ಬಿಎಸ್‌ವೈ ಮೌನ ಅಚ್ಚರಿ ಮೂಡಿಸಿದೆ: ಸಚಿವ ಎಂ.ಬಿ.ಪಾಟೀಲ್
ಬೆಂಗಳೂರು, ಜ. 6: ಉತ್ತರ ಕರ್ನಾಟಕ ಪ್ರದೇಶಕ್ಕೆ ಕುಡಿಯುವ ನೀರು ಒದಗಿಸುವ ಕಳಸಾ-ಬಂಡೂರಿ ಯೋಜನೆಗೆ ಅವಶ್ಯವಿರುವ 7.56 ಟಿಎಂಸಿ ನೀರು ಹರಿಸಲು ಗೋವಾ ಸರಕಾರ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ ಎಂದು ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಕರ್ನಾಟಕದ ಪಾಲಿನ 36 ಟಿಎಂಸಿ ನೀರನ್ನು ಪಡೆಯಲು ಮಹಾದಾಯಿ ನ್ಯಾಯಾಧೀಕರಣದ ಮುಂದೆ ಹಿರಿಯ ನ್ಯಾಯವಾದಿ ಎಫ್.ಎಸ್ ನಾರಿಮನ್ ನೇತೃತ್ವದಲ್ಲಿ ಸಮರ್ಥವಾಗಿ ವಾದ ಮಾಡಲಾಗುತ್ತಿದೆ ಎಂದು ಎಂ.ಬಿ.ಪಾಟೀಲ್ ಹೇಳಿದರು.
ಗೋವಾ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್, ಮಹಾದಾಯಿ ವಿಚಾರದಲ್ಲಿ ಪದೇ-ಪದೇ ತಮ್ಮ ನಿಲುವು ಬದಲಿಸುತ್ತಿದ್ದು, ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮೌನಕ್ಕೆ ಶರಣಾಗಿರುವುದು ಅಚ್ಚರಿ ಮೂಡಿಸಿದೆ ಎಂದು ಪಾಟೀಲ್ ಟೀಕಿಸಿದ್ದಾರೆ.
ಮಹಾದಾಯಿ ನ್ಯಾಯಾಧೀಕರಣದ ಮುಂದೆ ಮಹಾದಾಯಿ ಕಣಿವೆಯಲ್ಲಿನ ಒಟ್ಟು ಇಳುವರಿಯ ಬಗ್ಗೆ ಈಗಾಗಲೇ ಕರ್ನಾಟಕ ರಾಜ್ಯವು, ಕೇಂದ್ರ ಜಲ ಆಯೋಗವು 2003ರಲ್ಲಿ ಸಿದ್ಧಪಡಿಸಿರುವ ವರದಿಯಂತೆ 200 ಟಿಎಂಸಿ ನೀರು ಲಭ್ಯವಿದೆ ಎಂದು ಹೊಸದಿಲ್ಲಿಯ ಐಐಟಿಯ ಪ್ರೊಫೆಸರ್ ಗೊಸೇನ್ ಪತ್ರದ ಮೂಲಕ ಸಮರ್ಥವಾಗಿ ಪ್ರತಿಪಾದಿಸಿರುತ್ತದೆ. ಮಹಾರಾಷ್ಟ್ರವು ಕೇಂದ್ರ ಜಲ ಆಯೋಗದ ವರದಿ ಆಧರಿಸಿ ಶಪಥ ಪತ್ರವನ್ನು ಸಲ್ಲಿಸಿದೆ ಎಂದು ಪಾಟೀಲ್ ಹೇಳಿದ್ದಾರೆ.
ಅಲ್ಲದೆ, ಗೋವಾ ರಾಜ್ಯದ ಪ್ರಸ್ತುತ ಮಹಾದಾಯಿ ಕಣಿವೆಯ ನೀರಿನ ಬಳಕೆಯ ಪ್ರಮಾಣವು 10 ಟಿಎಂಸಿಗಿಂತಲೂ ಕಡಿಮೆಯಾಗಿದ್ದು, ಇಷ್ಟು ಭಾರಿ ಪ್ರಮಾಣದ ನೀರು ಅನಾವಶ್ಯಕವಾಗಿ ಸಮುದ್ರವನ್ನು ಸೇರುತ್ತಿದ್ದು, ಇಂತಹ ಸಂದರ್ಭದಲ್ಲಿಯೂ ಆ ರಾಜ್ಯದ ಮುಖ್ಯಮಂತ್ರಿಗಳು ಅದನ್ನು ಕೊರತೆ ಕಣಿವೆ ಎಂದು ಪ್ರತಿಪಾದಿಸುತ್ತಿರುವುದು ನಿಜವಾಗಿಯೂ ದುರದೃಷ್ಟಕರ. ಕೇವಲ ರಾಜಕೀಯ ಲಾಭಕ್ಕಾಗಿ ಇಂತಹ ಹೇಳಿಕೆಯನ್ನು ನೀಡಿದ್ದಾರೆಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.