×
Ad

ಇಂದಿರಾ ಕ್ಯಾಂಟೀನ್ ಸಿಬ್ಬಂದಿಗೆ ಮೇಲಾಧಿಕಾರಿಯಿಂದ ಲೈಂಗಿಕ ಕಿರುಕುಳ: ಆರೋಪ

Update: 2018-01-06 19:32 IST

ಬೆಂಗಳೂರು, ಜ.6: ರಾಜ್ಯ ಸರಕಾರದ ಪ್ರಮುಖ ಯೋಜನೆಗಳಲ್ಲಿ ಒಂದಾದ ಇಂದಿರಾ ಕ್ಯಾಂಟೀನ್‌ನಲ್ಲಿ ಮಹಿಳಾ ಕ್ಯಾಷಿಯರ್‌ಗೆ ಮೇಲಾಧಿಕಾರಿ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದ್ದು, ಇಲ್ಲಿನ ಬಂಡೆಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬೆಂಗಳೂರು ಹೊರವಲಯ ಬೊಮ್ಮನಹಳ್ಳಿ ವ್ಯಾಪ್ತಿಯ 190ನೇ ವಾರ್ಡ್‌ನ ಇಂದಿರಾ ಕ್ಯಾಂಟೀನ್‌ನಲ್ಲಿ ಕ್ಯಾಷಿಯರ್ ಆಗಿ ಕಾರ್ಯನಿರ್ವಹಿಸುತ್ತಿರುವ ಮಹಿಳೆಗೆ, ಮೇಲಾಧಿಕಾರಿ ಸತೀಶ್ ಎಂಬಾತ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿ ದೂರು ನೀಡಲಾಗಿದೆ.

ಕ್ಯಾಂಟೀನ್‌ನಲ್ಲಿ ಕ್ಯಾಷಿಯರ್ ಆಗಿ ಮುಂದುವರೆಯಬೇಕಾದರೆ ತನ್ನೊಂದಿಗೆ ಅಕ್ರಮ ಸಂಬಂಧ ಹೊಂದುವಂತೆ ಸತೀಶ್ ಒತ್ತಡ ಹೇರುತ್ತಿದ್ದಾನೆ. ರಾತ್ರಿ ಸಮಯದಲ್ಲಿ ಫೋನ್ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ತನ್ನೊಂದಿಗೆ ಲೈಂಗಿಕ ಸಂಬಂಧ ಹೊಂದದಿದ್ದಲ್ಲಿ ಕುಟುಂಬದವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದಾರೆಂದು ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ಮಹಿಳಾ ಕ್ಯಾಷಿಯರ್ ಉಲ್ಲೇಖಿಸಿದ್ದಾರೆ.

ದೂರು ದಾಖಲಾದ ಬಳಿಕ ಆರೋಪಿ ಸತೀಶ್ ಮೈಸೂರಿಗೆ ತೆರಳಿದ್ದಾನೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ಬಂಡೆಪಾಳ್ಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News