ಎಸಿಬಿ ದಾಳಿ :12 ಅಧಿಕಾರಿಗಳ ಬಳಿ 35 ಕೋಟಿ ರೂ.ಆಸ್ತಿ ಪತ್ತೆ
ಬೆಂಗಳೂರು, ಜ.6: ಅಕ್ರಮ ಆಸ್ತಿ ಸಂಪಾದನೆ ಆರೋಪ ಸಂಬಂಧ ರಾಜ್ಯದ 12 ಮಂದಿ ಸರಕಾರಿ ಅಧಿಕಾರಿಗಳ ನಿವಾಸ, ಕಚೇರಿ ಮೇಲೆ ದಾಳಿ ನಡೆಸಿ, ವಶಪಡಿಸಿಕೊಂಡ ದಾಖಲೆ ಪರಿಶೀಲಿಸಿದಾಗ 35 ಕೋಟಿ ರೂ.ಗಿಂತ ಅಧಿಕ ಮೊತ್ತದ ಅಕ್ರಮ ಆಸ್ತಿ ಪತ್ತೆಯಾಗಿದೆ.
ಜ.4ರಂದು ಎಸಿಬಿ ಅಧಿಕಾರಿಗಳು ಏಕಾಏಕಿ ರಾಜ್ಯದ 12 ಮಂದಿ ಸರಕಾರಿ ಅಧಿಕಾರಿಗಳಿಗೆ ಸೇರಿದ ನಿವಾಸ, ಕಚೇರಿಗಳ ಮೇಲೆ ದಾಳಿ ನಡೆಸಿ, ಹಲವಾರು ದಾಖಲೆಗಳನ್ನು ವಶಕ್ಕೆ ಪಡೆದಿದ್ದರು. ಈ ಸಂಬಂಧ ಪರಿಶೀಲನೆ ನಡೆಸಿದ ತನಿಖಾಧಿಕಾರಿಗಳಿಗೆ 35 ಕೋಟಿ ರೂ. ಗೂ ಅಧಿಕ ಮೊತ್ತದ ಅಕ್ರಮ ಆಸ್ತಿ, 6 ಕೆ.ಜಿ ಚಿನ್ನಾಭರಣ, 19 ಕೆ.ಜಿ ಬೆಳ್ಳಿ ಪತ್ತೆಯಾಗಿದೆ ಎಂದು ಎಸಿಬಿ ಹೇಳಿದೆ.
ಆಸ್ತಿಗಳ ವಿವರ: ಬಿಬಿಎಂಪಿ ಅಧೀಕ್ಷಕ ಅಭಿಯಂತರ ಬಿ.ಎಸ್ ಪ್ರಹ್ಲಾದ್- ಬೆಂಗಳೂರಿನ ವಿವಿಧ ಸ್ಥಳಗಳಲ್ಲಿರುವ 2 ಮನೆ, 3 ವಾಣಿಜ್ಯ ಕಟ್ಟಡ, 1 ನಿವೇಶನ, 40 ಗುಂಟೆ ಜಮೀನು, ಚಿಕ್ಕಬಳ್ಳಾಪುರದಲ್ಲಿ 5 ನಿವೇಶನ, ಶಿಡ್ಲಘಟ್ಟದಲ್ಲಿ 1 ನಿವೇಶನ, ತುಮಕೂರಿನಲ್ಲಿ 1 ನಿವೇಶನ, 2 ಕಾರು, 1 ಬೈಕ್, 731 ಗ್ರಾಂ ಚಿನ್ನ, 865 ಗ್ರಾಂ ಬೆಳ್ಳಿ, 94 ಸಾವಿರ ರೂ. ದಾಖಲೆಗಳಿಲ್ಲದ ಆಸ್ತಿ ಪತ್ತೆಯಾಗಿದೆ.
ಬಳ್ಳಾರಿ ಉಪ ವಿಭಾಗದ ಬಿ.ಟಿ.ಕುಮಾರಸ್ವಾಮಿ- ಚಿತ್ರದುರ್ಗದ ವಿವಿಧೆಡೆ 13 ಎಕರೆ ಜಮೀನು, 1.536 ಕೆ.ಜಿ ಚಿನ್ನ, 200 ಗ್ರಾಂ ಬೆಳ್ಳಿ, 4 ಲಕ್ಷ ರೂ. ಪತ್ತೆಯಾಗಿದೆ.
ಬೆಂಗಳೂರು ಬಿಡಿಎ ಉಪನಿರ್ದೇಶಕ ಆರ್.ವಿ ಕಾಂತರಾಜು- ಬೆಂಗಳೂರಿನ ವಿವಿಧೆಡೆ 5 ಮನೆ, ರಾಮನಗರ ಜಿಲ್ಲೆಯಲ್ಲಿ 10 ಎಕರೆ ಕೃಷಿ ಜಮೀನು, 1 ಕಾರು, 1 ಬೈಕ್, 1.154 ಕೆ.ಜಿ ಚಿನ್ನ, 4.560 ಕೆ.ಜಿ ಬೆಳ್ಳಿ, 37 ಸಾವಿರ ರೂ. ಪತ್ತೆಯಾಗಿದೆ.
ಭದ್ರಾವತಿಯ ಕಲ್ಲಿಹಾಳದ ಕರ್ನಾಟಕ ನೀರಾವರಿ ನಿಗಮದ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಬಿ.ಎಸ್ ಬಾಲನ್- ಹೊನ್ನಾವರದಲ್ಲಿ 4 ಮನೆ, ಬೆಂಗಳೂರಿನಲ್ಲಿ 1 ಮನೆ, ದಾವಣಗೆರೆಯ ವಿವಿಧ ಸ್ಥಳಗಳಲ್ಲಿ 14.8 ಗುಂಟೆ ಜಮೀನು, 3 ಕಾರು, 2 ಬೈಕ್, 5 ಲಕ್ಷ ಚಿನ್ನಾಭರಣ, 4 ಲಕ್ಷ ರೂ. ಗೃಹಬಳಕೆ ವಸ್ತುಗಳು ಪತ್ತೆಯಾಗಿವೆ.
ಕೆಂಗೇರಿ ಕೆಪಿಟಿಸಿಎಲ್ ಅಧೀಕ್ಷಕ ಅಭಿಯಂತರ ಎನ್.ಆರ್.ಎಂ ನಾಗರಾಜನ್-ಬೆಂಗಳೂರಿನಲ್ಲಿರುವ 2 ಮನೆ, ಬೆಂಗಳೂರು, ರಾಯಚೂರು, ಹೊಸಪೇಟೆ ಮತ್ತು ಸಿಂಧನೂರಿನಲ್ಲಿರುವ ಒಟ್ಟು 10 ನಿವೇಶನ, 1 ಕಾರು, 1 ಬೈಕ್, 798 ಗ್ರಾಂ ಚಿನ್ನ, 5 ಕೆ.ಜಿ ಬೆಳ್ಳಿ, 91 ಸಾವಿರ ರೂ. ಅಕ್ರಮ ಆಸ್ತಿ ಪತ್ತೆಯಾಗಿದೆ.
ದಾವಣಗೆರೆ ಹೊನ್ನಾಳಿಯ ಬೆಸ್ಕಾಂನ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಜೆ.ಸಿ ಜಗದೀಶಪ್ಪ-ದಾವಣಗೆರೆಯ ವಿವಿಧ ಸ್ಥಳಗಳಲ್ಲಿ 5 ನಿವೇಶನ, ಶಿವಮೊಗ್ಗದಲ್ಲಿ 2 ನಿವೇಶನ, ಬೆಂಗಳೂರಿನಲ್ಲಿ 1 ನಿವೇಶನ, ಧಾರವಾಡದಲ್ಲಿ 2 ಫ್ಲಾಟ್,1 ಕಾರು, 2 ಬೈಕ್, 196 ಗ್ರಾಂ ಚಿನ್ನ, 180 ಗ್ರಾಂ ಬೆಳ್ಳಿ ಪತ್ತೆಯಾಗಿದೆ.
ಹಾಸನ ಸಕಲೇಶಪುರದ ಲೋಕೋಪಯೋಗಿ ಇಲಾಖೆ ಅಸಿಸ್ಟೆಂಟ್ ಇಂಜಿನಿಯರ್ ವೆಂಕಟೇಶ್- 1 ವಾಸದ ಮನೆ, ವಿವಿಧೆಡೆ 4 ನಿವೇಶನ, 4 ಎಕರೆ , 2 ಕಾರು, 2 ಬೈಕ್, 13 ಲಕ್ಷ ವೌಲ್ಯದ ಸೀರೆಗಳು, 4 ಲಕ್ಷ ವೌಲ್ಯದ ಎಲ್‌ಐಸಿ ಪಾಲಿಸಿ ಮತ್ತು ಎನ್‌ಎಸ್‌ಸಿ ಬ್ಯಾಂಡ್, 1.500 ಕೆ.ಜಿ ಚಿನ್ನ, 3 ಕೆ.ಜಿ ಬೆಳ್ಳಿ, 52 ಸಾವಿರ ರೂ. ಪತ್ತೆಯಾಗಿದೆ.
ಗದಗ ಜಿಲ್ಲೆಯ ನರಗುಂದ ತಾ.ಪಂ ಎಕ್ಸಿಕ್ಯೂಟಿವ್ ಆಫೀಸರ್ ಅಶೋಕ್ ಗೌಡಪ್ಪ ಪಾಟೀಲ್- ವಿವಿಧ ಸ್ಥಳಗಳಲ್ಲಿ 2 ನಿವೇಶನ, 815 ಗ್ರಾಂ ಚಿನ್ನ, 2.600 ಕೆ.ಜಿ ಬೆಳ್ಳಿ ಪತ್ತೆಯಾಗಿದೆ.
ವಿಜಯಪುರದ ಜಿ.ಪಂ ಇಂಜಿನಿಯರಿಂಗ್ ವಿಭಾಗದ ಶಾಖಾಧೀಕ್ಷಕರು ಸೋಮಪ್ಪ ಟಿ. ಲಮಾಣಿ- ವಿವಿಧೆಡೆ 2 ನಿವೇಶನ, 4ಎಕರೆ 20ಗುಂಟೆ ಜಮೀನು, 1 ಕಾರ, 1 ಬೈಕ್, 8 ಲಕ್ಷ ರೂ. ಬ್ಯಾಂಕ್ ಠೇವಣಿ ಪತ್ತೆಯಾಗಿದೆ.
ನೆಲಮಂಗಲದ ವಾಜರಹಳ್ಳಿ ಗ್ರಾ.ಪಂ ಪಂಚಾಯತ್ ಅಭಿವೃದ್ದಿ ಅಧಿಕಾರಿ ರೇಖಾ- ನೆಲಮಂಗಲದಲ್ಲಿ 4 ಅಂತಸ್ತಿನ 1 ಮನೆ, 8 ನಿವೇಶನ, 1 ಕಾರು, 2 ಬೈಕ್, 34.4 ಲಕ್ಷ ರೂ. ಬ್ಯಾಂಕ್ ಠೇವಣಿ, 264 ಗ್ರಾಂ ಚಿನ್ನ, 100 ಗ್ರಾಂ ಬೆಳ್ಳಿ, 17 ಲಕ್ಷ ರೂ. ಬ್ಯಾಂಕ್ ಬ್ಯಾಲೆನ್ಸ್, 55 ಸಾವಿರ ರೂ. ನಗದು ಪತ್ತೆಯಾಗಿದೆ.
ಸಿ.ವಿ ರಾಮನ್ ನಗರ ಉಪವಿಭಾಗ ಬಿಬಿಎಂಪಿ ತೆರಿಗೆ ವೌಲ್ಯ ಮಾಪಕ ನರಸಿಂಹಲು- ಬೆಂಗಳೂರಿನ ವಿವಿಧೆಡೆ 3 ಮನೆ, 4 ನಿವೇಶನ, 1 ವಾಣೀಜ್ಯ ಕಟ್ಟಡ, 1 ಕಾರು, 2 ಬೈಕ್, 300 ಗ್ರಾಂ ಚಿನ್ನ, 900 ಗ್ರಾಂ ಬೆಳ್ಳಿ ಪತ್ತೆಯಾಗಿದೆ.
ರಾಯಚೂರು ನಗರ ಸಭೆ ಸ್ಯಾನಿಟರಿ ಇನ್‌ಸ್ಪೆಕ್ಟರ್ ಅಮರೇಶ್ ಚೆಂಚಮರಡಿ- ವಿವಿಧ ಕಡೆ 2 ಫ್ಲಾಟ್, 5 ಲಕ್ಷ ರೂ. ವೌಲ್ಯದ ಗೃಹ ಬಳಕೆ ವಸ್ತು, 530 ಗ್ರಾಂ ಚಿನ್ನ, 4.9 ಕೆ.ಜಿ ಬೆಳ್ಳಿ ಮತ್ತು 5.67 ಲಕ್ಷ ರೂ. ನಗದು ಪತ್ತೆಯಾಗಿದೆ ಎಂದು ಎಸಿಬಿ ತಿಳಿಸಿದ್ದು, ಈ ಸಂಬಂಧ ತನಿಖೆ ಮುಂದುವರೆದಿದೆ.