×
Ad

ಮುಂದಿನ ಶೈಕ್ಷಣಿಕ ವರ್ಷದಿಂದ ಎಲ್ಲ ವರ್ಗಗಳ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್: ಸಚಿವ ಎಂ.ಬಿ.ಪಾಟೀಲ್

Update: 2018-01-06 19:02 IST

ವಿಜಯಪುರ, ಜ. 6: ಮುಂಬರುವ ಶೈಕ್ಷಣಿಕ ವರ್ಷದಿಂದ ಉನ್ನತ ಶಿಕ್ಷಣದ ಎಲ್ಲ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್‌ಟಾಪ್ ವಿತರಿಸಲಾಗುವುದು ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.

ಶನಿವಾರ ನಗರದ ಸರಕಾರಿ ಪಾಲಿಟೆಕ್ನಿಕ್ ಕಾಲೇಜ್‌ನಲ್ಲಿ ಸರಕಾರಿ ಪದವಿ ಕಾಲೇಜುಗಳ, ಪಾಲಿಟೆಕ್ನಿಕ್‌ನ ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೆ ರಾಜ್ಯ ಸರಕಾರದ ಉಚಿತ ಲ್ಯಾಪ್‌ಟಾಪ್ ವಿತರಣೆ ಯೋಜನೆಯಡಿ 270 ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಸರಕಾರ ಎಸ್ಸಿ-ಎಸ್ಟಿ ವರ್ಗದ ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ವಿತರಣಾ ಯೋಜನೆ ಜಾರಿಗೊಳಿಸಿದೆ. ಮುಂಬರುವ ಶೈಕ್ಷಣಿಕ ವರ್ಷದಿಂದ ಎಸ್ಸಿ-ಎಸ್ಟಿಗಳಿಗೆ ಈಗಿರುವ 2.5ಲಕ್ಷ ರೂ.ಗಳ ಕುಟುಂಬದ ವರಮಾನ 5ಲಕ್ಷ ರೂ.ಗಳಿಗೆ ನಿಗದಿಪಡಿಸಿ ಲ್ಯಾಪ್‌ಟಾಪ್ ವಿತರಿಸಲಾಗುತ್ತದೆ. ಅದರಂತೆ 2.5ಲಕ್ಷ ರೂ. ಕುಟುಂಬದ ವಾರ್ಷಿಕ ವರಮಾನದ ಹೊಂದಿರುವ ಇತರೆ ಎಲ್ಲ ವರ್ಗಗಳ ವಿದ್ಯಾರ್ಥಿಗಳಿಗೂ ಮುಂದಿನ ಶೈಕ್ಷಣಿಕ ವರ್ಷದಿಂದ ಉಚಿತವಾಗಿ ಲ್ಯಾಪ್‌ಟಾಪ್‌ಗಳನ್ನು ವಿತರಿಸಲಾಗುತ್ತದೆ ಎಂದರು.

ಎಲ್ಲ ವಿದ್ಯಾರ್ಥಿಗಳಿಗೆ ಶಿಕ್ಷಣ ದೊರಕಿಸಬೇಕು. ಅದರಂತೆ ಎಲ್ಲರಿಗೂ ಗುಣಮಟ್ಟದ ಶಿಕ್ಷಣ ಒದಗಿಸುವುದು ಸವಾಲಾಗಿ ಪರಿಣಮಿಸಿದೆ. ಈ ದಿಸೆಯಲ್ಲಿ ರಾಜ್ಯ ಸರಕಾರ ಬಡ, ಶೋಷಿತ ವರ್ಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರಕಿಸುವ ದಿಸೆಯಲ್ಲಿ ಉಚಿತ ಲ್ಯಾಪ್‌ಟಾಪ್ ಯೋಜನೆ ಜಾರಿಗೊಳಿಸಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ಡಾ.ಬಿ.ಆರ್.ಅಂಬೇಡ್ಕರ್ ಅವರು ಎಲ್ಲ ಜಾತಿಯ, ವರ್ಗದ ಜನರಿಗೆ ನ್ಯಾಯ ದೊರಕಿಸಬೇಕೆಂಬ ಉದ್ದೇಶದೊಂದಿಗೆ ಶ್ರೇಷ್ಠ ಸಂವಿಧಾನವನ್ನು ರಚಿಸಿದರು. ಅದರಂತೆ ಎಲ್ಲ ಬಡ, ಶೋಷಿತ ವರ್ಗಗಳ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರಕಿಸುವ ಮಹತ್ವಾಕಾಂಕ್ಷೆಯನ್ನು ಹೊಂದಿದ್ದರು. ಅದರಂತೆ ಬಸವಣ್ಣನವರು, ಶರಣರು ಸುಂದರ ಸಮಾಜ ನಿರ್ಮಿಸುವ ಧ್ಯೇಯವನ್ನು ಹೊಂದಿದ್ದರು. ಈ ದಿಸೆಯಲ್ಲಿ ರಾಜ್ಯ ಸರಕಾರ ಎಲ್ಲ ವರ್ಗಗಳ ಜನರಿಗೆ ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಮಾನ ಅವಕಾಶ ನೀಡಲು ಬದ್ಧವಾಗಿ ಹಲವು ಯೋಜನೆ ಜಾರಿಗೊಳಿಸಿದೆ. ಅದರಲ್ಲಿಯೂ ವಿಶೇಷವಾಗಿ ಎಸ್ಸಿ-ಎಸ್ಟಿಗಳಿಗೆ ಉಚಿತ ಲ್ಯಾಪ್‌ಟಾಪ್ ಯೋಜನೆ ಜಾರಿಗೊಳಿಸಿ, ಗುಣಮಟ್ಟದ ಶಿಕ್ಷಣ ದೊರಕಿಸಲು ಕಾರ್ಯಪ್ರವೃತ್ತರಾಗಿದೆ ಎಂದರು.

ನಗರ ಹಾಗೂ ಗ್ರಾಮಾಂತರ ಪ್ರದೇಶದ ಬಡ ಕುಟುಂಬಗಳ ಎಲ್ಲ ಮಕ್ಕಳಿಗೆ ಶಿಕ್ಷಣದಲ್ಲಿ ಸಮಾನ ಅವಕಾಶ ದೊರೆಯಬೇಕು. ವಿದ್ಯಾರ್ಥಿಗಳಲ್ಲಿಯೂ ಕುಟುಂಬಕ್ಕಾಗಿ ಬದುಕುವ ಮತ್ತು ಗೌರವಯುತ ಬದುಕು ಸಾಗಿಸುವ ಛಲ ಹೊಂದಿರುತ್ತಾರೆ. ಇಂತಹ ವಿದ್ಯಾರ್ಥಿಗಳಿಗೆ ಆಧುನಿಕ ತಂತ್ರಜ್ಞಾನಕ್ಕೆ ಅನುಗುಣವಾಗಿ ಲ್ಯಾಪ್‌ಟಾಪ್ ಒದಗಿಸುವ ಮೂಲಕ ಅವರ ಭವಿಷ್ಯ ರೂಪಿಸಲು ನೆರವಾಗುತ್ತಿದೆ. ಈ ವಿಷಯದಲ್ಲಿ ಸಿಎಂ ಹಾಗೂ ಉನ್ನತ ಶಿಕ್ಷಣ ಸಚಿವರ ಕಳಕಳಿಯಿಂದಾಗಿ ಬಡ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಭಾಗ್ಯ ಲಭ್ಯವಾಗಿದೆ ಎಂದರು.

ಒಟ್ಟು 270 ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಿದ್ದು, ಇದರಲ್ಲಿ 131 ಪ್ರಥಮ ದರ್ಜೆ ಕಾಲೇಜ್ ವಿದ್ಯಾರ್ಥಿಗಳಿಗೆ 109 ಸರಕಾರಿ ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ ಹಾಗೂ 30 ಪ್ರಥಮ ದರ್ಜೆ ಮಹಿಳಾ ಕಾಲೇಜ್ ವಿದ್ಯಾರ್ಥಿನಿಯರಿಗೆ ಲ್ಯಾಪ್‌ಟಾಪ್ ವಿತರಿಸಲಾಗಿದ್ದು, ವಿದ್ಯಾರ್ಥಿಗಳಿಗೆ ಸೂಕ್ತ ತರಬೇತಿಯನ್ನು ಆಯೋಜಿಸುವ ಮೂಲಕ ಲ್ಯಾಪ್‌ಟಾಪ್ ನಿರ್ವಹಣೆ ಕುರಿತು ಅವಶ್ಯಕ ಮಾಹಿತಿ ದೊರಕಿಸುವಂತೆ ಸಲಹೆ ನೀಡಿದರು.

ಶ್ರೇಷ್ಠ ಶಿಕ್ಷಣ ಸಂಸ್ಥೆಯಾಗಲು ಬೃಹತ್ ಕಟ್ಟಡಗಳಿಂದ ಸಾಧ್ಯವಿಲ್ಲ. ಶ್ರೇಷ್ಠ ಶಿಕ್ಷಕರಿಂದ ಮಾತ್ರ ಶ್ರೇಷ್ಠ ಸಂಸ್ಥೆ ಮತ್ತು ಉತ್ತಮ ವಿದ್ಯಾರ್ಥಿಗಳನ್ನು ರೂಪಿಸಲು ಸಾಧ್ಯವಿದ್ದು, ಆಧುನಿಕ ತಂತ್ರಜ್ಞಾನಕ್ಕೆ ತಕ್ಕಂತೆ ಶಿಕ್ಷಕರು ವಿದ್ಯಾರ್ಥಿಗಳಿಗೆ ಸೂಕ್ತ ಶಿಕ್ಷಣ ಕಲ್ಪಿಸಬೇಕೆಂದು ಸಲಹೆ ನೀಡಿದ ಅವರು, ಸರಕಾರಿ ಪಾಲಿಟೆಕ್ನಿಕ್ ಕಾಲೇಜ್ ವಿದ್ಯಾರ್ಥಿನಿಯರಿಗೆ ಅವಶ್ಯಕತೆ ಇರುವ ಮಹಿಳಾ ವಿಶ್ರಾಂತಿ ಗೃಹ, ಮಹಿಳಾ ವಸತಿ ನಿಲಯ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಸರಕಾರದ ಮಟ್ಟದಲ್ಲಿ ಪ್ರಯತ್ನಿಸುವುದು ಎಂದರು.

ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ ಮಾತನಾಡಿ, ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ದಿಸೆಯಲ್ಲಿ ಸರಕಾರ ಉಚಿತ ಲ್ಯಾಪ್‌ಟಾಪ್ ಯೋಜನೆ ಜಾರಿಗೊಳಿಸಿದೆ. ವಿಶ್ವದ ಎಲ್ಲ ವಿಷಯಗಳು, ವಿದ್ಯಮಾನಗಳು ಮತ್ತು ಇತರೆ ಸಮಗ್ರ ಮಾಹಿತಿ ಇದರಲ್ಲಿ ಪಡೆಯಬಹುದು. ಇದರ ಸದುಪಯೋಗ ಮಾಡಿಕೊಳ್ಳಬೇಕು. ಆನ್‌ಲೈನ್ ತರಬೇತಿ, ವೃತ್ತಿ ಕೌಶಲಕ್ಕೆ ಇಂತಹ ಲ್ಯಾಪ್‌ಟಾಪ್‌ಗಳು ಬಳಸಿಕೊಳ್ಳುವಂತೆ ಸಲಹೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News