×
Ad

ಬೆಂಗಳೂರು: ಮೂರ ಕಡೆ ಸರಗಳ್ಳತನ

Update: 2018-01-02 18:15 IST

ಬೆಂಗಳೂರು, ಜ.2: ವಾಯು ವಿಹಾರಕ್ಕೆ ತೆರಳುವ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ಮೂರು ಕಡೆ ಮೂವರು ಮಹಿಳೆಯರ ಸರ ಕಳವು ಮಾಡಿರುವ ಪ್ರಕರಣ ನಗರ ವ್ಯಾಪ್ತಿಯಲ್ಲಿ ನಡೆದಿದೆ.

ಸುಬ್ರಹ್ಮಣ್ಯನಗರ: ಮನೆ ಮುಂದೆ ರಂಗೋಲಿ ಹಾಕುವ ಸಲುವಾಗಿ ಮಹಿಳೆ ನೀರು ಹಾಕುತ್ತಿದ್ದಾಗ ಹಿಂದಿನಿಂದ ಬಂದ ದುಷ್ಕರ್ಮಿಯೊಬ್ಬ ಇವರ 85 ಗ್ರಾಂ ಸರ ಕಿತ್ತುಕೊಂಡು ಪರಾರಿಯಾಗಿದ್ದಾನೆ ಎನ್ನಲಾಗಿದೆ.

ರಾಜಾಜಿನಗರ 2ನೆ ಕ್ರಾಸ್‌ನ 17ನೆ ಮುಖ್ಯರಸ್ತೆ, ಎಸ್‌ಎಲ್‌ಎನ್ ಕ್ಯಾಂಟಿನ್ ಸಮೀಪದ ನಿವಾಸಿ ವೀಣಾ ಎಂಬುವರು ಮಂಗಳವಾರ ಬೆಳಗ್ಗೆ 6:15ರಲ್ಲಿ ಮನೆ ಮುಂದೆ ನೀರು ಹಾಕುತ್ತಿದ್ದರು. ಈ ವೇಳೆ ಸರಗಳ್ಳತನ ನಡೆದಿದೆ ಎಂದು ತಿಳಿದುಬಂದಿದೆ.

ಸುದ್ದಗುಂಟೆ ಪಾಳ್ಯ: ಬಿಟಿಎಂ ಲೇಔಟ್ 1ನೆ ಹಂತ, 7ನೆ ಎ ಮುಖ್ಯರಸ್ತೆ, ಸಾಯಿಬಾಬಾ ದೇವಸ್ಥಾನ ಸಮೀಪದ ನಿವಾಸಿ ನಿರ್ಮಲಾ ಎಂಬುವರು ಇಂದು ಬೆಳಗ್ಗೆ 7:20ರಲ್ಲಿ ಮನೆ ಮುಂದೆ ನೀರು ಹಾಕುತ್ತಿದ್ದರು. ಈ ವೇಳೆ ಆ್ಯಕ್ಟೀವ್ ಹೋಂಡಾ ಸ್ಕೂಟರ್‌ನಲ್ಲಿ ಬಂದ ದುಷ್ಕರ್ಮಿಗಳು ಸಮಯ ಸಾಧಿಸಿ 60 ಗ್ರಾಂ ಸರ ಕಿತ್ತುಕೊಂಡು ಪರಾರಿಯಾಗಿದ್ದಾನೆ. ಸಹಾಯಕ್ಕಾಗಿ ಕೂಗಿಕೊಂಡಿದ್ದು, ನೆರೆಹೊರೆಯವರು ಬರುವಷ್ಟರಲ್ಲಿ ಅಲ್ಲಿಂದ ಪರಾರಿಯಾಗಿದ್ದಾನ ಎನ್ನಲಾಗಿದೆ.

ಬಾಗಲಗುಂಟೆ: ವಾಯು ವಿಹಾರಕ್ಕೆ ಹೋಗುತ್ತಿದ್ದ ಮಹಿಳೆಯನ್ನು ಬೈಕ್‌ನಲ್ಲಿ ಹಿಂಬಾಲಿಸಿದ ವ್ಯಕ್ತಿಯೊಬ್ಬ ಇವರ ಕೊರಳಲ್ಲಿದ್ದ ಸರದ ಪೈಕಿ 35 ಗ್ರಾಂ ಸರ ಕಿತ್ತುಕೊಂಡು ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಹಾವನೂರು ಬಡಾವಣೆಯ ಸೌಂದರ್ಯ ಶಾಲೆ ಸಮೀಪದ ನಿವಾಸಿ ಗಂಗಾಂಬಿಕೆ(53) ಎಂಬುವರು ಮಂಗಳವಾರ ಬೆಳಗ್ಗೆ 7:15ರಲ್ಲಿ ವಾಯು ವಿಹಾರಕ್ಕೆಂದು ತೆರಳುತ್ತಿದ್ದರು.
ಮನೆಯಿಂದ ಸ್ವಲ್ಪದೂರ ಹೋಗುತ್ತಿದ್ದಂತೆ ಬೈಕ್‌ನಲ್ಲಿ ಹಿಂಬಾಲಿಸಿದ ಸರಗಳ್ಳ ಇವರ ಕೊರಳಿಗೆ ಕೈ ಹಾಕಿದ್ದಾನೆ. ತಕ್ಷಣ ಎಚ್ಚೆತ್ತುಕೊಂಡ ಗಂಗಾಂಬಿಕೆ ಸರವನ್ನು ಬಿಗಿಯಾಗಿ ಹಿಡಿದುಕೊಂಡರೂ ಸರಗಳ್ಳ ಜೋರಾಗಿ ಸರ ಎಳೆದಿದ್ದರಿಂದ ಸರ ತುಂಡಾಗಿದ್ದು, ಕೈಗೆ ಬಂದ 35 ಗ್ರಾಂ ಸರದ ತುಂಡಿನೊಂದಿಗೆ ಆತ ಪರಾರಿಯಾಗಿದ್ದಾನೆ. ತಕ್ಷಣ ಸಹಾಯಕ್ಕಾಗಿ ಕೂಗಿಕೊಂಡರೂ ಪ್ರಯೋಜನವಾಗಿಲ್ಲ ಎಂದು ತಿಳಿದುಬಂದಿದೆ.

ಪ್ರಕರಣ ಸಂಬಂಧ ಆಯಾ ಠಾಣೆ ಪೊಲೀಸರು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News