×
Ad

ಪರಿಶಿಷ್ಟರ ಸುಧಾರಣೆಗೆ ಆರ್ಥಿಕ ನೆರವು ಕಲ್ಪಿಸಿ: ಮುರುಗನ್ ಸೂಚನೆ

Update: 2018-01-04 19:27 IST

ಬೆಂಗಳೂರು, ಜ. 4: ಪರಿಶಿಷ್ಟರ ಅಭಿವೃದ್ಧಿಗಾಗಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹಲವು ಯೋಜನೆಗಳನ್ನು ರೂಪಿಸಿದ್ದು, ಮೀಸಲಿಟ್ಟಿರುವ ಅನುದಾನವನ್ನು ಆದ್ಯತೆ ಮೇಲೆ ವೆಚ್ಚಮಾಡಿ ಅವರಿಗೆ ಶಿಕ್ಷಣ, ಸಾಮಾಜಿಕ ನ್ಯಾಯ, ಮೂಲಸೌಲಭ್ಯ ಹಾಗೂ ಅವರ ಜೀವನ ಸುಧಾರಣೆಗೆ ಆರ್ಥಿಕ ನೆರವನ್ನು ಕಲ್ಪಿಸಿಕೊಡಬೇಕು ಎಂದು ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗದ ಅಧ್ಯಕ್ಷ ಎಲ್.ಮುರುಗನ್ ಸೂಚಿಸಿದ್ದಾರೆ.

ಗುರುವಾರ ನಗರದ ಕುಮಾರಕೃಪಾ ಅತಿಥಿ ಗೃಹದಲ್ಲಿ ನಡೆದ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಪರಿಶಿಷ್ಟರಿಗೆ ರೂಪಿಸಲಾಗಿರುವ ಕಾರ್ಯಕ್ರಮಗಳ ಬಗ್ಗೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿ ಅವರು ಮಾತನಾಡಿದರು.

ಪರಿಶಿಷ್ಟ ಸಮುದಾಯದ ವಿದ್ಯಾರ್ಥಿಗಳಿಗೆ ನೀಡಲಾಗಿರುವ ಹಾಸ್ಟೆಲ್ ಸೌಲಭ್ಯ, ವಿದ್ಯಾರ್ಥಿ ವೇತನ, ಮಧ್ಯಾಹ್ನದ ಬಿಸಿಯೂಟ ಸೇರಿದಂತೆ ಇನ್ನಿತರ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಮೂಲಕ ಅವರನ್ನು ಸಾಮಾಜಿಕ, ಶೈಕ್ಷಣಿಕವಾಗಿ ಅಭಿವೃದ್ಧಿಗೊಳಿಸುವುದು ಎಲ್ಲರ ಜವಾಬ್ದಾರಿ ಎಂದು ಹೇಳಿದರು.

ಪರಿಶಿಷ್ಟರು ಸ್ವಾಭಿಮಾನದಿಂದ ಬದುಕಲು ವಿವಿಧ ಯೋಜನೆಗಳಡಿ ಮೀಸಲಿಟ್ಟಿರುವ ಅನುದಾನವನ್ನು ಕಾಲಮಿತಿಯಲ್ಲಿ ಖರ್ಚುಮಾಡಿ ಅವರಿಗೆ ಮೂಲಭೂತ ಸೌಕರ್ಯ ಕಲ್ಪಿಸಿಕೊಡುವುದರ ಜೊತೆಗೆ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಉತ್ತೇಜಿಸಬೇಕು ಎಂದರು.

ದೌರ್ಜನ್ಯಕ್ಕೊಳಗಾದವರಿಗೆ ಹಾಗೂ ಜಾತಿಯ ಹೆಸರಿನಲ್ಲಿ ಹತ್ಯೆಯಾದವರಿಗೆ ಶೀಘ್ರವಾಗಿ ಪರಿಹಾರ ನೀಡಬೇಕೆಂದರಲ್ಲದೆ, ಅವರ ಕುಟುಂಬದ ಸಾಮಾಜಿಕ ಭದ್ರತೆಗಾಗಿ ಸರಕಾರಿ ಉದ್ಯೋಗ, ಕುಟುಂಬದ ಅವಲಂಬಿತರಿಗೆ ಮಾಸಿಕ ಪಿಂಚಣಿ ನೀಡುವುದರ ಮೂಲಕ ಆರ್ಥಿಕ ಭದ್ರತೆ ಒದಗಿಸುವುದರ ಜೊತೆಗೆ ಮಕ್ಕಳಿಗೆ ಉಚಿತ ವಿದ್ಯಾಭ್ಯಾಸಕ್ಕೆ ನೆರವಾಗಬೇಕು ಎಂದರು.

ಪರಿಶಿಷ್ಟ ಸಮುದಾಯಕ್ಕೆ ಸೇರಿದ ಕಾಲನಿಗಳ ರಸ್ತೆ ಅಭಿವೃದ್ಧಿ, ಕುಡಿಯುವ ನೀರಿನ ಸೌಲಭ್ಯ, ಸಮುದಾಯ ಭವನಗಳ ನಿರ್ಮಾಣ, ಸ್ಮಶಾನಗಳ ನಿರ್ಮಾಣ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಸಮರ್ಪಕವಾಗಿ ಒದಗಿಸಿಕೊಡಬೇಕು. ವೈದ್ಯಕೀಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಮತ್ತು ಸ್ವ ಉದ್ಯೋಗ ಕಂಡುಕೊಳ್ಳಲು ಸಹಾಯಧನ ನೀಡುವ ಮೂಲಕ ಪರಿಶಿಷ್ಟ ಜಾತಿಯ ಯುವಜನರನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದರು.

ಸಭೆ ಆರಂಭಕ್ಕೂ ಮುನ್ನ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ ಅವರು ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗದ ಅಧ್ಯಕ್ಷ ಎಲ್.ಮುರುಗನ್ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ಸಮಾಜ ಕಲ್ಯಾಣ ಇಲಾಖೆ ಆಯುಕ್ತ ವಿಕಾಸ್ ಕುಮಾರ್ , ಬೆಂ.ಗ್ರಾಮಾಂತರ ಅಪರ ಜಿಲ್ಲಾಧಿಕಾರಿ ಎ.ಎಂ. ಯೋಗೀಶ್, ವರಿಷ್ಠಾಧಿಕಾರಿ ಅಮಿತ್‌ಸಿಂಗ್, ಬೆಂ.ನಗರ ಅಪರ ಜಿಲ್ಲಾಧಿಕಾರಿ ನಾಗರಾಜ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರಾದ ಊರ್ಮಿಳಾ, ಲಕ್ಷ್ಮಣರೆಡ್ಡಿ, ಉಪ ನಿರ್ದೇಶಕ ಪ್ರೇಮ್‌ನಾಥ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News