×
Ad

ತಪ್ಪಿತಸ್ಥರಿಗೆ ಶಿಕ್ಷೆಯಾದರೆ ಭ್ರಷ್ಟಾಚಾರ ಪ್ರಕರಣಗಳು ಕಡಿಮೆಯಾಗುತ್ತವೆ: ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ

Update: 2018-01-06 18:12 IST

ಬೆಂಗಳೂರು, ಜ.6: ಭ್ರಷ್ಟಾಚಾರ ಪ್ರಕರಣಗಳಲ್ಲಿ ವಿಚಾರಣೆ ವೇಳೆ ದೂರುದಾರರು ಹಿಂದೇಟು ಹಾಕದಂತೆ, ಪೊಲೀಸರು ಜಾಣ್ಮೆಯಿಂದ ವರ್ತಿಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು ಎಂದು ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವಾನಾಥ್ ಶೆಟ್ಟಿ ಹೇಳಿದ್ದಾರೆ.

ಶನಿವಾರ ನಗರದ ಎಂ.ಎಸ್.ಕಟ್ಟಡದಲ್ಲಿರುವ ಕರ್ನಾಟಕ ಲೋಕಾಯುಕ್ತ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ‘ಲೋಕಾಯುಕ್ತ ಪೊಲೀಸರಿಗೆ ತರಬೇತಿ- ಕಾರ್ಯಾಗಾರ’ ಉದ್ಘಾಟಿಸಿ ಅವರು ಮಾತನಾಡಿದರು.

ಭ್ರಷ್ಟಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಂಗ್ರಹಿಸಿದ ಸಾಕ್ಷಾಧಾರಗಳನ್ನು, ಸಾಕ್ಷಿಗಳನ್ನು ಒದಗಿಸಿ ತಪ್ಪು ಮಾಡಿದವರಿಗೆ ಶಿಕ್ಷೆಯಾಗುವಂತೆ ಮಾಡಿದರೆ ಭ್ರಷ್ಟಾಚಾರ ಪ್ರಕರಣಗಳು ಕಡಿಮೆಯಾಗುತ್ತದೆ. ಜೊತೆಗೆ ಯಾವುದೇ ಸೇವೆಗಳು ಸಾರ್ವಜನಿಕರಿಗೆ ವಿಳಂಬ ಹಾಗೂ ಜಟಿಲವಾಗದಂತೆ ನಿಗದಿತ ಕಾಲಾವಧಿಯಲ್ಲಿ ಮಾಡಿದರೂ, ಈ ಪ್ರಕರಣಗಳನ್ನು ತಗ್ಗಿಸಬಹುದೆಂದು ಅವರು ತಿಳಿಸಿದರು.

ಭ್ರಷ್ಟಾಚಾರ ನಿಗ್ರಹ ಕಾರ್ಯಾಚರಣೆ ಜತೆಗೆ ಭ್ರಷ್ಟಾಚಾರಕ್ಕೆ ಅವಕಾಶವೇ ಇಲ್ಲದಂತಹ ವ್ಯವಸ್ಥೆಯನ್ನು ರೂಪಿಸಬೇಕಾದ ಅಗತ್ಯ ಇದೆ ಎಂದ ಅವರು, ಭ್ರಷ್ಟಾಚಾರ ನಿಗ್ರಹ ಕಾಯ್ದೆಯಲ್ಲಿ 1ರಿಂದ 7 ವರ್ಷದವರೆಗೆ ಶಿಕ್ಷೆ ಇದೆ. ಕಾನೂನುಗಳು ಕಠಿಣವಾಗಿದ್ದು, ಅವುಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು ಹೇಳಿದರು.

ಸಿಬ್ಬಂದಿ ಕೊರತೆ:

ವಿಧಿ-ವಿಜ್ಞಾನ ಪ್ರಯೋಗಾಲಯದಲ್ಲಿ ಸಿಬ್ಬಂದಿಗಳ ಕೊರತೆ ಇದೆ. ಇದರಿಂದ ಹಲವು ಪ್ರಕರಣಗಳ ವಿಚಾರಣೆ ವಿಳಂಬವಾಗುತ್ತದೆ. ಜೊತೆಗೆ ಪೊಲೀಸರು ವರದಿ ಸಲ್ಲಿಸಲು ತಡವಾಗುತ್ತದೆ. ಇನ್ನು ಕೇಂದ್ರದಲ್ಲಿ ಎಲ್.ಕೆ.ಅಡ್ವಾನಿ ಅವರು ಗೃಹ ಸಚಿವರಾಗಿದ್ದಾಗ ಎಫ್‌ಎಸ್‌ಎಲ್ ಅಭಿವೃದ್ಧಿಗೆ 150 ಕೋಟಿ ರೂ. ಅನುದಾನ ನೀಡಿದ್ದರು ಎಂದು ವಿಶ್ವನಾಥ್‌ಶೆಟ್ಟಿ ನುಡಿದರು.

ಕೆಲ ಪ್ರಕರಣಗಳಲ್ಲಿ ಧ್ವನಿ ಸಂಗ್ರಹಗಳನ್ನು ಸಾಕ್ಷಿಗಳಾಗಿ ಪರಿಗಣಿಸಲಾಗುವುದಿಲ್ಲ. ಅಂತಹ ಸಂದರ್ಭಗಳಲ್ಲಿ ಈ ಸಾಕ್ಷಿಗಳನ್ನು ಸಲ್ಲಿಸದಿರುವುದೇ ಸೂಕ್ತವಾಗುತ್ತದೆ. ಅಗತ್ಯವೆನಿಸಿದಾಗ ಮಾತ್ರ ಇಂತಹ ಸಾಕ್ಷಿಗಳನ್ನು ಪ್ರಸ್ತುತಪಡಿಸಬೇಕು ಎಂದರು.

ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ವಿ.ಜಗನ್ನಾಥ್ ಮಾತನಾಡಿ, ಎಫ್‌ಎಸ್‌ಎಲ್‌ನಲ್ಲಿ 280 ಹುದ್ದೆಗಳು ಖಾಲಿ ಇವೆ. ಪೊಲೀಸ್ ಇಲಾಖೆಯ ತಂತ್ರಜ್ಞಾನದಲ್ಲಿ ಪರಿಣಿತರಾಗಿರುವ ಪೇದೆಗಳಿಗೆ ವಿಶೇಷ ತರಬೇತಿ ನೀಡಿ ಎಫ್‌ಎಸ್‌ಎಲ್‌ಗೆ ವರ್ಗ ಮಾಡಬೇಕೆಂದು ಸಲಹೆ ಮಾಡಿದರು.

ಕಾರ್ಯಕ್ರಮದಲ್ಲಿ ಉಪಲೋಕಾಯುಕ್ತ ಸುಭಾಷ್ ಬಿ.ಅಡಿ,ಎನ್.ಆನಂದ್, ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಎ.ವಿ.ಚಂದ್ರಶೇಖರ್ ಸೇರಿ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News