×
Ad

ಬೆಂಗಳೂರು: ಅಧಿಕ ಬಡ್ಡಿ ವಸೂಲಾತಿ ಖಂಡಿಸಿ ಆಟೊ ಚಾಲಕರ ಪ್ರತಿಭಟನೆ

Update: 2018-01-03 19:06 IST

ಬೆಂಗಳೂರು, ಜ.3: ಖಾಸಗಿ ಆಟೊ ಫೈನಾನ್ಸ್ ಕಂಪನಿಗಳ ಅಧಿಕ ಬಡ್ಡಿ ವಸೂಲಾತಿ ಕ್ರಮ ಖಂಡಿಸಿ ಆಟೊ ಚಾಲಕರು ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು

ಸರಕಾರ ನಿಗದಿಪಡಿಸಿದ ಬಡ್ಡಿಗಿಂತ ಹೆಚ್ಚಿನ ಬಡ್ಡಿಯನ್ನು ಖಾಸಗಿ ಫೈನಾನ್ಸ್ ಕಂಪನಿಗಳು ವಸೂಲು ಮಾಡುತ್ತಿವೆ. 300 ರೂ.ಗೆ ಸಾರಿಗೆ ಇಲಾಖೆ ನೀಡುವ ಆಟೊ ರಿಕ್ಷಾ ಪರವಾನಿಗೆಯನ್ನು, ಖಾಸಗಿ ಆಟೊ ಫೈನಾನ್ಸ್ ಕಂಪನಿಗಳು ಹಾಗೂ ಆರ್‌ಟಿಓ ದಲ್ಲಾಳಿಗಳು 30 ಸಾವಿರ ರೂ.ಗಳಿಗೆ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವುದನ್ನು ತಡೆಗಟ್ಟಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ನಿರುದ್ಯೋಗಿ ಯುವಕರಿಗೆ ಸರಕಾರ ಆಟೊ ಚಾಲನಾ ಪರವಾನಿಗೆ ನೀಡಬೇಕು. ಕಾನೂನು ಬಾಹಿರವಾಗಿ ಆಟೊ ರಿಕ್ಷಾಗಳನ್ನು ಸೀಝ್ ಮಾಡಬಾರದು. ಹಳೇ 2ಸ್ಟ್ರೋಕ್ ಆಟೊಗಳ ಸ್ಥಗಿತಗೊಳಿಸಿದ ಒಂದು ವಾರದೊಳಗೆ ಆಟೊ ರಿಕ್ಷಾ ಮಾರಾಟ ಕಂಪನಿಗಳಿಗೆ, 4 ಸ್ಟ್ರೋಕ್ ಆಟೊ ಒದಗಿಸುವಂತೆ ಸಾರಿಗೆ ಇಲಾಖೆ ಆದೇಶ ನೀಡಬೇಕು. 4 ಸ್ಟ್ರೋಕ್ ಆಟೊ ಕೊಳ್ಳಲು ಸಹಾಯ ಧನವನ್ನು 30 ಸಾವಿರದಿಂದ 50 ಸಾವಿರಕ್ಕೆ ಏರಿಸಬೇಕು. ನಕಲಿ ಆಟೊ ರಿಕ್ಷಾ ಪರವಾನಿಗೆ ದಂಧೆ ತಡೆಗಟ್ಟಲು ಸಾರಿಗೆ ಇಲಾಖೆ ರೀಪರ್ಮಿಟ್ ಕಡ್ಡಾಯೊಳಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆ ಉದ್ದೇಶಿಸಿ ಒಕ್ಕೂಟದ ಅಧ್ಯಕ್ಷ ಎಂ. ಮಂಜುನಾಥಗೌಡ ಮಾತನಾಡಿ, ಬೇಡಿಕೆಗಳನ್ನು 7 ದಿನಗಳೊಳಗಾಗಿ ಈಡೇರಿಸುವಂತೆ ಮುಖ್ಯಮತ್ರಿಯವರಿಗೆ ಒತ್ತಾಯಿಸಿದ್ದೇವೆ. ಅವರು ಕೂಡಲೆ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳದಿದ್ದಲ್ಲಿ ಆಟೊ ಮತ್ತು ಟ್ಯಾಕ್ಸಿ ಚಾಲಕರು ಬೆಂಗಳೂರು ಬಂದ್‌ಗೆ ಕರೆ ನೀಡಲಿದ್ದಾರೆಂದು ಎಚ್ಚರಿಸಿದರು.

ಬೆಂಗಳೂರು ಆಟೊ ಮತ್ತು ಟ್ಯಾಕ್ಸಿ ಚಾಲಕರ ಸಂಘಟನೆಗಳ ಒಕ್ಕೂಟದ ಆಶ್ರಯದಲ್ಲಿ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ನೂರಾರು ಆಟೊ ಚಾಲಕರು ರೈಲ್ವೆ ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನವನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಒಕ್ಕೂಟದ ಆಶ್ರಯದಲ್ಲಿ ಆದರ್ಶ ಆಟೊ ಟ್ಯಾಕ್ಸಿ ಚಾಲಕರ ಸಂಘ, ರಾಜೀವಗಾಂಧಿ ಆಟೊ ಚಾಲಕರ ವೇದಿಕೆ, ಜಯಕರ್ನಾಟಕ ಬೆಂಗಳೂರು ನಗರ ಆಟೊ ಘಟಕ, ಆಟೊ ಸಂಘಟನೆಗಳ ಒಕ್ಕೂಟ ಸಂಘಟನೆಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವು.

ಸಂಚಾರ ದಟ್ಟಣೆ: ಮುಖ್ಯಮಂತ್ರಿಗಳ ನಿವಾಸಕ್ಕೆ ಹೊರಟ ಆಟೊ ಚಾಲಕರಿಗೆ ಪೊಲೀಸರು ಅವಕಾಶ ನೀಡದಿದ್ದರಿಂದ ಸ್ವತಂತ್ರ ಉದ್ಯಾನದವರೆಗೆ ಮೆರವಣಿಗೆ ನಡೆಸಿದರು. ಇದರಿಂದಾಗಿ ಆನಂದ್ ರಾವ್ ಸರ್ಕಲ್ ಸುತ್ತಮುತ್ತಲ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News