ಬೆಂಗಳೂರು: ಮನೆಗೆ ನುಗ್ಗಿ ಚಿನ್ನಾಭರಣ ಕಳವು
ಬೆಂಗಳೂರು, ಜ.3: ಮನೆಯೊಂದರ ಹಿಂಭಾಗದ ಕಿಟಕಿಯ ಗ್ರಿಲ್ ಮುರಿದು ಒಳನುಗ್ಗಿದ ದುಷ್ಕರ್ಮಿಗಳು 25 ಲಕ್ಷ ರೂ. ಮೌಲ್ಯದ 1 ಕೆಜಿ 190 ಗ್ರಾಂ ತೂಕದ ಚಿನ್ನಾಭರಣ ಹಾಗೂ 10 ಸಾವಿರ ನಗದು ಕಳವು ಮಾಡಿರುವ ಪ್ರಕರಣ ಇಲ್ಲಿನ ಆರ್.ಟಿ.ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.
ನಗರದ ಸುಲ್ತಾನ್‌ಪಾಳ್ಯ ಮುಖ್ಯ ರಸ್ತೆಯಲ್ಲಿ ಕೃಷ್ಣಪ್ಪಎಂಬುವರು ವಾಸವಾಗಿದ್ದು, ಜ.1ರಂದು ಕಾರ್ಯನಿಮಿತ್ತ ಇವರು ಮೈಸೂರಿಗೆ ಹೋಗಿದ್ದರು. ಈ ವೇಳೆ ದುಷ್ಕರ್ಮಿಗಳು ಇವರ ಮನೆಯ ಹಿಂಭಾಗದ ಕಿಟಕಿ ಗ್ರಿಲ್ ಮುರಿದು ಒಳನುಗ್ಗಿ ಬೀರು ಒಡೆದು ಅದರಲ್ಲಿದ್ದ 1 ಕೆಜಿ 190 ಗ್ರಾಂ. ತೂಕದ ಚಿನ್ನಾಭರಣ ಹಾಗೂ 10 ಸಾವಿರ ಹಣವನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಮಂಗಳವಾರ ಬೆಳಗ್ಗೆ ಕೃಷ್ಣಪ್ಪ ಮನೆಗೆ ಬಂದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಈ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿ ನಾಪತ್ತೆಯಾಗಿದ್ದು, ತಕ್ಷಣ ಆರ್.ಟಿ.ನಗರ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.