×
Ad

ಹತ್ಯೆ ಪ್ರಕರಣಗಳಲ್ಲಿ ಧರ್ಮದ ಹೆಸರು ಬಳಸುವುದು ಸಲ್ಲ : ಗೃಹ ಸಚಿವ ರಾಮಲಿಂಗಾರೆಡ್ಡಿ

Update: 2018-01-04 18:09 IST

ಬೆಂಗಳೂರು, ಜ.4: ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ರಾಜಕೀಯ ಪಕ್ಷಗಳು ಹಾಗೂ ಕೆಲ ಸಂಘಟನೆಗಳು ಅಗತ್ಯಕ್ಕಿಂತ ಹೆಚ್ಚು ಸಕ್ರಿಯ(ಓವರ್ ಆಕ್ಟೀವ್)ವಾಗಿರುವ ಕಾರಣಕ್ಕೆ ಜಿಲ್ಲೆಯಲ್ಲಿನ ಸಾಮರಸ್ಯ ಹದಗೆಡುತ್ತಿದೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ವಿಶ್ಲೇಷಿಸಿದ್ದಾರೆ.

ಗುರುವಾರ ವಿಕಾಸಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ದೀಪಕ್ ರಾವ್ ಹತ್ಯೆ ಪ್ರಕರಣ ಸಂಬಂಧ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದಿದ್ದು, ಅವರ ವಿಚಾರಣೆ ನಡೆಸಲಾಗುತ್ತಿದೆ. ಯಾವ ಕಾರಣಕ್ಕಾಗಿ ಹತ್ಯೆ ಮಾಡಲಾಗಿದೆ ಎಂಬುವುದು ತನಿಖೆಯಿಂದಷ್ಟೇ ಗೊತ್ತಾಗಲಿದೆ ಎಂದು ಹೇಳಿದರು.

ಹಿಂದೂ ಸಮಾಜ ಬಿಜೆಪಿ-ಸಂಘ ಪರಿವಾರದ ಗುತ್ತಿಗೆಯಲ್ಲ. ನಾವೂ ಹಿಂದುಗಳೇ. ಹತ್ಯೆ ಪ್ರಕರಣಗಳಲ್ಲಿ ಧರ್ಮದ ಹೆಸರು ಬಳಸುವುದು ಸಲ್ಲ ಎಂದು ಹೇಳಿದ ಅವರು, ಪಿಎಫ್‌ಐ ಜತೆ ಕಾಂಗ್ರೆಸ್ ಯಾವುದೇ ಹೊಂದಾಣಿಕೆ ಮಾಡಿಕೊಂಡಿಲ್ಲ. ಆದರೆ, ದಕ್ಷಿಣ ಕನ್ನಡದ ಸವಣೂರು ಗ್ರಾ.ಪಂ. ಚುನಾವಣೆಯಲ್ಲಿ ಬಿಜೆಪಿ, ಪಿಎಫ್‌ಐ ಜತೆಗೆ ಸೇರಿ ಕಾಂಗ್ರೆಸ್ ಅನ್ನು ಸೋಲಿಸಿತ್ತು.ಅದು ಸಂಸದೆ ಶೋಭಾ ಕರಂದ್ಲಾಜೆ ಗ್ರಾಮ. ಚುನಾವಣೆ ಸಂದರ್ಭದಲ್ಲಿ ಹೊಂದಾಣಿಕೆ ಮಾಡಿಕೊಂಡು ಇದೀಗ ಆ ಸಂಘಟನೆಯನ್ನು ‘ಜಿಹಾದಿ’ ಎಂದು ಅವರು ಆರೋಪ ಮಾಡುತ್ತಿದ್ದಾರೆ. ಕೇಂದ್ರ ಸರಕಾರ ಸ್ವಯಂ ಪ್ರೇರಣೆಯಿಂದಲೇ ಪಿಎಫ್‌ಐ ನಿಷೇಧಿಸಲಿ, ನಮ್ಮದೇನು ತಕರಾರಿಲ್ಲ ಎಂದು ಸ್ಪಷ್ಟಪಡಿಸಿದರು.

ಬಿಜೆಪಿ ರಾಜ್ಯಗಳಲ್ಲೇ ಅಪರಾಧ ಕೃತ್ಯಗಳು ಹೆಚ್ಚು: ಮೋದಿ ಗುಜರಾತ್ ಮುಖ್ಯಮಂತ್ರಿ ಆಗಿದ್ದ ವೇಳೆ ನೂರಾರು ಮಂದಿ ಗಲಭೆಯಲ್ಲಿ ಅಸುನೀಗಿದರು. ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲೆ ಅಪರಾಧ ಕೃತ್ಯಗಳು ಹೆಚ್ಚಾಗಿದ್ದರೂ, ಏನೂ ಕ್ರಮ ಕೈಗೊಂಡಿಲ್ಲ. ನಮ್ಮ ರಾಜೀನಾಮೆ ಕೇಳುವವರು, ಅಲ್ಲೇಕೆ ರಾಜೀನಾಮೆ ನೀಡಿಲ್ಲ ಎಂದು ಪ್ರಶ್ನಿಸಿದರು.

ಹತ್ಯೆಗಳಿಗೆ ರಾಜಕೀಯ ಬಣ್ಣ: ಕರಾವಳಿ ಭಾಗದ ಹತ್ಯೆ ಪ್ರಕರಣಗಳಿಗೆ ರಾಜಕೀಯ ಬಣ್ಣ ಬಳಿಯುವುದು ಸರಿಯಲ್ಲ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಎಸ್‌ಡಿಪಿಐ, ಪಿಎಫ್‌ಐ, ಶ್ರೀರಾಮಸೇನೆ, ಭಜರಂಗದಳ ಎಲ್ಲರೂ ಪಕ್ಷಭೇದ ಮರೆತು ಸಾಮರಸ್ಯ ಕಾಪಾಡಲು ಮುಂದಾಗಬೇಕೆಂದು ರೆಡ್ಡಿ ಮನವಿ ಮಾಡಿದರು.

ಕರಾವಳಿಯಲ್ಲಿ ಕೆಲ ಸಂಘಟನೆಗಳು ಅಗತ್ಯಕ್ಕಿಂತ ಹೆಚ್ಚು ಸಕ್ರಿಯವಾಗಿರುವುದು ಹಾಗೂ ಎಲ್ಲವನ್ನೂ ರಾಜಕೀಯದ ದೃಷ್ಟಿಯಿಂದ ನೋಡುವುದು ನಿಲ್ಲಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಸಂಘರ್ಷಕ್ಕೆ ಪ್ರಚೋದನೆ ನೀಡುವವರ ವಿರುದ್ಧ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಸಂಘ ಪರಿವಾರದ ಕಾರ್ಯಕರ್ತರ ಹತ್ಯೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಎಲ್ಲ ಆರೋಪಿಗಳನ್ನು ಬಂಧಿಸಿದ್ದಲ್ಲದೆ, ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ. ಬಿಜೆಪಿ ಮುಖಂಡರು ಎಲ್ಲ ಹತ್ಯೆ ಪ್ರಕರಣಗಳನ್ನು ತಮ್ಮ ರಾಜಕೀಯಕ್ಕಾಗಿ ಬಳಸಿಕೊಳ್ಳಲು ಯತ್ನಿಸುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

‘ಸಂಘಟಿತ ಅಪರಾಧ ಕೃತ್ಯಗಳಲ್ಲಿ ನಿಖರ ಮಾಹಿತಿ ಸಿಗುವುದು ಕಷ್ಟ. ರಾಜಕೀಯ ಪಕ್ಷ ಮತ್ತು ಸಂಘಟನೆಗಳ ಚಟುವಟಿಕೆಗಳು ಹಾಗೂ ಅಪರಾಧ ಹಿನ್ನೆಲೆಯುಳ್ಳವರ ಬಗ್ಗೆ ಮಾಹಿತಿ ಇರುತ್ತದೆ. ದೀಪಕ್ ರಾವ್ ಹತ್ಯೆ ಪ್ರಕರಣದಲ್ಲಿ ಗುಪ್ತಚರ ಇಲಾಖೆ ವೈಫಲ್ಯ ಖಂಡಿತ ಇಲ್ಲ’
-ರಾಮಲಿಂಗಾರೆಡ್ಡಿ ಗೃಹ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News