ಇಂದಿರಾ ಕ್ಯಾಂಟೀನ್‌ನಲ್ಲಿ ಅವ್ಯವಹಾರ ನಡೆದಿಲ್ಲ: ಮಂಜುನಾಥ ಪ್ರಸಾದ್
ಬೆಂಗಳೂರು, ಜ.4: ಇಂದಿರಾ ಕ್ಯಾಂಟೀನ್‌ನಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಪ್ರತಿ ಕ್ಯಾಂಟೀನ್‌ನಲ್ಲೂ ಪಾರದರ್ಶಕತೆಯನ್ನು ಕಾಯ್ದುಕೊಳ್ಳಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಸ್ಪಷ್ಟನೆ ನೀಡಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದಿರಾ ಕ್ಯಾಂಟೀನ್‌ನಲ್ಲಿ ಅಕ್ರಮ ನಡೆಯುತ್ತಿವೆ ಎಂಬ ದೂರು ಸತ್ಯವಲ್ಲ. ಪ್ರತಿ ಇಂದಿರಾ ಕ್ಯಾಂಟೀನ್‌ನಲ್ಲಿ ಇಂಡೆಂಟ್ ಪ್ರಕಾರವೇ ಬೆಳಗಿನ ತಿಂಡಿ, ಮಧ್ಯಾಹ್ನ ಮತ್ತು ರಾತ್ರಿ ಊಟವನ್ನೂ ಪೂರೈಸಲಾಗುತ್ತಿದೆ. ಇದರ ಪ್ರಕಾರ ಊಟ ಖಾಲಿಯಾಗಲಿ, ಬಿಡಲಿ ಹಣವನ್ನು ಪಾವತಿ ಮಾಡಲೇಬೇಕಿದೆ ಎಂದು ತಿಳಿಸಿದರು.
ಪ್ರತಿ ಕ್ಯಾಂಟೀನ್‌ಗೂ ಮೂರು ಹಂತಗಳಲ್ಲಿ ಆಹಾರವನ್ನು ಪೂರೈಸಲಾಗುತ್ತಿದೆ. ಸೇನಾ ಅಧಿಕಾರಿಗಳ ಮೂಲಕ ತಪಾಸಣೆ ನಡೆಸಿದ ಬಳಿಕವೇ ಈ ಆಹಾರವನ್ನು ಇಂದಿರಾ ಕ್ಯಾಂಟೀನ್‌ಗೆ ನೀಡಲಾಗುತ್ತದೆ. ಬೆಳಗಿನ ತಿಂಡಿಗೆ 9ರೂ.50ಪೈಸೆ, ಊಟಕ್ಕೆ 11ರೂ. 25ಪೈಸೆಯಂತೆ ಸಹಾಯಧನ ನೀಡಲಾಗುತ್ತಿದೆ. ಪ್ರತಿ ತಿಂಗಳು 6ಕೋಟಿ 24ಲಕ್ಷ ರೂ. ವೆಚ್ಚವಾಗುತ್ತಿದೆ ಎಂದು ಅವರು ತಿಳಿಸಿದರು.
ನವೆಂಬರ್‌ನಲ್ಲಿ 151ಇಂದಿರಾ ಕ್ಯಾಂಟೀನ್ ಮತ್ತು ಡಿಸೆಂಬರ್‌ನಲ್ಲಿ 150 ಕ್ಯಾಂಟೀನ್‌ಗಳು ಆರಂಭವಾಗಿದೆ. ಆರೋಪಗಳ ಬಗ್ಗೆ ದಾಖಲೆಯಿದ್ದಲ್ಲಿ ಅದನ್ನು ಪರಿಶೀಲಿಸಿ, ಸಂಬಂಧಪಟ್ಟವರ ವಿರುದ್ಧ ಕ್ರಮಕ್ಕೆಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.