ವಿದೇಶದಿಂದ ಕಲ್ಲಿದ್ದಲು ಖರೀದಿಗೆ ನಿರ್ಧಾರ: ಡಿ.ಕೆ.ಶಿವಕುಮಾರ್
ಬೆಂಗಳೂರು, ಜ.5: ರಾಜ್ಯದಲ್ಲಿ ತಲೆದೋರಿರುವ ಕಲ್ಲಿದ್ದಲು ಕೊರತೆ ನೀಗಿಸಲು ವಿದೇಶದಿಂದ ಕಲ್ಲಿದ್ದಲು ಖರೀದಿಗೆ ನಿರ್ಧರಿಸಲಾಗಿದ್ದು, ರಾಜ್ಯ ಸರಕಾರವು ನೇರವಾಗಿ ಶೇ.35ರಷ್ಟು ವಿದೇಶಿ ಕಲ್ಲಿದ್ದಲು ಖರೀದಿ ಮಾಡಬಹುದಾಗಿದೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು.
ಶುಕ್ರವಾರ ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ವಿದೇಶದಿಂದ ಕಲ್ಲಿದ್ದಲು ಖರೀದಿಗೆ ಸಂಬಂಧಿಸಿದಂತೆ ಈಗಾಗಲೆ ಟೆಂಡರ್ ಕರೆಯಲಾಗಿದೆ. ಗುಜರಾತ್ ರಾಜ್ಯ ಸರಕಾರವು 25 ಲಕ್ಷ ಟನ್ ವಿದೇಶಿ ಕಲ್ಲಿದ್ದಲ್ಲನ್ನು ಖರೀದಿಸಿದೆ ಎಂದರು.
ರಾಜ್ಯ ವಿದ್ಯುತ್ ನಿಗಮದ ಸಭೆಯಲ್ಲಿಯೂ ವಿದೇಶಿ ಕಲ್ಲಿದ್ದಲು ಖರೀದಿಯ ಸಾಧಕ-ಬಾಧಕಗಳ ಚರ್ಚೆ ನಡೆಸಲಾಗಿದೆ. ನಾಲ್ಕೈದು ದಿನಗಳಲ್ಲಿ ಈ ಬಗ್ಗೆ ಸೂಕ್ತವಾದ ನಿರ್ಧಾರ ಕೈಗೊಳ್ಳಲಾಗುವುದು. ವಿದೇಶಿ ಕಲ್ಲಿದ್ದಲ್ಲನ್ನು ಬಳಸುವ ಸಾಮರ್ಥ್ಯವು ನಮ್ಮ ವಿದ್ಯುತ್ ಉತ್ಪಾದನಾ ಘಟಕಗಳಲ್ಲಿರುವ ಯಂತ್ರೋಪಕರಣಗಳಿಗಿದೆ ಎಂದು ಅವರು ಹೇಳಿದರು.
ರಾಜ್ಯಕ್ಕೆ ಕಲ್ಲಿದ್ದಲು ಪೂರೈಕೆ ಮಾಡುವಲ್ಲಿ ಕೇಂದ್ರ ಸರಕಾರವು ಮಲತಾಯಿ ಧೋರಣೆ ಅನುಸರಿಸುತ್ತಿದೆ. ರಾಜ್ಯಕ್ಕೆ 119.57 ಲಕ್ಷ ಮೆಟ್ರಿಕ್ ಟನ್ ಕಲ್ಲಿದ್ದಲು ಮಂಜೂರಾಗಿದ್ದರೂ ಇದುವರೆಗೂ 63.9 ಲಕ್ಷ ಮೆಟ್ರಿಕ್ ಟನ್ ಮಾತ್ರ ಪೂರೈಸಲಾಗಿದೆ. ಉಳಿದ 53.1 ಲಕ್ಷ ಮೆಟ್ರಿಕ್ ಟನ್ ಲಭ್ಯವಾಗಿಲ್ಲ ಎಂದು ಶಿವಕುಮಾರ್ ಹೇಳಿದರು.
ಬಳ್ಳಾರಿಯಲ್ಲಿ ಏಳು ದಿನಗಳಿಗಾಗುವಷ್ಟು, ರಾಯಚೂರಿನಲ್ಲಿ ಒಂದು ದಿನಕ್ಕಾಗುವಷ್ಟು ಮಾತ್ರ ಕಲ್ಲಿದ್ದಲಿದೆ. ಮುಂಜಾಗ್ರತಾ ಕ್ರಮವಾಗಿ ಬಳ್ಳಾರಿ, ರಾಯಚೂರಿನ ತಲಾ ಎರಡು ವಿದ್ಯುತ್ ಘಟಕಗಳನ್ನು ಸ್ಥಗಿತಗೊಳಿಸಿ ಕಲ್ಲಿದ್ದಲನ್ನು ಉಳಿತಾಯ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಸಂಸತ್ತಿನಲ್ಲಿ ಸುಳ್ಳು ಹೇಳಿದ ಕೇಂದ್ರ ಸಚಿವ: ಕಲ್ಲಿದ್ದಲು ಹಂಚಿಕೆ ವಿಚಾರದಲ್ಲಿ ಕರ್ನಾಟಕ ಸರಕಾರ ತಮ್ಮನ್ನು ಸಂಪರ್ಕಿಸಿಲ್ಲ ಎಂದು ಕೇಂದ್ರ ಇಂಧನ ಸಚಿವ ಪಿಯೂಷ್ ಗೋಯಲ್ ಸಂಸತ್ತಿನಲ್ಲಿ ನೀಡಿರುವ ಹೇಳಿಕೆ ಹಸಿ ಸುಳ್ಳು. ನಾನು ಹಾಗೂ ಮುಖ್ಯಮಂತ್ರಿ ಐದು ಬಾರಿ ಅವರನ್ನು ಖುದ್ದಾಗಿ ಭೇಟಿ ಮಾಡಲು ಪ್ರಯತ್ನಿಸಿದ್ದೇವೆ. ಅಧಿಕಾರಿಗಳು 55ಕ್ಕೂ ಹೆಚ್ಚು ಬಾರಿ ಸಂಪರ್ಕಿಸಿದ್ದಾರೆ. ವಾಸ್ತವ ಹೀಗಿದ್ದರೂ ಸಂಸತ್ತಿನಲ್ಲಿ ಸುಳ್ಳು ಹೇಳುವ ಮೂಲಕ ರಾಜಕಾರಣ ಮಾಡುತ್ತಿದ್ದಾರೆ ಎಂದು ಶಿವಕುಮಾರ್ ಆರೋಪಿಸಿದರು.
ನಮ್ಮ ರಾಜ್ಯಕ್ಕೆ ಮಹಾರಾಷ್ಟ್ರದಲ್ಲಿ ಹಂಚಿಕೆಯಾಗಿರುವ ಕಲ್ಲಿದ್ದಲು ನಿಕ್ಷೇಪ ರದ್ದು ಮಾಡುವಂತೆ ನೋಟಿಸ್ ನೀಡಿದ್ದಾರೆ. ಈ ಬಗ್ಗೆ ಪಿಯೂಷ್ ಗೋಯಲ್ ಸೇರಿದಂತೆ ಮಹಾರಾಷ್ಟ್ರದ ಮುಖ್ಯಮಂತ್ರಿ, ಸಚಿವರನ್ನು ಭೇಟಿ ಮಾಡಿ ಚರ್ಚಿಸಿದರೂ ಯಾವುದೆ ಪ್ರಯೋಜನವಾಗಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಕಲ್ಲಿದ್ದಲು ಹಂಚಿಕೆ ಸಂಬಂಧಪಟ್ಟಂತೆ ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣ ವಿಚಾರಣೆ ಹಂತದಲ್ಲಿದೆ. ಯಾವುದೆ ರೀತಿಯಲ್ಲಿ ತೀರ್ಪು ಬಂದರೂ ಸ್ವಾಗತಿಸುತ್ತೇವೆ. ವಿದ್ಯುತ್ ವಿಚಾರದಲ್ಲಿ ನಾವು ರಾಜಕಾರಣ ಮಾಡುತ್ತಿಲ್ಲ. ಸ್ವಾಭಿಮಾನ ಬಿಟ್ಟು ರಾಜ್ಯದ ಜನರಿಗಾಗಿ ಮತ್ತೊಮ್ಮೆ ಪಿಯೂಷ್ ಗೋಯಲ್‌ರನ್ನು ಭೇಟಿ ಮಾಡಲು ಪ್ರಯತ್ನಿಸುತ್ತೇನೆ ಎಂದು ಅವರು ಹೇಳಿದರು.
ಬೇಸಿಗೆಯಲ್ಲಿ ಎದುರಾಗುವ ವಿದ್ಯುತ್ ಕೊರತೆಯನ್ನು ನೀಗಿಸಲು ಪ್ರತಿ ಯೂನಿಟ್‌ಗೆ 4.80 ರೂ.ಗಳಂತೆ 1 ಸಾವಿರ ಮೆಗಾವ್ಯಾಟ್ ವಿದ್ಯುತ್ ಖರೀದಿ ಜತೆಗೆ 10 ಲಕ್ಷ ಮೆಟ್ರಿಕ್ ಟನ್ ಕಲ್ಲಿದ್ದಲು ಖರೀದಿಗೆ ಟೆಂಡರ್ ಕರೆಯಲಾಗಿದೆ. 15 ದಿನಗಳಲ್ಲಿ ಈ ಪ್ರಕ್ರಿಯೆಗಳನ್ನು ಅಂತಿಮಗೊಳಿಸಲಾಗುವುದು ಎಂದು ಶಿವಕುಮಾರ್ ತಿಳಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ 2.50 ರೂ.ಗೆ ಒಂದು ಯೂನಿಟ್ ವಿದ್ಯುತ್ ಕೊಡಿಸುವುದಾಗಿ ಹೇಳಿಕೆ ನೀಡಿದರು. ಈ ವಿಚಾರವನ್ನು ನಾನು ಅಖಿಲ ಭಾರತ ಇಂಧನ ಸಚಿವರ ಸಮಾವೇಶದಲ್ಲಿ ಪ್ರಸ್ತಾಪಿಸಿದರೆ ಯಾರೊಬ್ಬರೂ ಪ್ರತಿಕ್ರಿಯೆ ನೀಡಿಲ್ಲ ಎಂದು ಶಿವಕುಮಾರ್ ತಿರುಗೇಟು ನೀಡಿದರು.
ರಾಜ್ಯದಲ್ಲಿ ಬೇಡಿಕೆಗಿಂತ 284 ಮೆಗಾವ್ಯಾಟ್ ಹೆಚ್ಚುವರಿ ವಿದ್ಯುತ್ ಲಭ್ಯವಿದೆ. ಆದುದರಿಂದ, ರಾಜ್ಯದ ಜನತೆ ಆತಂಕ ಪಡುವ ಅಗತ್ಯವಿಲ್ಲ. ಕೇಂದ್ರದಿಂದ 4837 ದಶಲಕ್ಷ ಯೂನಿಟ್, ರಾಜ್ಯ ಸರಕಾರದಿಂದ 3734 ದಶಲಕ್ಷ ಯೂನಿಟ್, ಎನ್‌ಟಿಪಿಸಿಯಿಂದ 1568 ದಶಲಕ್ಷ ಯೂನಿಟ್, ಖಾಸಗಿಯವರಿಂದ 900 ದಶಲಕ್ಷ ಯೂನಿಟ್, ಪಾವಗಡದಿಂದ 172 ದಶಲಕ್ಷ ಯೂನಿಟ್ ಖರೀದಿ ಮಾಡಲಾಗಿದೆ ಎಂದು ಶಿವಕುಮಾರ್ ವಿವರಣೆ ನೀಡಿದರು.
ಬೇಸಿಗೆಯಲ್ಲಿ ಎದುರಾಗುವ ವಿದ್ಯುತ್ ಕೊರತೆಯನ್ನು ನೀಗಿಸಲು ಪ್ರತಿ ಯೂನಿಟ್‌ಗೆ 4.80 ರೂ.ಗಳಂತೆ 1 ಸಾವಿರ ಮೆಗಾವ್ಯಾಟ್ ವಿದ್ಯುತ್ ಖರೀದಿ ಜತೆಗೆ 10 ಲಕ್ಷ ಮೆಟ್ರಿಕ್ ಟನ್ ಕಲ್ಲಿದ್ದಲು ಖರೀದಿಗೆ ಟೆಂಡರ್ ಕರೆಯಲಾಗಿದೆ. 15 ದಿನಗಳಲ್ಲಿ ಈ ಪ್ರಕ್ರಿಯೆಗಳನ್ನು ಅಂತಿಮಗೊಳಿಸಲಾಗುವುದು.
ಬೇಸಿಗೆ ಹಾಗೂ ಪರೀಕ್ಷೆಯ ಸಂದರ್ಭದಲ್ಲಿ ಮಕ್ಕಳಿಗೆ ಯಾವುದೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು. ಯಾವುದೇ ಕಾರಣಕ್ಕೂ ಲೋಡ್ ಶೆಡ್ಡಿಂಗ್‌ಗೆ ಅವಕಾಶ ನೀಡುವುದಿಲ್ಲ. ಶರಾವತಿಯಲ್ಲಿ ನೀರು ಸಂಗ್ರಹ, ಪವನ ಶಕ್ತಿ, ಸೋಲಾರ್ ಸೇರಿದಂತೆ ಎಲ್ಲ ಮೂಲಗಳಿಂದ ವಿದ್ಯುತ್ ಸಂಗ್ರಹಿಸಿಡಲಾಗಿದೆ.-ಡಿ.ಕೆ.ಶಿವಕುಮಾರ್, ಇಂಧನ ಸಚಿವ