ಟೆಂಪೊ ಟ್ರಾವೆಲರ್ ಢಿಕ್ಕಿ: ಮಹಿಳೆ ಮೃತ್ಯು
ಬೆಂಗಳೂರು, ಜ.5: ಶರವೇಗವಾಗಿ ಬಂದ ಟೆಂಪೊ ಟ್ರಾವೆಲರ್ ಮುಂದೆ ಹೋಗುತ್ತಿದ್ದ ಕಾರು, ತಳ್ಳುಗಾಡಿಗೆ ಢಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟುತ್ತಿದ್ದ ಮಹಿಳೆಯೊಬ್ಬರು ಮೃತಪಟ್ಟಿರುವ ದುರ್ಘಟನೆ ರಾಜಾಜಿನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕಲಬುರ್ಗಿಯ ಮೂಲದ ಮರಿಯಮ್ಮ (39) ಮೃತಪಟ್ಟ ಮಹಿಳೆ ಎಂದು ಪೊಲೀಸರು ಗುರುತಿಸಿದ್ದಾರೆ.
ರಾಜಾಜಿನಗರದ ರಾಜ್‌ಕುಮಾರ್ ಸಮಾಧಿ ಬಳಿ ಶುಕ್ರವಾರ ಬೆಳಗ್ಗೆ 8ರ ವೇಳೆ ಮರಿಯಮ್ಮ ಅವರು ರಸ್ತೆ ದಾಟುತ್ತಿದ್ದಾಗ ವೇಗವಾಗಿ ಬಂದ ಟೆಂಪೊ ಟ್ರಾವಲರ್ ಆಟೊ, ಕಾರ್‌ಗೆ ಢಿಕ್ಕಿ ಹೊಡೆದಿದೆ. ಕಾರು ತಳ್ಳುಗಾಡಿಗೆ ಢಿಕ್ಕಿ ಹೊಡೆದು ಮರಿಯಮ್ಮ ಅವರ ಮೇಲೆ ಹರಿದಿದೆ ಎನ್ನಲಾಗಿದೆ.
ಇದರಿಂದ ಗಂಭೀರವಾಗಿ ಗಾಯಗೊಂಡ ಮರಿಯಮ್ಮ ಅವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾರೆ. ಪ್ರಕರಣ ಸಂಬಂಧ ರಾಜಾಜಿನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದ್ದು, ಟೆಂಪೊ ಟ್ರಾವಲರ್ ಚಾಲಕ ಮಂಜುನಾಥ ಎಂಬಾತನನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.