×
Ad

ವಿಶ್ವ ಬ್ರೈಲ್ ದಿನಾಚರಣೆ: ಅಂಧ ವಿದ್ಯಾರ್ಥಿಗಳಿಗೆ ಟಾಕಿಂಗ್ ಲ್ಯಾಪ್‌ಟಾಪ್ ವಿತರಣೆ

Update: 2018-01-04 17:58 IST

ಬೆಂಗಳೂರು, ಜ.4: ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವಿಶ್ವ ಬ್ರೈಲ್ ದಿನಾಚರಣೆಯ ಪ್ರಯುಕ್ತ ಪದವಿ ಹಾಗೂ ಪದವಿಪೂರ್ವ ಅಂಧ ವಿದ್ಯಾರ್ಥಿಗಳಿಗೆ ಟಾಕಿಂಗ್ ಲ್ಯಾಪ್‌ಟಾಪ್ ವಿತರಿಸಲಾಯಿತು.

ಗುರುವಾರ ನಗರದ ಕಬ್ಬನ್‌ಪಾರ್ಕ್‌ನಲ್ಲಿರುವ ಬಾಲ ಭವನ್‌ನಲ್ಲಿ ಆಯೋಜಿಸಿದ್ದ ವಿಶ್ವ ಬ್ರೈಲ್ ದಿನಾಚರಣೆ ಕಾರ್ಯಕ್ರಮದಲ್ಲಿ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ವಿಕಲಚೇತನ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾ ಮಹಾದೇವನ್ 50 ಅಂಧ ವಿದ್ಯಾರ್ಥಿಗಳಿಗೆ ಟಾಕಿಂಗ್ ಲ್ಯಾಪ್‌ಟಾಪ್ ವಿತರಿಸಿದರು.

ಕಳೆದ ಎರಡು ವರ್ಷದಿಂದ ಪದವಿ ಹಾಗೂ ಪದವಿಪೂರ್ವ ಅಂಧ ವಿದ್ಯಾರ್ಥಿಗಳಿಗೆ ಟಾಕಿಂಗ್ ಲ್ಯಾಪ್‌ಟಾಪ್ ವಿತರಿಸಲಾಗುತ್ತಿದೆ. ಈ ಬಾರಿ ಒಂದು ಸಾವಿರ ಅಂಧ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಕೊಡಲಾಗುತ್ತಿದ್ದು, ಈಗ ಸಾಂಕೇತಿಕವಾಗಿ 50 ಮಂದಿಗೆ ವಿತರಿಸಿದ್ದೇವೆ ಎಂದು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ನಿರ್ದೇಶಕ ಡಾ.ಸಿದ್ದರಾಜು ತಿಳಿಸಿದರು.

ರಾಜ್ಯದಲ್ಲಿ 21 ಬಗೆಯ ವಿಕಲಚೇತನರನ್ನು ಗುರುತಿಸಿ, ಅಗತ್ಯ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಪ್ರತಿ ವಿಕಲಚೇತನರಿಗೆ ಮಾಸಾಶನ, ವಿದ್ಯಾರ್ಥಿ ವೇತನ, ಪ್ರೋತ್ಸಾಹಧನ ಹಾಗೂ ಅಂಧ ಮಹಿಳೆಯರಿಗೆ ಹುಟ್ಟುವ ಮಗುವಿನ ಪಾಲನೆಗಾಗಿ ಎರಡು ಸಾವಿರ ರೂ. ಶಿಶುಪಾಲನಾ ಭತ್ತೆ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.

ವಿಕಲಚೇತನರು ರಾಷ್ಟ್ರೀಯ ಸಂಪತ್ತೆಂದು ರಾಜ್ಯ ಸರಕಾರ ಭಾವಿಸಿದೆ. ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ವಿಕಲಚೇತನರ ಪ್ರಮುಖ ಪಾತ್ರ ವಹಿಸಬೇಕು. ಈ ನಿಟ್ಟಿನಲ್ಲಿ ವಿವಿಧ ಕ್ಷೇತ್ರದಲ್ಲಿ ಉನ್ನತ ಹುದ್ದೆಗಳಿಗೆ ಹೋಗಲು ಅರ್ಹತೆಯನ್ನು ಪಡೆದುಕೊಳ್ಳಬೇಕು. ಇದಕ್ಕೆ ಅಗತ್ಯವಾದ ಸೌಲಭ್ಯ ನೀಡಲು ಸರಕಾರ ಸಿದ್ಧವಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ವಿಕಲಚೇತನರ ಹಾಗೂ ನಾಗರಿಕರ ಸಬಲೀಕರಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾ ಮಹಾದೇವನ್, ನಿಸರ್ಗ ಚಿಕಿತ್ಸಕ ಬಸವಾನಂದ ಸ್ವಾಮಿ, ಮಾತೃಛಾಯಾ ಸಂಸ್ಥೆಯ ರಾಜ್ಯಶ್ರೀ ಸತೀಶ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News