ವೈಯಕ್ತಿಕ ಕಾನೂನು ಮಂಡಳಿ ತೀರ್ಮಾನಕ್ಕೆ ಬದ್ಧ: ಕರ್ನಾಟಕದ ಉಲಮಾಗಳ ನಿರ್ಧಾರ
ಬೆಂಗಳೂರು, ಜ.5: ಕೇಂದ್ರ ಸರಕಾರವು ಲೋಕಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದುಕೊಂಡಿರುವ ತ್ರಿವಳಿ ತಲಾಕ್ ಮಸೂದೆಗೆ ಸಂಬಂಧಿಸಿದಂತೆ ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ ಕೈಗೊಳ್ಳುವ ತೀರ್ಮಾನಕ್ಕೆ ಬದ್ಧವಿರಲು ರಾಜ್ಯದ ಉಲಮಾಗಳು ನಿರ್ಧರಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ತನ್ವೀರ್‌ಸೇಠ್ ನೇತೃತ್ವದಲ್ಲಿ ನಡೆದ ಮುಸ್ಲಿಮ್ ಸಮುದಾಯದ ಜನಪ್ರತಿನಿಧಿಗಳು, ಉಲಮಾಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳ ಸಭೆಯಲ್ಲಿ ಈ ಅಭಿಪ್ರಾಯ ವ್ಯಕ್ತವಾಗಿದೆ.
ಶಾಸಕರಾದ ಇಕ್ಬಾಲ್ ಅನ್ಸಾರಿ, ಝಮೀರ್ ಅಹ್ಮದ್‌ಖಾನ್, ಡಾ.ರಫೀಕ್ ಅಹ್ಮದ್, ವಿಧಾನಪರಿಷತ್ ಸದಸ್ಯ ಇಕ್ಬಾಲ್ ಅಹ್ಮದ್ ಸರಡಗಿ, ಅಮೀರೆ ಶರೀಅತ್ ಮೌಲಾನ ಸಗೀರ್ ಅಹ್ಮದ್ ರಶಾದಿ, ಮುಫ್ತಿ ಇಫ್ತಿಖಾರ್ ಅಹ್ಮದ್‌ಖಾಸ್ಮಿ, ಮೌಲಾನ ಮಕ್ಸೂದ್ ಇಮ್ರಾನ್, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ವಕೀಲರು, ಮಹಿಳಾ ಸಂಘಗಳ ಪ್ರತಿನಿಧಿಗಳು ಸಭೆಯಲ್ಲಿ ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ.
ಕೇಂದ್ರ ಸರಕಾರವು ತ್ರಿವಳಿ ತಲಾಕ್ ಮಸೂದೆಗೆ ಸಂಬಂಧಿಸಿದಂತೆ ಎಲ್ಲ ರಾಜ್ಯಗಳಿಗೂ ಪತ್ರ ಬರೆದು ತಮ್ಮ ತಮ್ಮ ಅಭಿಪ್ರಾಯ ತಿಳಿಸುವಂತೆ ಸೂಚಿಸಿತ್ತು. ಅದರಂತೆ, ಉಲಮಾಗಳೊಂದಿಗೆ ಚರ್ಚಿಸಿ ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿದೆ. ಶೀಘ್ರದಲ್ಲಿ ಕೇಂದ್ರ ಸರಕಾರಕ್ಕೆ ನಮ್ಮ ಅಭಿಪ್ರಾಯ ತಿಳಿಸುತ್ತೇವೆ.
-ತನ್ವೀರ್‌ಸೇಠ್, ಅಲ್ಪಸಂಖ್ಯಾತರ ಕಲ್ಯಾಣ ಸಚಿವ