ವರದಿ ನೀಡಲು 6 ತಿಂಗಳು ಕಾಲಾವಕಾಶ ಅಗತ್ಯ: ನ್ಯಾ.ನಾಗಮೋಹನ್ ದಾಸ್
ಬೆಂಗಳೂರು, ಜ.6: ‘ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆ ವಿಚಾರ ಸಂಬಂಧ ರಾಜ್ಯ ಸರಕಾರ ನೀಡಿರುವ 4 ವಾರಗಳಲ್ಲಿ ವರದಿ ನೀಡಲು ಸಾಧ್ಯವಿಲ್ಲ. ಹೀಗಾಗಿ ಸಮಿತಿಗೆ ಕನಿಷ್ಟ 6 ತಿಂಗಳು ಕಾಲಾವಕಾಶ ನೀಡಬೇಕೆಂದು ಕೋರಿ ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು’ ಎಂದು ತಜ್ಞರ ಸಮಿತಿ ಅಧ್ಯಕ್ಷ ಹಾಗೂ ನಿವೃತ್ತ ನ್ಯಾ.ನಾಗಮೋಹನ್ ದಾಸ್ ತಿಳಿಸಿದ್ದಾರೆ.
ಶನಿವಾರ ವಿಕಾಸಸೌಧದಲ್ಲಿ ತಜ್ಞರ ಸಮಿತಿ ಸಭೆ ನಡೆಸಿದ ಅವರು, ತಜ್ಞರ ಸಮಿತಿಯಲ್ಲಿ ಮಹಿಳಾ ಸದಸ್ಯರ ನೇಮಕಕ್ಕೆ ಅಲ್ಪಸಂಖ್ಯಾತರ ಆಯೋಗಕ್ಕೆ ಮನವಿ ಮಾಡುತ್ತೇವೆ. ಲಿಂಗಾಯತ ಧರ್ಮದ ಬಗ್ಗೆ ಆಸಕ್ತಿ ಇರುವವರು ದಾಖಲೆ ಸಮೇತ ಸಮಿತಿಗೆ ಜ.25ರೊಳಗೆ ಅಹವಾಲು ಸಲ್ಲಿಸಲು ಅವಕಾಶವಿದೆ ಎಂದು ಹೇಳಿದರು.
ಲಿಂಗಾಯತ ಪ್ರತ್ಯೇಕ ಧರ್ಮ ಮತ್ತು ಅಲ್ಪಸಂಖ್ಯಾತರ ಸ್ಥಾನಮಾನ ಎರಡನ್ನೂ ನಾವು ಪರಾಮರ್ಶಿಸುತ್ತೇವೆ. ಎಲ್ಲರ ಅಹವಾಲು ಮನವಿಗಳಿಗೂ ಪ್ರಾಮುಖ್ಯತೆ ಇದ್ದು, ಯಾವುದನ್ನೂ ಕಡೆಗಣಿಸುವುದಿಲ್ಲ. ವೈಜ್ಞಾನಿಕವಾಗಿ, ಕಾನೂನಾತ್ಮಕವಾಗಿ ಕಾರ್ಯ ನಿರ್ವಹಿಸುತ್ತೇವೆ. ನಮ್ಮ ವರದಿಗೆ ಪರ-ವಿರೋಧ ಅಭಿಪ್ರಾಯ ವ್ಯಕ್ತಪಡಿಸಬಹುದು ಎಂದು ನಾಗಮೋಹನ್ ದಾಸ್ ಹೇಳಿದರು.
ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರ ಸಂಬಂಧ ಈಗಾಗಲೇ ಸಂಘ-ಸಂಸ್ಥೆಗಳು, ಮಠಾಧೀಶರು, ಇನ್ನಿತರ ವ್ಯಕ್ತಿಗಳು ಸೇರಿದಂತೆ ಈಗಾಗಲೇ 36 ಅಹವಾಲು ಬಂದಿವೆ ಎಂದ ಅವರು, ನಮ್ಮ ಕೆಲಸವನ್ನು ನಾವು ಕಾನೂನಾತ್ಮಕವಾಗಿ ಮಾಡುತ್ತೇವೆ. ಹೈಕೋರ್ಟಿನಲ್ಲಿರುವ ವ್ಯಾಜ್ಯ ಇರುವುದರಿಂದ ಆ ವಿಚಾರಕ್ಕೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ನಿರಾಕರಿಸಿದರು.
ನಿವೃತ್ತ ನ್ಯಾ.ಎಚ್.ಎನ್.ನಾಗಮೋಹನ್ ದಾಸ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಮಿತಿ ಸದಸ್ಯರಾದ ಪ್ರೊ.ಎಸ್.ಜಿ.ಸಿದ್ಧರಾಮಯ್ಯ, ಡಾ.ಸಿ.ಎಸ್.ದ್ವಾರಕಾನಾಥ್, ರಾಮಕೃಷ್ಣ ಮರಾಠೆ, ಪುರುಷೋತ್ತಮ ಬಿಳಿಮಲೆ, ಅಲ್ಪಸಂಖ್ಯಾತರ ಆಯೋಗದ ಆಯುಕ್ತ ಹಾಗೂ ಸಮಿತಿ ಸದಸ್ಯ ಕಾರ್ಯದರ್ಶಿ ಮೊಹಮ್ಮದ್ ಮೊಹೀಸಿನ್ ಪಾಲ್ಗೊಂಡಿದ್ದರು.
‘ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಅಲ್ಪಸಂಖ್ಯಾತ ಧರ್ಮದ ಸ್ಥಾನಮಾನ ನೀಡುವ ವಿಚಾರ ಸಂಬಂಧದ ತಜ್ಞರ ಸಮಿತಿಯ ಎರಡನೆ ಸಭೆಯನ್ನು ಜ.27ಕ್ಕೆ ನಡೆಸಲು ತೀರ್ಮಾನಿಸಲಾಗಿದೆ’
-ನ್ಯಾ.ನಾಗಮೋಹನ್ ದಾಸ್ ತಜ್ಞರ ಸಮಿತಿ ಅಧ್ಯಕ್ಷ