ಪಾಕ್ ವಿರುದ್ಧದ ಅಮೆರಿಕ ನಿಲುವು ಇನ್ನಷ್ಟು ಬಿಗಿ

Update: 2018-01-03 03:44 GMT

ವಾಷಿಂಗ್ಟನ್, ಜ.3: ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಪಾಕಿಸ್ತಾನ ದ್ವಿಮುಖ ನೀತಿ ಅನುಸರಿಸುತ್ತಿದ್ದು, ಅಮೆರಿಕದ ನೆರವು ಮುಂದುವರಿಸಲು ಆ ದೇಶ ಬಯಸುವುದಾದರೆ, ಭಯೋತ್ಪಾದನೆ ನಿಗ್ರಹ ವಿಚಾರದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಎಚ್ಚರಿಕೆ ನೀಡಿದೆ.

"ನೆರವು ಮುಂದುವರಿಯಬೇಕಿದ್ದರೆ ಭಯೋತ್ಪಾದನೆ ತಡೆಗೆ ಪಾಕಿಸ್ತಾನ ಇನ್ನಷ್ಟು ಕ್ರಮ ಕೈಗೊಳ್ಳಬೇಕು" ಎಂದು ಶ್ವೇತಭವನದ ವಕ್ತಾರರಾದ ಸರಹ್ ಸ್ಯಾಂಡ್ರೆಸ್ ಪ್ರಕಟಿಸಿದ್ದಾರೆ. ಪಾಕಿಸ್ತಾನ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಒತ್ತಡ ಹೇರಲು ಕಟ್ಟುನಿಟ್ಟಿನ ಕ್ರಮಗಳನ್ನು ಸದ್ಯದಲ್ಲೇ ಘೋಷಿಸಲಾಗುವುದು ಎಂದು ಶ್ವೇತಭವನ ಸ್ಪಷ್ಟಪಡಿಸಿದೆ. ವಿಶ್ವಸಂಸ್ಥೆಯಲ್ಲಿ ಅಮೆರಿಕದ ರಾಯಭಾರಿಯಾಗಿರುವ ನಿಕ್ಕಿ ಹಾಲೆ ಈಗಾಗಲೇ ಪಾಕಿಸ್ತಾನಕ್ಕೆ ನೀಡಲು ಉದ್ದೇಶಿಸಿದ್ದ 255 ದಶಲಕ್ಷ ಡಾಲರ್ ನೆರವನ್ನು ತಡೆಹಿಡಿಯುವುದಾಗಿ ಘೋಷಿಸಿದ್ದಾರೆ.

"ಇದಕ್ಕೆ ಸ್ಪಷ್ಟ ಕಾರಣಗಳಿವೆ. ಹಲವು ವರ್ಷಗಳಿಂದ ಪಾಕಿಸ್ತಾನ ಡಬಲ್ ಗೇಮ್ ಆಡುತ್ತಿದೆ. ನಮ್ಮೊಂದಿಗೆ ಕಾರ್ಯ ನಿರ್ವಹಿಸುತ್ತಲೇ, ಅಪ್ಘಾನಿಸ್ತಾನದಲ್ಲಿ ಹೋರಾಡುತ್ತಿರುವ ನಮ್ಮ ಸೇನೆಯ ವಿರುದ್ಧ ಭಯೋತ್ಪಾದಕ ದಾಳಿಗೆ ಕುಮ್ಮಕ್ಕು ನೀಡುತ್ತಿದೆ" ಎಂದು ಹಾಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನದ ಇಂಥ ಆಟವನ್ನು ಅಮೆರಿಕ ಸಹಿಸುವುದಿಲ್ಲ. ನಾವು ನೆರವು ನೀಡಬೇಕಿದ್ದರೆ ಪಾಕಿಸ್ತಾನದಿಂದ ಹೆಚ್ಚಿನ ಸಹಕಾರವನ್ನು ಬಯಸುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಪಾಕಿಸ್ತಾನಕ್ಕೆ ಮುಂದಿನ 15 ವರ್ಷಗಳಲ್ಲಿ 33 ಶತಕೋಟಿ ಡಾಲರ್ ನೀಡುವ ಪ್ರಸ್ತಾವ ಮೂರ್ಖತನ ಎಂದು ಬಣ್ಣಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News