×
Ad

ಮಹದೇವಪ್ರಸಾದ್ ಜನಪರ ರಾಜಕಾರಣಿಯಾಗಿದ್ದರು: ರಾಮಲಿಂಗಾರೆಡ್ಡಿ

Update: 2018-01-03 19:42 IST

ಬೆಂಗಳೂರು, ಜ.3: ರಾಜ್ಯದ ಕಾಂಗ್ರೆಸ್‌ನ ಹಿರಿಯ ಮುಖಂಡರಾಗಿದ್ದ ಮಾಜಿ ಸಚಿವ ಮಹದೇವಪ್ರಸಾದ್ ಜನಪರ ರಾಜಕಾರಣಿಯೆಂದೇ ಹೆಸರುವಾಸಿಯಾಗಿದ್ದರು. ಜನಸಾಮಾನ್ಯರ ಪರವಾದ ಕೆಲಸಗಳಿಗೆ ಸದಾ ಹಾತೊರೆಯುತ್ತಿದ್ದರು ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಸ್ಮರಿಸಿದರು.

ಬುಧವಾರ ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ನಗರದ ಶಿವರಾತ್ರಿ ರಾಜೇಂದ್ರ ಚಿಂತನ ಮಂಟಪದಲ್ಲಿ ಆಯೋಜಿಸಿದ್ದ ಮಾಜಿ ಸಚಿವ ಎಚ್.ಎಸ್.ಮಹದೇವಪ್ರಸಾದ್ ಅವರ ಮೊದಲ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಹದೇವಪ್ರಸಾದ್‌ರವರ ಪ್ರಾಮಾಣಿಕತೆ, ಸಜ್ಜನ ನಡುವಳಿಕೆಯಿಂದಾಗಿ ಪ್ರತಿಚುನಾವಣೆಗಳಲ್ಲಿ ಪ್ರತಿಬಾರಿಯು ಜಯ ಸಾಧಿಸುತ್ತಿದ್ದರು ಎಂದು ತಿಳಿಸಿದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಡಾ.ಬಸವರಾಜ ಸಾದರ ಮಾತನಾಡಿ, ಇವತ್ತಿನ ರಾಜಕಾರಣದಲ್ಲಿ ಮಾಜಿ ಸಚಿವ ಮಹದೇವಪ್ರಸಾದ್ ಸಜ್ಜನ ಜನಪ್ರತಿನಿಧಿಯಾಗಿ ಜನರಲ್ಲಿ ವಿಶ್ವಾಸ ಮೂಡಿಸಿದ್ದರು. ಜನಪರ ಕೆಲಸಗಳಲ್ಲಿ ತಮ್ಮನ್ನು ತಾವು ಸದಾ ತೊಡಗಿಸಿಕೊಳ್ಳುತ್ತಿದ್ದರು ಎಂದು ಸ್ಮರಿಸಿದರು.

ಶುದ್ಧ ವ್ಯಕ್ತಿತ್ವವನ್ನು ಹೊಂದಿರುವವರು ಉತ್ತಮ ರಾಜಕಾರಣಿಯಾಗಿರುತ್ತಾರೆ. ಆಗ ಯಾರು ಏನೂ ಮಾಡಲಾಗುವುದಿಲ್ಲ. ಈಗಿನ ರಾಜಕಾರಣ ಕೇವಲ ವಿಧಾನಸಭೆಗೆ ಮಾತ್ರ ಸೀಮಿತಗೊಂಡಿದೆ. ಇಂತಹ ಸಂದರ್ಭದಲ್ಲಿ ಮಾಜಿ ಸಚಿವ ಮಹದೇವಪ್ರಸಾದ್ ಸದಾ ನೆನಪಾಗುತ್ತಾರೆ ಎಂದು ಅವರು ಹೇಳಿದರು.
ಈ ವೇಳೆ ಹಿರಿಯ ಸಂಗೀತಗಾರ ಆನೂರು ಅನಂತ ಕೃಷ್ಣಶರ್ಮಾಗೆ ಸಂಗೀತ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜಾನಪದ ವಿದ್ವಾಂಸ ಗೊ.ರು.ಚನ್ನಬಸಪ್ಪ, ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕ ಸೋಮಶೇಖರ್, ಕವಿ ಜರಗನಹಳ್ಳಿ ಶಿವಶಂಕರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News