ಸಂವಿಧಾನ ಬದಲಾಯಿಸಲು ಯತ್ನಿಸಿದವರನ್ನು, ನಾವು ಬದಲಾಯಿಸುತ್ತೇವೆ: ಕೇಂದ್ರ ಸಚಿವ ಅಠಾವಳೆ

Update: 2018-01-01 16:14 GMT

ಪುಣೆ, ಜ.1: ಸಚಿವ ಅನಂತ್ ಕುಮಾರ್ ಹೆಗಡೆ ಅವರ ಇತ್ತೀಚೆಗಿನ ಹೇಳಿಕೆ ಕುರಿತು ಕೇಂದ್ರ ಸಚಿವಾಲಯದ ಅವರ ಸಹೋದ್ಯೋಗಿ, ಸಾಮಾಜಿಕ ನ್ಯಾಯ ಖಾತೆಯ ಸಹಾಯಕ ಸಚಿವ ರಾಮದಾಸ್ ಅಠಾವಳೆೆ, ಭಾರತದ ಸಂವಿಧಾನವನ್ನು ಬದಲಾಯಿಸಲು ಸಾಧ್ಯವಿಲ್ಲ ಹಾಗೂ ಅಂತಹದ್ದು ಸಂಭವಿಸಲು ನಾನು ಬಿಡುವುದಿಲ್ಲ ಎಂದಿದ್ದಾರೆ.

ವಿವಾದಕ್ಕೆ ಕಾರಣವಾದ ಹೆಗಡೆ ಹೇಳಿಕೆ ಬಗ್ಗೆ ಪುಣೆಯಲ್ಲಿ ರವಿವಾರ ನಡೆದ ಮಾಧ್ಯಮ ಸಮಾವೇಶದಲ್ಲಿ ಪ್ರತಿಕ್ರಿಯಿಸಿದ ಅಠಾವಳೆ, ಸಂವಿಧಾನವನ್ನು ಯಾರಾದರೂ ಬದಲಾಯಿಸಲು ಪ್ರಯತ್ನಿಸಿದರೆ, ನಾವು ಅವರನ್ನು ಬದಲಾಯಿಸಲಿದ್ದೇವೆ ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಸಂವಿಧಾನವನ್ನು ಪವಿತ್ರ ಗ್ರಂಥ ಎಂದು ಪರಿಗಣಿಸಿದ್ದಾರೆ ಹಾಗೂ ಹೆಗಡೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಿಜೆಪಿಯಲ್ಲಿ ಮನವಿ ಮಾಡಿದ್ದೇನೆ ಎಂದು ಅವರು ಹೇಳಿದರು.

 ಎಸ್‌ಸಿ/ಎಸ್‌ಟಿ ಮೀಸಲಾತಿಯನ್ನು ಕೇಂದ್ರ ಸರಕಾರ ಸ್ಥಗಿತಗೊಳಿಸುತ್ತದೆ ಎಂಬ ವದಂತಿ ತಳ್ಳಿ ಹಾಕಿದ ಅಠಾವಳೆ, ದಲಿತರ ಹಕ್ಕುಗಳನ್ನು ರಕ್ಷಿಸಲು ನಾನು ಕೇಂದ್ರ ಸರಕಾರದಲ್ಲಿ ಇದ್ದೇನೆ ಎಂದರು.

ಗುಜರಾತ್‌ನಲ್ಲಿ ಆರ್‌ಪಿಐ ಬಿಜೆಪಿಯನ್ನು ಬೆಂಬಲಿಸಿದೆ ಹಾಗೂ ಬಿಜೆಪಿ ಬಹುಮತ ಪಡೆಯಲು ನೆರವು ನೀಡಿದೆ. ಅಲ್ಲಿ ದಲಿತರು ಬಿಜೆಪಿಯ ಪರವಾಗಿ ಇರಲಿಲ್ಲ. ಆದರೆ, ಈಗ ನರೇಂದ್ರ ಮೋದಿ ಅವರು ಎಲ್ಲರನ್ನು ಒಳಗೊಳ್ಳುವ ನಾಯಕತ್ವ ಆಗಿರುವುದರಿಂದ ಬೆಂಬಲ ನೀಡುತ್ತಿದ್ದಾರೆ ಎಂದು ಅಠಾವಳೆ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News