×
Ad

ಕಾರ್ಮಿಕರ ಸಾವು ಪ್ರಕರಣ: ಶೋಭಾ ಡೆವಲಪರ್ಸ್ ವಿರುದ್ಧ ಮೊಕದ್ದಮೆ ದಾಖಲಿಸಿಲು ಒತ್ತಾಯ

Update: 2018-01-02 18:48 IST

ಬೆಂಗಳೂರು, ಜ.2: ಮೂವರು ಕಟ್ಟಡ ಕಾರ್ಮಿಕರ ಸಾವು ಪ್ರಕರಣ ಸಂಬಂಧ ಶೋಭಾ ಡೆವಲಪರ್ಸ್ ಆಡಳಿತವರ್ಗ ಮತ್ತು ಗುತ್ತಿಗೆದಾರರ ವಿರುದ್ಧ ರಾಜ್ಯ ಸರಕಾರ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕೆಂದು ಕರ್ನಾಟಕ ವರ್ಕರ್ಸ್ ಯೂನಿಯನ್ ಆಗ್ರಹಿಸಿದೆ.

ಮಂಗಳವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಯೂನಿಯನ್ ಪ್ರಧಾನ ಕಾರ್ಯದರ್ಶಿ ಇ.ಕೆ.ಎನ್.ರಾಜನ್, ನಗರದ ಹೊರವಲಯದ ವರ್ತೂರಿನ ಶೋಭಾ ಡೆವಲಪರ್ಸ್ ಸಂಸ್ಥೆಗೆ ಸೇರಿದ ಶೋಭಾ ಗ್ರೀನ್ ಏಕರ್ಸ್ ವಸತಿ ಸಮೂಹ ನಿರ್ಮಾಣ ಸ್ಥಳದಲ್ಲಿ ಸುಮಾರು 2,500 ಮಂದಿ ಕಾರ್ಮಿಕರು ದುಡಿಯುತ್ತಿದ್ದಾರೆ.

ಇವರಲ್ಲಿ ಬಹುಪಾಲು ಮಂದಿ ಉತ್ತರ ಭಾರತದಿಂದ ವಲಸೆ ಬಂದವರಾಗಿದ್ದಾರೆ. ಇವರೆಲ್ಲರಿಗೂ ಕೆಲಸ ಮಾಡುವ ಸ್ಥಳದಲ್ಲಿಯೇ ವಸತಿ, ಸ್ನಾನ, ಶೌಚಾಲಯ ವ್ಯವಸ್ಥೆ ಮಾಡಲಾಗಿದೆ. ಶುಚಿತ್ವದ ಕೊರತೆಯಿಂದಾಗಿ ಅನೇಕ ಕಾರ್ಮಿಕರು ಅಸ್ವಸ್ಥರಾಗಿದ್ದಾರೆ ಎಂದು ದೂರಿದರು.

ಡಿ.29 ರಂದು ಕೆಲಸ ಮಾಡಿ ಬಂದ ಕಾರ್ಮಿಕರು ಅಡುಗೆ ತಯಾರಿಸಿ ಊಟ ಮಾಡಿದ ನಂತರ ಕೆಲವರು ಅಸ್ವಸ್ಥರಾಗಿದ್ದಾರೆ. ಇವರಲ್ಲಿ ಶ್ರೀಕಾಂತ ಸಾಹು, ದಂಡು ನಾಯಕ, ಜಿತೇಂದ್ರ ಎಂಬುವರು ಮೃತಪಟ್ಟಿದ್ದಾರೆ ಎಂದು ಹೇಳಿದರು.

ವಿಷಪೂರಿತ ನೀರು ಸೇವನೆಯಿಂದ ಕಾರ್ಮಿಕರು ಮೃತಪಟ್ಟಿದ್ದಾರೆ. ಅನೇಕ ಕಾರ್ಮಿಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯ ಬಳಿಕ ಸಂಸ್ಥೆಯವರು ಕಾರ್ಮಿಕರ ಗುರುತಿನ ಚೀಟಿ, ದಾಖಲೆಗಳನ್ನು ಹಿಂತೆಗೆದುಕೊಂಡಿದ್ದಾರೆ ಎಂದು ಆರೋಪಿಸಿದರು. ಘಟನೆ ಬಗ್ಗೆ ಮಾತನಾಡದಂತೆ ಸಂಸ್ಥೆಯವರು ಬೆದರಿಕೆ ಹಾಕಿದ ಹಿನ್ನೆಯಲ್ಲಿ ನೂರಾರು ಕಾರ್ಮಿಕರು ತಮ್ಮ ಊರುಗಳತ್ತ ಮುಖ ಮಾಡಿದ್ದಾರೆ ಎಂದರು.

ಇಂದು ಪ್ರತಿಭಟನೆ
ಶೋಭಾ ಡೆವಲಪರ್ಸ್ ಆಡಳಿತವರ್ಗ ಮತ್ತು ಗುತ್ತಿಗೆದಾರರ ವಿರುದ್ಧ ರಾಜ್ಯ ಸರಕಾರ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಮತ್ತು ಮೃತ ಕಾರ್ಮಿಕರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ವರ್ಕರ್ಸ್‌ ಯೂನಿಯನ್ ವತಿಯಿಂದ ಜ.3 ರಂದು ಬೆಳಗ್ಗೆ 10 ಗಂಟೆಗೆ ನಗರದ ಟೌನ್ ಹಾಲ್ ಬಳಿ ಪ್ರತಿಭಟನೆ ನಡೆಸಲಾಗುವುದೆಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News