ದೀಪಕ್ ರಾವ್ ಹತ್ಯೆ ಪ್ರಕರಣ: ಎನ್‌ಐಎ ತನಿಖೆಗೆ ಬಿಜೆಪಿ ಒತ್ತಾಯ

Update: 2018-01-04 12:45 GMT

ಬೆಂಗಳೂರು, ಜ. 4: ದಕ್ಷಿಣ ಕನ್ನಡದ ದೀಪಕ್ ರಾವ್ ಹತ್ಯೆ ಪ್ರಕರಣವನ್ನು ಎನ್‌ಐಎ ತನಿಖೆಗೆ ಒಪ್ಪಿಸಬೇಕು. ಸಂಘ ಪರಿವಾರದ ಕಾರ್ಯಕರ್ತರ ಹತ್ಯೆ ತಡೆಗಟ್ಟುವಲ್ಲಿ ವಿಫಲವಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಆಗ್ರಹಿಸಿದ್ದಾರೆ.

ಗುರುವಾರ ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 24 ಮಂದಿ ಸಂಘ ಪರಿವಾರದ ಕಾರ್ಯಕರ್ತರ ಹತ್ಯೆ ನಡೆದಿದ್ದು, ಜನರಿಗೆ ರಕ್ಷಣೆಯಿಲ್ಲ ಎಂಬುವುದು ಇದರಿಂದ ದೃಢಪಟ್ಟಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಆರೋಪಿಸಿದರು.

ಒಂದೇ ಮಾದರಿಯಲ್ಲಿ ಭೀಕರ ಹತ್ಯೆ ನಡೆಯುತ್ತಿದ್ದರೂ ರಾಜ್ಯ ಸರಕಾರ ಯಾವುದೇ ಪ್ರಕರಣದ ನಿಷ್ಪಕ್ಷಪಾತ ಮತ್ತು ಪಾರದರ್ಶಕ ತನಿಖೆ ನಡೆಸುತ್ತಿಲ್ಲ. ರಾಜ್ಯದಲ್ಲಿ ನಾಗರಿಕ ಸರಕಾರವಿದೆಯೋ ಅಥವಾ ತಾಲಿಬಾನ್ ಮಾದರಿ ಸರಕಾರವಿದೆಯೋ ಗೊತ್ತಾಗುತ್ತಿಲ್ಲ ಎಂದು ರವಿ ವಾಗ್ದಾಳಿ ನಡೆಸಿದರು.
ಎಸ್‌ಡಿಪಿಐನೊಂದಿಗೆ ಬಿಬಿಎಂಪಿಯಲ್ಲಿ ಹೊಂದಾಣಿಕೆ ಮಾಡಿಕೊಂಡಿರುವ ಕಾಂಗ್ರೆಸ್ ಪಕ್ಷ ಮೂರು ವರ್ಷಗಳಿಂದ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನವನ್ನು ಸತತವಾಗಿ ನೀಡುತ್ತಿದೆ. ಇವರ ಕರಾಳ ಕೃತ್ಯಗಳಿಗೆ ಆಡಳಿತ ಪಕ್ಷವು ನೆರವು ನೀಡುತ್ತಿದೆ ಎಂಬ ಸಂದೇಹವಿದೆ ಎಂದು ಅವರು ಸಂಶಯ ವ್ಯಕ್ತಪಡಿಸಿದರು.

ಎಸ್‌ಡಿಪಿಐ ಜತೆ ಸಚಿವರಾದ ರಾಮಲಿಂಗಾರೆಡ್ಡಿ, ಕೆ.ಜೆ. ಜಾರ್ಜ್ ಅಪವಿತ್ರ ಮೈತ್ರಿ ಹೊಂದಿರುವುದಕ್ಕೆ ಜನತೆ ಕ್ಷಮೆ ಕೋರಬೇಕು. ಎಸ್‌ಡಿಪಿಐ ಮತ್ತು ಪಿಎಫ್‌ಐ ನಿರ್ಬಂಧ ಹೇರಲು ಕೇಂದ್ರಕ್ಕೆ ವರದಿ ನೀಡಲು ರಾಜ್ಯ ಸರಕಾರಕ್ಕೆ ಹಿಂಜರಿಕೆ ಏಕೆ ಎಂದು ರವಿ ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News