×
Ad

ಬಿಜೆಪಿ ಮುಖಂಡರಿಂದ ದಾರಿ ತಪ್ಪಿಸುವ ಹುನ್ನಾರ:ಬಸವರಾಜ ಹೊರಟ್ಟಿ

Update: 2018-01-02 19:00 IST

ಬೆಂಗಳೂರು, ಜ.2: ಜೆಡಿಎಸ್ ಪಕ್ಷವನ್ನು ನೇರವಾಗಿ ಟೀಕಿಸಬಾರದೆಂದು ಹೇಳಿಕೆ ನೀಡುವ ಮೂಲಕ ಬಿಜೆಪಿ ಮುಖಂಡರು ಅಲ್ಪಸಂಖ್ಯಾತರನ್ನು ದಾರಿ ತಪ್ಪಿಸುವ ಹುನ್ನಾರಕ್ಕೆ ಕೈ ಹಾಕಿದ್ದಾರೆ ಎಂದು ಮಾಜಿ ಸಚಿವ, ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿ ಹೇಳಿದ್ದಾರೆ.

ರಾಜ್ಯದಲ್ಲಿ ಬಿಜೆಪಿ, ಕಾಂಗ್ರೆಸ್ ಪಕ್ಷಗಳನ್ನು ತಿರಸ್ಕರಿಸಿ ಪ್ರಾದೇಶಿಕ ಪಕ್ಷವಾದ ಜೆಡಿಎಸ್‌ಗೆ ಬೆಂಬಲಿಸಲು ಮತದಾರರು ಈಗಾಗಲೇ ನಿರ್ಧರಿಸಿದ್ದಾರೆ. ಆದರೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ವಿರೋಧ ಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರ ಹೇಳಿಕೆಗಳು ಅಲ್ಪಸಂಖ್ಯಾತರು ಜೆಡಿಎಸ್ ಬೆಂಬಲಿಸಬಾರದೆಂಬ ದುರುದ್ದೇಶದಿಂದ ನೀಡಿದ ಹೇಳಿಕೆಗಳನ್ನು ನಾನು ವಿರೋಧಿಸುತ್ತೇನೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಜೆಡಿಎಸ್ ಪಕ್ಷವನ್ನು ನೇರವಾಗಿ ಟೀಕಿಸಬಾರದೆಂದು ಮತ್ತು ಜಗದೀಶ್ ಶೆಟ್ಟರ್ ನಾವು ಅಣ್ಣ ತಮ್ಮಂದಿರಿದ್ದಂತೆ ಎಂಬ ಹೇಳಿಕೆಗಳು ಗಮನಿಸಿದರೆ, ಅಲ್ಪಸಂಖ್ಯಾತರ ಮತಗಳು ಜೆಡಿಎಸ್‌ಗೆ ಬರಬಾರದೆಂದು ಉದ್ದೇಶಪೂರ್ವಕವಾಗಿ ನೀಡಿದ ಹೇಳಿಕೆಗಳೆಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ.

ಕುಮಾರಸ್ವಾಮಿ ಅವರ ಆಡಳಿತ ವೈಖರಿ, ನಮ್ಮ ಪಕ್ಷದ ರೈತರ ಪರ ನಿಲುವುಗಳಿಂದಾಗಿ ಸ್ವಂತ ಬಲದ ಮೇಲೆ ರಾಜ್ಯದಲ್ಲಿ ಅಧಿಕಾರ ಹಿಡಿಯುವ ಹಂತದಲ್ಲಿರುವಾಗ, ಇಂತಹ ಗೊಂದಲಕಾರಿ ಹೇಳಿಕೆಗಳನ್ನು ನೀಡುವುದರ ಮೂಲಕ ಅಲ್ಪಸಂಖ್ಯಾತರಲ್ಲಿ ಅಭದ್ರತೆಯ ಭಾವನೆ ಸೃಷ್ಟಿಸಿ, ಜೆಡಿಎಸ್‌ಗೆ ಮತ ಹಾಕಬಾರದೆನ್ನುವ ಹುನ್ನಾರ ಈ ಹೇಳಿಕೆಗಳ ಹಿಂದೆ ಅಡಗಿದೆ ಎಂಬುದನ್ನು ಮತದಾರರು ಅರಿಯದವರೇನಲ್ಲ ಎಂದು ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.

ಜಾತ್ಯತೀತ ತತ್ವಗಳ ಮೇಲೆ ನಂಬಿಕೆ ಇಟ್ಟಿರುವ ಜೆಡಿಎಸ್ ಪಕ್ಷ ಅಲ್ಪಸಂಖ್ಯಾತರ ರಕ್ಷಣೆಗೆ ಬದ್ಧವಾಗಿದೆ.ಈಗಲಾದರೂ ಬಿಜೆಪಿ ಪಕ್ಷದವರು ಇಂತಹ ಅನಗತ್ಯ ಹೇಳಿಕೆಗಳನ್ನು ನೀಡುವದನ್ನು ನಿಲ್ಲಿಸಬೇಕು ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News