×
Ad

ಪೌರ ಕಾರ್ಮಿಕರನ್ನು ಸೌಜನ್ಯದಿಂದ ಕಾಣಬೇಕು: ಸಚಿವ ಎಚ್.ಆಂಜನೇಯ

Update: 2018-01-05 19:16 IST

ಬೆಂಗಳೂರು, ಜ. 5: ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಸಫಾಯಿ ಕಾರ್ಮಿಕರು ಸಮಾಜದ ಕಟ್ಟಕಡೆಯ ವರ್ಗದವರಾಗಿದ್ದು, ತಮ್ಮ ಆರೋಗ್ಯವನ್ನು ಬಲಿಕೊಟ್ಟು ಸಮಾಜದ ಆರೋಗ್ಯ ಕಾಪಾಡಲು ಹಗಲಿರುಳು ಶ್ರಮಿಸುತ್ತಿರುವ ಪೌರ ಕಾರ್ಮಿಕರನ್ನು ಸೌಜನ್ಯದಿಂದ ಕಾಣುವಂತಾದರೆ ಅದೇ ನಾವುಗಳು ಅವರಿಗೆ ಸಲ್ಲಿಸುವ ಗೌರವ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ತಿಳಿಸಿದ್ದಾರೆ.

ಶುಕ್ರವಾರ ನಗರದ ಮಿಷನ್ ರಸ್ತೆಯಲ್ಲಿರುವ ಯೂನಿಟಿ ಬಿಲ್ದಿಂಗ್ ಆವರಣದಲ್ಲಿ ಕಾರ್ಯಾರಂಭಗೊಂಡ ಸಫಾಯಿ ಕರ್ಮಚಾರಿ ಆಯೋಗದ ನೂತನ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನಿಕೃಷ್ಟ ಕಾಯಕವನ್ನು ಮಾಡುವ ಪೌರ ಕಾರ್ಮಿಕರು ನಿವೃತ್ತಿಗೆ ಮುನ್ನವೇ ನಾನಾ ಕಾಯಿಲೆಗಳಿಂದ ಬಳಲಿ ಸಾವನ್ನಪ್ಪುತ್ತಿರುವುದು ದುರಾದೃಷ್ಟಕರ ಎಂದು ವಿಷಾದಿಸಿದರು.

ಸಫಾಯಿ ಕರ್ಮಚಾರಿ ಕುಟುಂಬ ವರ್ಗದವರಿಗೆ ಯಾವುದೇ ಮೂಲಭೂತ ಸೌಕರ್ಯ ಇರುವುದಿಲ್ಲ. ಇವರ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಭದ್ರತೆ ಕಾಪಾಡಲು ರಾಜ್ಯ ಸರಕಾರ ಸಫಾಯಿ ಕರ್ಮಚಾರಿಗಳ ಆಯೋಗವನ್ನು 2013ರಲ್ಲಿ ರಚಿಸಿದ್ದು, ಸಫಾಯಿ ಕರ್ಮಚಾರಿಗಳು ಎದುರಿಸುತ್ತಿರುವ ಸಮಸ್ಯೆಗಳು, ಕುಂದು-ಕೊರತೆಗಳನ್ನು ಗಣನೆಗೆ ತೆಗೆದುಕೊಂಡು ಇವರ ಸ್ಥಾನಮಾನ, ಸೌಲಭ್ಯಗಳು ಮತ್ತು ಅವಕಾಶಗಳಲ್ಲಿನ ಅಸಮಾನತೆಯನ್ನು ನಿರ್ಮೂಲನೆ ಮಾಡುವುದಕ್ಕೆ ಕೈಗೊಳ್ಳಬೇಕಾದ ರಚನಾತ್ಮಕ ಕಾರ್ಯಕ್ರಮಗಳನ್ನು ಆಯೋಗವು ಕೈಗೊಳ್ಳುತ್ತಿವೆ ಎಂದು ಹೇಳಿದರು.

ನಿಗಮವು ಪೌರಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಸಾಲ, ಉದ್ಯೋಗ ಕೈಗೊಳ್ಳಲು ಆರ್ಥಿಕ ನೆರವು, ಉನ್ನತ ಶಿಕ್ಷಣ, ಸ್ವಯಂ ಉದ್ಯೋಗ, ವಸತಿ, ನಿವೇಶನ ಮುಂತಾದ ಸೌಲಭ್ಯಗಳನ್ನು ಒದಗಿಸುವ ಮೂಲಕ ಪೌರಕಾರ್ಮಿಕರ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಿದೆ ಎಂದು ಅವರು ತಿಳಿಸಿದರು.

ವಿದೇಶಗಳಲ್ಲಿ ಪೌರಕಾರ್ಮಿಕರು ನಿರ್ವಹಿಸುತ್ತಿರುವ ಕೆಲಸ ಕಾರ್ಯಗಳನ್ನು ವೀಕ್ಷಿಸಿ, ಹೆಚ್ಚಿನ ಅನುಭವ ಪಡೆದುಕೊಳ್ಳುವ ಸಲುವಾಗಿ ಪೌರಕಾರ್ಮಿಕರ ವಿದೇಶಿ ಅಧ್ಯಯನ ಪ್ರವಾಸದ ಅವಕಾಶ ಕಲ್ಪಿಸಲಾಗಿದೆ ಎಂದ ಅವರು, ಸಾರ್ವಜನಿಕರು ಮ್ಯಾನ್‌ಹೋಲ್‌ಗಳಲ್ಲಿ ಮ್ಯಾನುವಲ್ ಸ್ಕ್ಯಾವೆಂಜರ್‌ಗಳನ್ನು ಇಳಿಸದೆ ಯಂತ್ರದ ಮೂಲಕ ಸ್ವಚ್ಛಗೊಳಿಸುವ ಮನಸ್ಥಿತಿ ಹೊಂದಬೇಕು ಮತ್ತು ಈ ನಿಟ್ಟಿನಲ್ಲಿ ವ್ಯಾಪಕ ಪ್ರಚಾರ, ಅರಿವು ಅತ್ಯಗತ್ಯ ಎಂದರು.

ಇದೇ ಸಂದರ್ಭದಲ್ಲಿ ಸಚಿವರು ಆಯೋಗ ಹೊರತಂದಿರುವ ನೂತನ ಕ್ಯಾಲೆಂಡರ್ ಬಿಡುಗಡೆ ಮಾಡಿದರು. ಆಯೋಗದ ಅಧ್ಯಕ್ಷ ಎಂ.ಆರ್.ವೆಂಕಟೇಶ್, ಆಯುಕ್ತ ವಿಕಾಸ್ ಕುಮಾರ್ ವಿಕಾಸ್, ಸಲಹೆಗಾರ ಇ.ವೆಂಟಯ್ಯ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ದೇಶದಲ್ಲಿಯೇ ಪ್ರಥಮ ಬಾರಿಗೆ ಕರ್ನಾಟಕದಲ್ಲಿ ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ನಿಗಮವನ್ನು ನೋಂದಣಿ ಮಾಡಿಸಿ ಕಚೇರಿ ಆರಂಭಕ್ಕೆ ಸಕಲ ಸಿದ್ದತೆ ಮಾಡಲಾಗಿದ್ದು, ಇದೇ ತಿಂಗಳಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಗಮವನ್ನು ಲೋಕಾರ್ಪಣೆಗೊಳಿಸಲಿದ್ದಾರೆ.
-ಎಚ್.ಆಂಜನೇಯ, ಸಮಾಜ ಕಲ್ಯಾಣ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News