ತಜ್ಞರ ಸಮಿತಿಗೆ ಪ್ರಾಮುಖ್ಯತೆ ನೀಡುವುದಿಲ್ಲ: ಶಾಮನೂರು ಶಿವಶಂಕರಪ್ಪ
ಬೆಂಗಳೂರು, ಜ.6: ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಸಂಬಂಧಪಟ್ಟಂತೆ ರಾಜ್ಯ ಅಲ್ಪಸಂಖ್ಯಾತ ಆಯೋಗ ರಚಿಸಿರುವ ತಜ್ಞರ ಸಮಿತಿಗೆ ನಾವು ಯಾವುದೇ ಪ್ರಾಮುಖ್ಯತೆ ನೀಡುವುದಿಲ್ಲ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭಾ ಚುನಾವಣೆಯ ನಂತರ ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಸಂಬಂಧಿಸಿದಂತೆ ಯಾವುದೇ ವಿವಾದ ಇರುವುದಿಲ್ಲ. ಹೀಗಾಗಿ ತಜ್ಞರ ಸಮಿತಿ ನೀಡುವ ವರದಿಗೆ ಯಾವುದೇ ಬೆಲೆ ಇರುವುದಿಲ್ಲವೆಂದು ತಿಳಿಸಿದರು.
ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಸಂಬಂಧಪಟ್ಟಂತೆ ಸರಕಾರ ರಚಿಸಿರುವ ಸಮಿತಿಗೆ ನ್ಯಾ.ನಾಗಮೋಹನದಾಸ್ ಮತ್ತು ಸಮಿತಿ ಸದಸ್ಯರು ಒಪ್ಪಿಕೊಳ್ಳಬಾರದಿತ್ತು. ಆ ಸಮಿತಿಗೆ ಏನೂ ಬೆಲೆ ಇಲ್ಲ. ಸಮಿತಿ ಏನೇ ವರದಿ ಕೊಟ್ಟರೂ ಅದನ್ನು ವೀರಶೈವ ಮಹಾಸಭಾ ಒಪ್ಪಿಕೊಳ್ಳುವುದಿಲ್ಲವೆಂದು ಅವರು ಹೇಳಿದರು.
ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಒತ್ತಾಯಿಸುತ್ತಿದ್ದ ಬಹುತೇಕರು ಸುಮ್ಮನಾಗಿದ್ದಾರೆ. ಯಾವ ಪತ್ರಿಕೆಗಳಲ್ಲೂ ಅವರ ಹೇಳಿಕೆಗಳು ಬರುತ್ತಿಲ್ಲ. ಆದರೆ, ಸಚಿವರಾದ ವಿನಯ್‌ಕುಲಕರ್ಣಿ ಹಾಗೂ ಎಂ.ಬಿ.ಪಾಟೀಲ್ ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಪ್ರತ್ಯೇಕ ಧರ್ಮಕ್ಕಾಗಿ ಹೋರಾಟ ಮಾಡುತ್ತಿದ್ದಾರೆ, ಚುನಾವಣೆ ಮುಗಿದ ಬಳಿಕ ವೀರಶೈವ ಮತ್ತು ಲಿಂಗಾಯತ ವಿವಾದ ಇರುವುದೆ ಇಲ್ಲ. ಇದು ಚುನಾವಣೆಗಾಗಿ ಮಾತ್ರ ನಡೆಯುತ್ತಿರುವ ನಾಟಕ, ಹಾಗಾಗಿ ಇದಕ್ಕೆ ಹೆಚ್ಚಿನ ಮಹತ್ವ ನೀಡಬೇಕಿಲ್ಲ ಎಂದು ಅವರು ಟೀಕೆ ಮಾಡಿದರು.