ಬಿ ಪದವಿ. ಕಾನೂನು ಪದವಿ ಪಡೆದ ನಂತರ ಸಿದ್ದರಾಮಯ್ಯನವರು ಮೈಸೂರಿನಲ್ಲಿ ಬಡವರ ಪರವಾಗಿ ವಕಾಲತ್ತು ವಹಿಸುವ ಮೂಲಕ ಜನಪ್ರಿಯ ವಕೀಲರೆಂದೇ ಹೆಸರು ಗಳಿಸಿದ್ದರು. ಅದಕ್ಕೆ ಕಾರಣ ಅವರ ಸಮಾಜವಾದಿ ಹಿನ್ನೆಲೆ ಹಾಗೂ ಎಡಪಂಥೀಯ ವಿಚಾರಧಾರೆ. ಜೊತೆಗೆ ರಾಮ ಮನೋಹರ ಲೋಹಿಯಾ ಮತ್ತು ಜಯಪ್ರಕಾಶ್ ನಾರಾಯಣ್ ಅವರ ಚಿಂತನೆಗಳ ಪ್ರಭಾವ. ಹಾಗೂ ರೈತನಾಯಕ ಪ್ರೊ.ಎಂ.ಡಿ.ನಂಜುಂಡಸ್ವಾಮಿಯವರ ಹೋರಾಟಗಳನ್ನು ಬಹಳ ಹತ್ತಿರದಿಂದ ಕಂಡಿದ್ದು.

ಜನರೊಂದಿಗೆ ಬೆರೆತು ಜನಾನುರಾಗಿಯಾಗಿದ್ದ ಕಾರಣಕ್ಕಾಗಿಯೇ 1978 ರಲ್ಲಿ ರಾಜಕೀಯ ರಂಗಕ್ಕೆ ಧುಮುಕಿ, ತಾಲೂಕ್ ಬೋರ್ಡ್ ಮೆಂಬರ್ ಆದರು. ಆನಂತರ 1983ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಮೊತ್ತ ಮೊದಲ ಬಾರಿಗೆ ಭಾರತೀಯ ಲೋಕದಳ ಪಕ್ಷದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಗೆದ್ದ ಸಿದ್ದರಾಮಯ್ಯನವರು, ಆ ನಂತರ ರಾಮಕೃಷ್ಣ ಹೆಗಡೆಯವರ ನೇತೃತ್ವದಲ್ಲಿ ಜನತಾ ಪಕ್ಷ ಸೇರಿ ಕನ್ನಡ ಕಾವಲು ಸಮಿತಿಯ ಅಧ್ಯಕ್ಷರಾಗಿ ಕರ್ನಾಟಕದಾದ್ಯಂತ ಪರಿಚಿತರಾದರು. 1985ರಲ್ಲಿ ಮತ್ತೆ ಶಾಸಕರಾಗಿ ಚುನಾಯಿತರಾದ ಸಿದ್ದರಾಮಯ್ಯನವರು, ಮೊದಲ ಬಾರಿಗೆ ಪಶು ಸಂಗೋಪನಾ ಖಾತೆ ಸಚಿವರಾದರು. ಆ ಖಾತೆಯನ್ನು ದಕ್ಷತೆಯಿಂದ ನಿರ್ವಹಿಸಿದ್ದನ್ನು ಕಂಡ ಹೆಗಡೆಯವರು, ಪಶು ಸಂಗೋಪನೆಯ ಜೊತೆಗೆ ರೇಷ್ಮೆ ಮತ್ತು ಸಾರಿಗೆ ಖಾತೆಗಳನ್ನೂ ನೀಡಿ ಪ್ರೋತ್ಸಾಹಿಸಿದರು. ಮುಂದೆ ದೇವೇಗೌಡರೊಂದಿಗೆ ಸೇರಿದ್ದು, ರಾಜ್ಯ ಸುತ್ತಿದ್ದು, ಹಣಕಾಸು ಸಚಿವರಾಗಿ 6 ಬಾರಿ ಬಜೆಟ್ ಮಂಡಿಸಿದ್ದು, ಉಪಮುಖ್ಯಮಂತ್ರಿಯಾಗಿದ್ದು, ಅಹಿಂದ ಮಾಡಲು ಹೋಗಿ ಪಕ್ಷದಿಂದ ಹೊರಬಿದ್ದದ್ದು, ಕಾಂಗ್ರೆಸ್ ಸೇರಿ ಮುಖ್ಯಮಂತ್ರಿಯಾಗಿದ್ದು ಈಗ ಇತಿಹಾಸ.

ಕಳೆದ ನಾಲ್ಕೂವರೆ ವರ್ಷಗಳ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಡಳಿತದಲ್ಲಿ ಹಲವು ಲೋಪದೋಷಗಳಿರಬಹುದು. ಆರಾಮ ಖೋರ ಕಾಂಗ್ರೆಸ್‌ಗರು ಭ್ರಷ್ಟಾಚಾರದಲ್ಲಿ ಭಾಗಿಯಾಗಿರಬಹುದು. ಆದರೆ ಅವುಗಳನ್ನು ಸೂಕ್ತ ಸಮಯದಲ್ಲಿ ಬಯಲಿಗೆಳೆದು ಜನರಲ್ಲಿ ಜಾಗೃತಿಯನ್ನುಂಟುಮಾಡುವ ನಿಟ್ಟಿನಲ್ಲಿ ವಿರೋಧ ಪಕ್ಷಗಳು ವಿಫಲವಾಗಿರುವುದು ಎದ್ದು ಕಾಣುತ್ತಿದೆ. ಅಷ್ಟೇ ಅಲ್ಲ, ಬೇರೆ ರಾಜ್ಯಗಳ ಸ್ಥಿತಿಗತಿಗಳತ್ತ ಗಮನಹರಿಸಿದರೆ ಕರ್ನಾಟಕ ನಿಜಕ್ಕೂ ಉತ್ತಮ ಸ್ಥಿತಿಯಲ್ಲಿರುವುದು ಗೋಚರಿಸುತ್ತದೆ. ಅದರಲ್ಲೂ ಶಾಂತಿ ಸುವ್ಯವಸ್ಥೆಯ ವಿಷಯದಲ್ಲಿ ಕರ್ನಾಟಕ ನಿಜಕ್ಕೂ ತಣ್ಣಗಿದೆ. ಹಾಗಂತ ಅದೇ ಕಾಂಗ್ರೆಸ್‌ನ ಹೆಚ್ಚುಗಾರಿಕೆಯಲ್ಲ. ಚುನಾವಣೆಯನ್ನು ಗೆಲ್ಲಲು ಅದಷ್ಟೇ ಸಾಕಾಗುವುದಿಲ್ಲ. ಆದರೆ ದೇಶದಲ್ಲಿ ಚಾಲ್ತಿಯಲ್ಲಿರುವ ದೇವರು-ದೇಶಭಕ್ತಿ-ಧರ್ಮದ ರಾಜಕಾರಣಕ್ಕೆ, ಬಿಜೆಪಿಯ ಬೆಂಕಿ ಹಚ್ಚುವ ಕಿಡಿಗೇಡಿತನಕ್ಕೆ ಸಮರ್ಥವಾಗಿ ಉತ್ತರ ಕೊಡಬಲ್ಲ ನಾಯಕನ ಅಗತ್ಯ, ಹಿಂದೆಂದಿಗಿಂತಲೂ ಇಂದು ಹೆಚ್ಚಿದೆ. ಸದ್ಯಕ್ಕೆ ಆ ನಾಯಕತ್ವ ಸಿದ್ದರಾಮಯ್ಯನವರಲ್ಲಿ ಕಾಣುತ್ತಿದೆ. ಕಾದು ನೋಡೋಣ.

Writer - -ಬಸು ಮೇಗಲಕೇರಿ

contributor

Editor - -ಬಸು ಮೇಗಲಕೇರಿ

contributor

Similar News