×
Ad

ಮಾನವ ಹಕ್ಕುಗಳ ನೆಪದಲ್ಲಿ ಬೆದರಿಕೆ : ಆರೋಪಿಗಳ ಬಂಧನ

Update: 2018-01-07 19:16 IST

ಬೆಂಗಳೂರು, ಜ.7: ಮಾನವ ಹಕ್ಕುಗಳ ಆಯೋಗದ ಸರಕಾರಿ ಅಧಿಕಾರಿಗಳೆಂದು ಹೇಳಿಕೊಂಡು ಕಾರ್ಖಾನೆಯೊಂದಕ್ಕೆ ನುಗ್ಗಿ ಬೆದರಿಕೆ ಹಾಕಿ 2 ಲಕ್ಷ ರೂ ನೀಡುವಂತೆ ಬೇಡಿಕೆಯಿಟ್ಟಿದ್ದ ಆರೋಪದ ಮೇಲೆ ಆರು ಜನರನ್ನು ಸಂಪಿಗೆ ಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಇಂದಿರಾನಗರದ ಸಂತೋಷ್(34), ರಾಮಚಂದ್ರ (29), ಪ್ರವೀಣ್‌ಕುಮಾರ್ (33), ಪುಟ್ಟರಾಜು (26), ನಿಖಿಲ್(23), ಹಲಸೂರಿನ ಕಾರ್ತಿಕ್ (28) ಬಂಧಿತ ಆರೋಪಿಗಳೆಂದು ಈಶಾನ್ಯ ವಿಭಾಗದ ಡಿಸಿಪಿ ಎಸ್.ಗಿರೀಶ್ ತಿಳಿಸಿದ್ದಾರೆ.
ಪ್ರಕರಣದ ವಿವರ:  ಶನಿವಾರ ಸಂಜೆ 5ರ ವೇಳೆ ಸಂಪಿಗೆಹಳ್ಳಿಯ ಸಾರಾಯಿ ಪಾಳ್ಯದಲ್ಲಿರುವ ಲೇಡೀಸ್ ಬ್ಯಾಗ್ ಕಾರ್ಖಾನೆಯೊಂದಕ್ಕೆ ಏಕಾಏಕಿ ನುಗ್ಗಿ ಮಾನವ ಹಕ್ಕುಗಳ ಆಯೋಗದ ಉದ್ಯೋಗಿಗಳೆಂದು ಪರಿಚಯಿಸಿಕೊಂಡಿದ್ದಾರೆ.

ನಿಮ್ಮ ಕಾರ್ಖಾನೆಯಲ್ಲಿ ಬಾಲ ಕಾರ್ಮಿಕನನ್ನು ಕೆಲಸಕ್ಕಿಟ್ಟುಕೊಂಡಿದ್ದಿರಾ? ಎಂದು ಕಾರ್ಖಾನೆ ಮಾಲಕನನ್ನು ಪ್ರಶ್ನಿಸಿ, ಕಾರ್ಖಾನೆ ವಿರುದ್ಧ ಪ್ರಕರಣ ದಾಖಲಿಸಿ ಪೊಲೀಸರನ್ನು ಕರೆದು ಬಂಧಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

 ಬಳಿಕ ನಿಮ್ಮ ಮೇಲಿನ ಆರೋಪ ಕೈಬಿಡಲು 2 ಲಕ್ಷ ರೂ. ನೀಡಿ, ಇಲ್ಲದಿದ್ದರೆ ಕಾರ್ಖಾನೆ ಬಂದ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.ಬಳಿಕ ಅನುಮಾನದ ಮೇಲೆ ಮಾಲಕರು ಸ್ನೇಹಿತರಿಗೆ ಕರೆ ಮಾಡಿ ವಿಚಾರವನ್ನು ತಿಳಿಸಿದ್ದು, ಎಲ್ಲರೂ ಸೇರಿ ಆರೋಪಿಗಳನ್ನು ಕೂಡಿ ಹಾಕಿ ಸಂಪಿಗೆ ಹಳ್ಳಿ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ.

ಕೂಡಲೇ ಧಾವಿಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.ಆರೋಪಿಗಳಿಂದ ಕಾರು, ಮಾನವ ಹಕ್ಕುಗಳ ಸಂರಕ್ಷಣೆ ಹಾಗೂ ಭ್ರಷ್ಟಾಚಾರ ನಿರ್ಮೂಲನಾ ಸಂಸ್ಥೆ ಹೆಸರಿನ ಗುರುತಿನ ಚೀಟಿಗಳನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಲಾಗಿದೆ ಎಂದು ಡಿಸಿಪಿ ಗಿರೀಶ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News