×
Ad

ಕನ್ನಡ ಬಳಕೆಗೆ ಇಚ್ಛಾಶಕ್ತಿ ಅಗತ್ಯ: ಪ್ರೊ.ಎಸ್.ಜಿ.ಸಿದ್ದರಾಮಯ್ಯ

Update: 2018-01-03 19:45 IST

ಬೆಂಗಳೂರು,ಜ.3: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಲ್ಲಿ ವೆಬ್‌ಸೈಟ್ ತಂತ್ರಾಂಶ ಬಳಕೆ ಹಾಗೂ ನೇಮಕಾತಿಯಲ್ಲಿ ಕನ್ನಡಿಗರಿಗೆ ಆದ್ಯತೆ ಇರುವುದು ಹೆಮ್ಮೆಯ ವಿಷಯ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅಧಿಕಾರಿಗಳನ್ನು ಅಭಿನಂದಿಸಿದ್ದಾರೆ.

ಬುಧವಾರ ಕೆಪಿಟಿಸಿಎಲ್ ಮುಖ್ಯ ಕಚೇರಿಯಲ್ಲಿ ಪ್ರಾಧಿಕಾರದಿಂದ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನೆ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಒಳಾಡಳಿತದಲ್ಲಿ ಕನ್ನಡ ಮತ್ತು ಮೊಹರು ಬಳಕೆ ಕಡ್ಡಾಯವಾಗಿದ್ದು, ಅನಿವಾರ್ಯ ಸಂದರ್ಭದಲ್ಲಿ ಕೇಂದ್ರ ಮತ್ತು ಹೊರ ರಾಜ್ಯಗಳ ಪತ್ರ ವ್ಯವಹಾರದಲ್ಲಿ ಆಂಗ್ಲವನ್ನು ಬಳಸಬಹುದು ಎಂದು ಸೂಚಿಸಿದರು.

ಕನ್ನಡ ಭಾಷೆಯ ಬಳಕೆಯಲ್ಲಿ ಇಚ್ಛಾಶಕ್ತಿ ಇದ್ದರೆ ಅದರ ಪರಿಣಾಮಕಾರಿ ಜಾರಿಗೆ ಯಾವುದೇ ತೊಂದರೆಯಿಲ್ಲ. ಹೀಗಾಗಿ ಕಚೇರಿಯ ಪ್ರತಿಯೊಬ್ಬ ಅಧಿಕಾರಿಗಳು ತಮ್ಮ ಕಡತ ಮತ್ತು ಪತ್ರಗಳನ್ನು ಕಡ್ಡಾಯವಾಗಿ ಕನ್ನಡದಲ್ಲೇ ಬರೆಯಿರಿ ಎಂದು ಅಧಿಕಾರಿಗಳಿಗೆ ಅವರು ಕಿವಿಮಾತು ಹೇಳಿದರು.

ನಿಗಮದ ವ್ಯವಸ್ಥಾಪಕ ನಿರ್ದೇಶಕ ಜಾವೇದ್ ಅಖ್ತರ್ ಮಾತನಾಡಿ, ವೃಂದ ನೇಮಕಾತಿಯಲ್ಲಿ ತಿದ್ದುಪಡಿ ಮಾಡಿ 2016ರಲ್ಲಿ 1611 ಮಂದಿ ಕನ್ನಡಿಗರ ನೇಮಕ ಮಾಡಿದ್ದು, 945 ಮಂದಿ ಕನ್ನಡ ಪರೀಕ್ಷೆ ಪಾಸು ಮಾಡಿದ್ದಾರೆ. ಗಡಿಭಾಗ ಹಾಗೂ ಹೊರ ರಾಜ್ಯದ 589 ಜನರನ್ನು ನೇಮಕ ಮಾಡಿದ್ದು, ಅವರಲ್ಲಿ 153 ಮಂದಿ ಕನ್ನಡ ಪರೀಕ್ಷೆಯನ್ನು ಪಾಸು ಮಾಡಿರುತ್ತಾರೆ.

ಕೆಪಿಟಿಸಿಎಲ್ ಕನ್ನಡ ಘಟಕದಿಂದ ತಾಂತ್ರಿಕ ಆಡಳಿತ ಪದಕೋಶವನ್ನು ಹೊರತರಲಾಗಿದೆಯಲ್ಲದೆ, ಕಾನೂನು ಪದಕೋಶ ಮತ್ತು ಶುದ್ಧ ಬರಹ ಪುಸ್ತಕವನ್ನು ಹೊರತರಲು ಕ್ರಮಕೈಗೊಳ್ಳಲಾಗುತ್ತಿದೆ ಎಂದರು. ರಾಜ್ಯೋತ್ಸವ ಸಂದರ್ಭದಲ್ಲಿ ನಿಗಮದಿಂದ ಗಡಿನಾಡ ಭಾಗದಲ್ಲಿ ರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ ಎಂದರು. ಸಭೆಯಲ್ಲಿ ಪ್ರೊ.ಚಂದ್ರಶೇಖರ ಪಾಟೀಲ್, ಡಾ.ಮುರಳೀಧರ, ಪ್ರಭಾಕರ ಪಾಟೀಲ, ಮಂಜುನಾಥ ಆರಾದ್ಯ, ಡಾ.ವೀರಶೆಟ್ಟಿ, ಕೆಪಿಟಿಸಿಎಲ್ ನಿರ್ದೇಶಕ ರಾಮಕೃಷ್ಣ, ವ್ಯವಸ್ಥಾಪಕ ಭುವನೇಶ್ವರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News