×
Ad

ಕೇಂದ್ರಕ್ಕೆ ಸರ್ವಪಕ್ಷ ನಿಯೋಗ ತೆರಳಲು ಸಿದ್ಧ: ಮುಖ್ಯಮಂತ್ರಿ

Update: 2018-01-02 19:10 IST

ಬೆಂಗಳೂರು, ಜ.2: ಮಹಾದಾಯಿ ನದಿ ನೀರು ಹಂಚಿಕೆ ವಿವಾದ ಇತ್ಯರ್ಥಕ್ಕಾಗಿ ಅಗತ್ಯವಿದ್ದರೆ ಮತ್ತೊಮ್ಮೆ ಸರ್ವಪಕ್ಷಗಳ ನಿಯೋಗವನ್ನು ಕೇಂದ್ರಕ್ಕೆ ಕರೆದುಕೊಂಡು ಹೋಗಲು ಸಿದ್ಧವಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾದಾಯಿ ವಿಚಾರದಲ್ಲಿ ಮತ್ತೆ ಸರ್ವಪಕ್ಷ ಸಭೆ ಕರೆಯುತ್ತೇನೆ. ಎಲ್ಲ ಸದಸ್ಯರ ಅಭಿಪ್ರಾಯಗಳನ್ನು ಸಭೆಯಲ್ಲಿ ಪಡೆಯಲಾಗುವುದು. ಅಗತ್ಯ ಬಿದ್ದರೆ ಮತ್ತೊಮ್ಮೆ ಕೇಂದ್ರಕ್ಕೆ ಸರ್ವಪಕ್ಷ ನಿಯೋಗ ಕರೆದೊಯ್ಯುತ್ತೇನೆ ಎಂದರು.

ಮಹಾದಾಯಿ ವಿಚಾರದಲ್ಲಿ ನಾನೆಂದೂ ಗೋವಾ ರಾಜ್ಯದ ಕಾಂಗ್ರೆಸ್ ಮುಖಂಡರನ್ನು ಒಪ್ಪಿಸುತ್ತೇನೆ ಎಂದು ಹೇಳಿರಲಿಲ್ಲ. ಆದರೆ, ಬಿಜೆಪಿಯವರು ಹಾಗೆ ಹೇಳಿಕೊಂಡು ತಿರುಗುತ್ತಿದ್ದಾರೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಗೋವಾ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪಗೆ ಬರೆದಿರುವ ಪತ್ರವನ್ನು ಮಹಾದಾಯಿ ನ್ಯಾಯಾಧೀಕರಣಕ್ಕೆ ಸಲ್ಲಿಸಲಿ. ಈ ಸಮಸ್ಯೆ ಬಗೆಹರಿಸಲು ಪ್ರಧಾನಿ ಮಧ್ಯಪ್ರವೇಶ ಮಾಡಬೇಕು. ಇಲ್ಲವೇ, ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಸಬೇಕು. ಈ ಎರಡು ಪ್ರಯತ್ನಗಳು ಕೈಗೂಡದಿದ್ದರೆ ನ್ಯಾಯಾಧೀಕರಣದಲ್ಲೆ ವಿವಾದ ಇತ್ಯರ್ಥವಾಗಬೇಕು ಎಂದು ಮುಖ್ಯಮಂತ್ರಿ ತಿಳಿಸಿದರು.

ಯಡಿಯೂರಪ್ಪ ಡಿ.15ರೊಳಗೆ ಮಹಾದಾಯಿ ನದಿ ನೀರು ಹರಿಸುವುದಾಗಿ ಹೇಳಿದ್ದರು. ಆದರೆ, ನೀರು ಹರಿಸಲು ಸಾಧ್ಯವಾಯಿತಾ? ಬಿಜೆಪಿಯವರು ಮಾತು ತಪ್ಪಿದ್ದಾರೆ. ಮನೋಹರ್ ಪಾರಿಕ್ಕರ್, ಯಡಿಯೂರಪ್ಪಗೆ ಪತ್ರ ಬರೆದಿದ್ದಾರೆ. ಅವರು ನಮ್ಮ ಸರಕಾರಕ್ಕೆ ಪತ್ರ ಬರೆಯಬೇಕಿತ್ತು. ಆನಂತರ, ಗೋವಾ ಜಲಸಂಪನ್ಮೂಲ ಸಚಿವರು ಇದನ್ನು ರಾಜಕೀಯ ಗಿಮಿಕ್ ಎಂದು ಟೀಕಿಸಿದ್ದನ್ನು ಸಿದ್ದರಾಮಯ್ಯ ಸ್ಮರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News