ಮೊದಲ ಟೆಸ್ಟ್: ಭಾರತದ ಗೆಲುವಿಗೆ 208 ರನ್ ಗುರಿ

Update: 2018-01-08 11:26 GMT

ಕೇಪ್‌ಟೌನ್, ಜ.8: ಮುಹಮ್ಮದ್ ಶಮಿ ಹಾಗೂ ಜಸ್‌ಪ್ರಿತ್ ಬುಮ್ರಾ ನೇತೃತ್ವದ ಬೌಲಿಂಗ್ ದಾಳಿಗೆ ದಿಕ್ಕಾಪಾಲಾದ ದಕ್ಷಿಣ ಆಫ್ರಿಕ ತಂಡ ಭಾರತದ ಗೆಲುವಿಗೆ 208 ರನ್ ಗುರಿ ನೀಡಲಷ್ಟೇ ಶಕ್ತವಾಗಿದೆ.

ನಾಲ್ಕನೇ ದಿನವಾದ ಸೋಮವಾರ 2 ವಿಕೆಟ್ ನಷ್ಟಕ್ಕೆ 65 ರನ್‌ನಿಂದ ಎರಡನೇ ಇನಿಂಗ್ಸ್ ಮುಂದುವರಿಸಿದ ದಕ್ಷಿಣ ಆಫ್ರಿಕ ತಂಡ ಶಮಿ(3-28), ಬುಮ್ರಾ(3-39) ಹಾಗೂ ಭುವನೇಶ್ವರ್(2-33) ಸಂಘಟಿತ ದಾಳಿಗೆ ಸಿಲುಕಿ ಕೇವಲ 130 ರನ್‌ಗೆ ಆಲೌಟಾಗಿದೆ.         

 ಎಬಿ ಡಿವಿಲಿಯರ್ಸ್(35 ರನ್) ಔಟಾಗುವುದರೊಂದಿಗೆ ದಕ್ಷಿಣ ಆಫ್ರಿಕದ ಹೋರಾಟ ಕೊನೆಗೊಂಡಿತ್ತು. 2ನೇ ಇನಿಂಗ್ಸ್‌ನಲ್ಲಿ ಡಿವಿಲಿಯರ್ಸ್ ಆಫ್ರಿಕದ ಪರ ಅಗ್ರ ಸ್ಕೋರರ್ ಎನಿಸಿಕೊಂಡಿದ್ದಾರೆ. ಭಾರೀ ಮಳೆಯಿಂದಾಗಿ ರವಿವಾರ ಮೂರನೇ ದಿನದಾಟ ಪೂರ್ತಿ ಮಳೆಗಾಹುತಿಯಾಗಿತ್ತು. ಹೀಗಾಗಿ ಸೋಮವಾರ ಬೇಗನೇ ಆಟ ಆರಂಭಿಸಲಾಗಿತ್ತು.

ಆರಂಭದಲ್ಲೇ ನೈಟ್‌ವಾಚ್‌ಮ್ಯಾನ್ ರಬಾಡ ಹಾಗೂ ಹಾಶಿಮ್ ಅಮ್ಲ ವಿಕೆಟ್ ಕಬಳಿಸಿದ ಶಮಿ ಭಾರತಕ್ಕೆ ಮೇಲುಗೈ ಒದಗಿಸಿಕೊಟ್ಟಿದ್ದರು. ಫಿಲ್ಯಾಂಡರ್(0)ಗೆ ಖಾತೆ ತೆರೆಯಲು ಅವಕಾಶ ನೀಡಲಿಲ್ಲ. ಬುಮ್ರಾ ದ.ಆಫ್ರಿಕ ನಾಯಕ ಎಫ್‌ಡು ಪ್ಲೆಸಿಸ್(0), ಕ್ವಿಂಟನ್ ಡಿಕಾಕ್ ವಿಕೆಟ್ ಕಬಳಿಸಿದ್ದಾಗ ಆಫ್ರಿಕದ ಸ್ಕೋರ್ 6 ವಿಕೆಟ್‌ಗೆ 92 ರನ್.

ಆಫ್ರಿಕದ ಪರ ಡಿವಿಲಿಯರ್ಸ್ ಮಾತ್ರ ಏಕಾಂಗಿ ಹೋರಾಟ ನೀಡಿದರು. ಆಫ್ರಿಕದ ಕೆಳ ಕ್ರಮಾಂಕದ ಆಟಗಾರರು ಹೆಚ್ಚು ಪ್ರತಿರೋಧ ಒಡ್ಡಲಿಲ್ಲ. ಭಾರತ ತಂಡ ದಕ್ಷಿಣ ಆಫ್ರಿಕ ನೆಲದಲ್ಲಿ ಕಳೆದ 25 ವರ್ಷಗಳಲ್ಲಿ ಈತನಕ ಕೇವಲ 2 ಟೆಸ್ಟ್ ಪಂದ್ಯಗಳನ್ನು ಜಯಿಸಿದೆ. 2006-07 ಹಾಗೂ 2010-11ರಲ್ಲಿ ಈ ಸಾಧನೆ ಮಾಡಿತ್ತು. 2018ರಲ್ಲಿ ಕೇಪ್‌ಟೌನ್‌ನಲ್ಲಿ ಮತ್ತೊಂದು ಸ್ಮರಣೀಯ ಗೆಲುವು ಸಾಧಿಸುವ ವಿಶ್ವಾಸದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News