​ಪತ್ರಿಕೆ ಓದುವ ಅಭ್ಯಾಸ ಬೆಳೆಸಿಕೊಳ್ಳಿ: ರಾಮೇಗೌಡ

Update: 2018-01-07 14:56 GMT

ಬೆಂಗಳೂರು, ಜ.7: ಪ್ರತಿಯೊಬ್ಬ ಕನ್ನಡಿಗರೂ ದಿನ ಬೆಳಗಾದರೆ ಕಡ್ಡಾಯವಾಗಿ ಕನ್ನಡ ದಿನ ಪತ್ರಿಕೆ ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ಕವಿ ಬೈರಮಂಗಲ ರಾಮೇಗೌಡ ಸಲಹೆ ನೀಡಿದ್ದಾರೆ.

ರವಿವಾರ ನಗರದ ಕಸಾಪದಲ್ಲಿ ಆಯೋಜಿಸಿದ್ದ ಕನ್ನಡಿಗರ ಸ್ನೇಹಕೂಟ ಸಂಸ್ಥೆಯ 12 ನೆ ವಾರ್ಷಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಕನ್ನಡಿಗರ ಸಂಖ್ಯೆ ಕಡಿಮೆಯಾಗುತ್ತಿದೆ. ದೇಶದ ಬೇರೆ ಬೇರೆ ಪ್ರದೇಶಗಳಿಂದ ವಲಸೆ ಬಂದ ಜನರೇ ಹೆಚ್ಚಿದ್ದಾರೆ. ಇಂತಹ ಸಂದರ್ಭದಲ್ಲಿ ನಮ್ಮ ಕನ್ನಡತನವನ್ನು ಬೆಳೆಸಬೇಕಾದರೆ ಪತ್ರಿಕೋದ್ಯಮ ಬಹಳಷ್ಟು ನೆರವು ನೀಡಿದೆ. ಹೀಗಾಗಿ, ಪ್ರತಿಯೊಬ್ಬರೂ ಕನ್ನಡ ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಲೇಖಕ ಜಾಣಗೆರೆ ವೆಂಕಟರಾಮಯ್ಯ ಮಾತನಾಡಿ, ಕನ್ನಡದ ಹೆಸರಿನಲ್ಲಿ ಸಂಘಗಳು ಆರಂಭವಾದರೆ, ಅದರೊಳಗೆ ನಾಯಿ, ನರಿಗಳು ಸೇರಿಕೊಂಡು, ಸಂಘ ಕಟ್ಟಿದವರನ್ನೇ ಬೀದಿಗೆಳೆದು ಅವಮಾನ ಮಾಡುವಂತಹ ಸಮಾಜದಲ್ಲಿ ನಾವು ಜೀವಿಸುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
ವೃತ್ತಿ ಜೀವನದಲ್ಲಿ ನಡೆದ ಘಟನೆಗಳನ್ನು ಮುಂದಿನ ಪೀಳಿಗೆಗೆ ಅರ್ಥವಾಗುವ ರೀತಿಯಲ್ಲಿ ಹಾಗೂ ಸಾಮಾಜಿಕ ನ್ಯಾಯ, ಬದ್ಧತೆ, ಹಿರಿಯರಿಗೆ ಗೌರವ ನೀಡುವ ಕುರಿತ ರಾಂ.ಕೆ.ಹನುಮಂತಯ್ಯರ ಬರಹಗಳು ಅತ್ಯಂತ ಸ್ವಾರಸ್ಯಕರವಾಗಿದೆ. ಪ್ರತಿಯೊಂದು ಲೇಖನವೂ ಒಂದೊಂದು ನೀತಿಯನ್ನು ಹೇಳಿಕೊಟ್ಟಿದೆ. ಈ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಶ್ರಮ ವಹಿಸಬೇಕು ಎಂದ ಅವರು, ಇತ್ತೀಚಿನ ದಿನಗಳಲ್ಲಿನ ಜನರಿಗೆ ಏನು ಓದಬೇಕು, ಯಾವುದನ್ನು ಸ್ವೀಕರಿಸಬೇಕು ಎಂಬ ಕನಿಷ್ಟ ಪರಿಜ್ಞಾನವಿಲ್ಲ ಎಂದು ತಿಳಿಸಿದರು.

ಸಂಘದ ಅಧ್ಯಕ್ಷ ರಾಂ.ಕೆ.ಹನುಮಂತಯ್ಯ ಮಾತನಾಡಿ, ಬೆಂಗಳೂರು ದಂಡು ಪ್ರದೇಶದಲ್ಲಿ ಸಂಘ ಆರಂಭಿಸಿದ ಸಂದರ್ಭದಲ್ಲಿ ಸರಿಯಾಗಿ ಕನ್ನಡ ಪತ್ರಿಕೆಗಳು ಸಿಗುತ್ತಿರಲಿಲ್ಲ. ಅಲ್ಲದೆ, ಯಾರಿಗೂ ಕನ್ನಡದ ಬಗ್ಗೆ ಕನಿಷ್ಟ ಆಸಕ್ತಿಯಿರಲಿಲ್ಲ. ಹೀಗಾಗಿ, ಮಕ್ಕಳ ಮನಸ್ಸಿನಲ್ಲಿ ಕನ್ನಡ ತುಂಬುವ ಕೆಲಸ ಆರಂಭ ಮಾಡಿದೆ. ಅದಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ನಡೆಸಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News