ಪುರುಷ ರಕ್ಷಕರಿಲ್ಲದೆ ಮುಸ್ಲಿಂ ಮಹಿಳೆಯರಿಗೆ ಹಜ್ ಯಾತ್ರೆಗೆ ಅವಕಾಶ: ಮೋದಿ

Update: 2017-12-31 14:21 GMT

ಹೊಸದಿಲ್ಲಿ, ಡಿ.31: ಇನ್ನುಮುಂದೆ ಹಜ್ ಯಾತ್ರೆಯನ್ನು 45 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ಪುರುಷರ ಸಹಾಯವಿಲ್ಲದೆ ಒಂಟಿಯಾಗಿ ಕೈಗೊಳ್ಳಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ಮುಸ್ಲಿಂ ಮಹಿಳೆಯರು ಪುರುಷರ ಸಹಾಯವಿದ್ದರೆ ಮಾತ್ರ ಹಜ್ ಯಾತ್ರೆ ಕೈಗೊಳ್ಳಬಹುದು ಎಂಬ ನೀತಿ ಅನ್ಯಾಯವಾಗಿದ್ದು, ಈ ನಿರ್ಬಂಧವನ್ನು ಕೇಂದ್ರ ಸರಕಾರ ರದ್ದುಗೊಳಿಸಿದೆ. ಇದೀಗ ನೂರಾರು ಮಹಿಳೆಯರು ಒಂಟಿಯಾಗಿ ಹಜ್ ಯಾತ್ರೆ ಕೈಗೊಳ್ಳಲು ಅರ್ಜಿ ಸಲ್ಲಿಸಿದ್ದಾರೆ ಎಂದರು.

 45 ವರ್ಷಕ್ಕಿಂತ ಮೇಲ್ಪಟ್ಟ , ಕನಿಷ್ಟ ನಾಲ್ವರು ಮಹಿಳೆಯರು ಪುರುಷ ರಕ್ಷಕರ ನೆರವಿಲ್ಲದೆ ಹಜ್ ಯಾತ್ರೆ ಕೈಗೊಳ್ಳಬಹುದು ಎಂದು ಅಲ್ಪಸಂಖ್ಯಾತರ ಸಚಿವಾಲಯ ತಿಳಿಸಿದೆ ಎಂದು ಮೋದಿ ಹೇಳಿದರು.

    ಈ ನಿರ್ಬಂಧ ರದ್ದುಗೊಳಿಸಿರುವುದು ಮೇಲ್ನೋಟಕ್ಕೆ ಸಣ್ಣ ವಿಷಯವೆಂದು ತೋರಬಹುದು. ಆದರೆ ಇಂತಹ ಪ್ರಕರಣಗಳು ಸಮಾಜದ ಮೇಲೆ ಬಹುದೂರದ ಪರಿಣಾಮವುಳ್ಳ ಪ್ರಭಾವವನ್ನು ಬೀರುತ್ತದೆ. ಇಂತಹ ನಿಯಮವನ್ನು ಯಾರು ರೂಪಿಸಿದರು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಸ್ವಾತಂತ್ರ್ಯ ದೊರೆತ 70 ವರ್ಷದ ಬಳಿಕವೂ ನಾವು ಈ ನಿರ್ಬಂಧಗಳನ್ನು ವಿಧಿಸುತ್ತಾ ಬಂದಿರುವುದನ್ನು ಕಂಡು ಅಚ್ಚರಿಯಾಗಿದೆ . ಹಲವಾರು ಮುಸ್ಲಿಮ್ ದೇಶಗಳಲ್ಲಿ ಇಂತಹ ನಿರ್ಬಂಧ ಅಸ್ತಿತ್ವದಲ್ಲಿಲ್ಲ . ಈ ವರ್ಷ ದೇಶದ ವಿವಿಧೆಡೆಯ 1300ಕ್ಕೂ ಹೆಚ್ಚು ಮಹಿಳೆಯರು ಪುರುಷ ರಕ್ಷಕರ ಹೊರತಾಗಿ ಹಜ್ ಯಾತ್ರೆ ಕೈಗೊಳ್ಳಲು ಅರ್ಜಿ ಸಲ್ಲಿಸಿದ್ದಾರೆ ಎಂದವರು ಹೇಳಿದರು.

  ಸಾಮಾನ್ಯವಾಗಿ ಹಜ್ ಯಾತ್ರಾರ್ಥಿಗಳನ್ನು ಆಯ್ಕೆ ಮಾಡಲು ಲಾಟರಿ ಪ್ರಕ್ರಿಯೆ ನಡೆಸಲಾಗುತ್ತದೆ. ಒಂಟಿ ಮಹಿಳಾ ಯಾತ್ರಾರ್ಥಿಗಳನ್ನು ಲಾಟರಿ ಪ್ರಕ್ರಿಯೆಯಿಂದ ಹೊರತುಪಡಿಸಿ, ಅವರಿಗೆ ವಿಶೇಷ ವಿಭಾಗದಲ್ಲಿ ಅವಕಾಶ ಮಾಡಿಕೊಡಬೇಕಾಗಿದೆ ಎಂದು ಮೋದಿ ತಿಳಿಸಿದರು. ಮಹಿಳಾ ಸಶಕ್ತೀಕರಣದ ಮೂಲಕ ಭಾರತದ ಅಭಿವೃದ್ಧಿಯ ಪ್ರಯಾಣ ಸಾಧ್ಯವಾಗುತ್ತದೆ ಎಂದು ಇದೇ ಸಂದರ್ಭ ಪ್ರಧಾನಿ ತಿಳಿಸಿದರು.

    ಬಳಿಕ ವೀಡಿಯೊ ಕಾನ್ಫರೆನ್ಸ್ ಮೂಲಕ ಕೇರಳದ ಶಿವಗಿರಿ ಮಠದ 85ನೇ ಶಿವಗಿರಿ ಯಾತ್ರೆ ಸಮಾರಂಭವನ್ನು ಮೋದಿ ಉದ್ಘಾಟಿಸಿದರು. ಕ್ರಿಸ್‌ಮಸ್ ಸಂದೇಶ ನೀಡಿದ ಪ್ರಧಾನಿ, ಯೇಸು ಕ್ರಿಸ್ತರು ‘ಸೇವೆಯ ಭಾವ’ದ ಬಗ್ಗೆ ತಿಳಿಹೇಳಿದ ಮಹಾತ್ಮರು ಎಂದರು. ಸಿಖ್ ಗುರು ಗುರು ಗೋವಿಂದ್ ಸಿಂಗ್ ಅವರ 350ನೇ ಜನ್ಮದಿನಾಚರಣೆ ಸಂದರ್ಭ ಸಿಖ್ ಜನತೆಗೆ ಶುಭ ಹಾರೈಸಿದ ಪ್ರಧಾನಿ, ಗುರುಗೋವಿಂದ್ ಸಿಂಗ್ ಉನ್ನತಪಂಕ್ತಿಯ ಮಾನವೀಯತೆಯ ಮೌಲ್ಯಗಳನ್ನು ಪ್ರತಿಪಾದಿಸಿ ತಮ್ಮ ಜೀವನದಲ್ಲಿ ಪಾಲಿಸಿಕೊಂಡು ಬಂದಿದ್ದರು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News