ಬೆಂಗಳೂರು: ಜ. 24 ಕ್ಕೆ ವಾಹನಗಳ ಹರಾಜು
ಬೆಂಗಳೂರು, ಜ.3: ಯಶವಂತಪುರ ಪ್ರಾದೇಶಿಕ ಸಾರಿಗೆ ಆಯುಕ್ತ ಕಚೇರಿಯಲ್ಲಿರುವ ವಾರಸುದಾರರಿಲ್ಲದ ವಾಹನಗಳ ಹರಾಜು ಪ್ರಕ್ರಿಯೆ ಜ. 24 ರಂದು ಮಧ್ಯಾಹ್ನ 3 ಗಂಟೆಗೆ ಕಚೇರಿಯ ಆವರಣದಲ್ಲಿ ನಡೆಯಲಿದೆ.
ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತೆರಿಗೆ ಪಾವತಿ ಮಾಡದ ಈ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು. ಆದರೆ, ತೆರಿಗೆ ಪಾವತಿ ಮಾಡಿದ ಬಗ್ಗೆ ಮತ್ತು ಸೂಕ್ತ ದಾಖಲಾತಿಯನ್ನು ಹೊಂದಿದ ಬಗ್ಗೆ ಯಾವುದೇ ವಾರಸುದಾರರು ವಾಹನಗಳನ್ನು ಬಿಡಿಸಿಕೊಳ್ಳಲು ವಿಫಲವಾದ ಹಿನ್ನೆಲೆಯಲ್ಲಿ ಸಾರ್ವಜನಿಕ ಹರಾಜು ಹಾಕಲು ನಿರ್ಧರಿಸಲಾಗಿದೆ.
ನಾಲ್ಕು ಟೆಂಪೋ ಟ್ರಾವೆಲ್ಲರ್, 3 ಟಾಟಾ ಇಂಡಿಕಾ, 3 ಟಾಟಾ 407, ತಲಾ ಒಂದು ಐಶರ್, ಸ್ವರಾಜ್ ಮಜ್ದಾ, ಇಐಬಿ ಮತ್ತು ವೈಕಿಂಗ್ ಎಎಲ್ಪಿಎಸ್‌ವಿ ವಾಹನಗಳು ಸೇರಿವೆ. ಇವುಗಳಲ್ಲಿ ಕೆಲವು ರಸ್ತೆ ಸಂಚಾರಕ್ಕೆ ಸೂಕ್ತವಲ್ಲದ ರೀತಿಯಲ್ಲಿದ್ದರೆ, ಮತ್ತೆ ಕೆಲವು ರಸ್ತೆ ಸಂಚಾರಕ್ಕೆ ಸೂಕ್ತವಾಗಿದ್ದು ಸುಸ್ಥಿತಿಯಲ್ಲಿವೆ.
ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಇಚ್ಛಿಸುವ ಆಸಕ್ತರು ಪ್ರಾದೇಶಿಕ ಸಾರಿಗೆ ಆಯುಕ್ತರು, ಬೆಂಗಳೂರು ಇವರ ಹೆಸರಿನಲ್ಲಿ 5000 ರೂ.ಗಳ ಡಿಡಿ ಪಡೆದು ಮುಚ್ಚಿದ ಲಕೋಟೆಯಲ್ಲಿ 24-01-2018 ರ ಬುಧವಾರ ಮಧ್ಯಾಹ್ನ 3 ಗಂಟೆಯೊಳಗೆ ತಲುಪಿಸಬೇಕು. ಲಕೋಟೆ ಮೇಲೆ ವಾಹನದ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕು ಎಂದು ಪ್ರಕಟಣೆ ತಿಳಿಸಿದೆ.