ಬಂಜಾರ ಭಾಷೆ ಮಾನ್ಯತೆಗೆ ಸರಕಾರದ ಸಹಮತ: ಗೃಹ ಸಚಿವ ರಾಮಲಿಂಗಾರೆಡ್ಡಿ

Update: 2018-01-08 14:25 GMT

ಬೆಂಗಳೂರು, ಜ.8: ದೇಶದಲ್ಲಿ ಬಂಜಾರರು ತಮ್ಮದೇ ಆದ ವಿಶಿಷ್ಟ ಸಂಪ್ರದಾಯ, ಸಂಸ್ಕೃತಿಯ ಮೂಲಕ ಭಾರತೀಯ ಪರಂಪರೆಯಲ್ಲಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ, ಈ ಭಾಷೆಯನ್ನು ಸಂವಿಧಾನದಡಿಯಲ್ಲಿ ಸೇರಿಸಲು ರಾಜ್ಯ ಸರಕಾರದ ಸಹಮತವಿದೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ಇಲ್ಲಿನ ವಸಂತನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ರಾಜ್ಯ ಬಂಜಾರ ನೌಕರರ ಸಾಂಸ್ಕೃತಿಕ ಕ್ಷೇಮಾಭಿವೃದ್ಧಿ ಸಂಘ ಹಮ್ಮಿಕೊಂಡಿದ್ದ ’ಬಂಜಾರ ಸಾಂಸ್ಕೃತಿಕ ಹಬ್ಬ’ದಲ್ಲಿ ಸ್ಮರಣ ಸಂಚಿಕೆ-2018 ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ವಿಶಿಷ್ಟ ಪರಂಪರೆ ಮೂಲಕ ಗುರುತಿಸಿಕೊಂಡಿರುವ ಬಂಜಾರ ಸಮುದಾಯದ ಜನ ದೇಶದೆಲ್ಲೆಡೆ ಒಂದೇ ಭಾಷೆ ಬಳಸಿ ಮಾತನಾಡುತ್ತಾರೆ. ತಮ್ಮ ಭಾಷೆಯನ್ನು ಸಂವಿಧಾನದಡಿಯಲ್ಲಿ ಸೇರಿಸಲು ಸರಕಾರಕ್ಕೆ ಮನವಿ ಮಾಡಿದೆ. ಭಾಷೆಯನ್ನು ಸಂವಿಧಾನದಡಿಯಲ್ಲಿ ಸೇರಿಸಲು ಸರಕಾರದ ಸಹಮತವಿದೆ ಎಂದು ನುಡಿದರು.

ಕರ್ನಾಟಕ, ಮಹಾರಾಷ್ಟ್ರ, ಆಂಧ್ರ ಸೇರಿದಂತೆ ದೇಶದೆಲ್ಲೆಡೆ ಬಂಜಾರ ಸಮುದಾಯವಿದೆ. ರಾಜ್ಯ ಸರಕಾರ ಬಂಜಾರ ಸಮುದಾಯದ ಸೇವಾಲಾಲ್ ಟ್ರಸ್ಟ್‌ಗೆ 15 ಎಕರೆ ಭೂಮಿಯನ್ನು ಮಂಜೂರು ಮಾಡಿದ್ದು, ಸಮುದಾಯದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಬಳಸಿಕೊಳ್ಳಬೇಕೆಂದು ಸೂಚಿಸಿದರು.
ಈಗಾಗಲೆ 4 ಸಾವಿರ ಲಂಬಾಣಿ ತಾಂಡಗಳನ್ನು ಕಂದಾಯ ಗ್ರಾಮಗಳಾಗಿ ಘೋಷಿಸಿರುವ ಕೀರ್ತಿ ಕಾಂಗ್ರೆಸ್ ಸರಕಾರಕ್ಕೆ ಸಲ್ಲುತ್ತದೆ ಎಂದ ಅವರು, ನಗರ-ಗ್ರಾಮೀಣ ಪ್ರದೇಶದ ಸರಕಾರದ ಜಾಗಗಳಲ್ಲಿ ಮನೆ ನಿರ್ಮಿಸಿಕೊಂಡಿರುವವರಿಗೆ ಹಕ್ಕು ಪತ್ರ ನೀಡಲಾಗುವುದು ಎಂದು ಹೇಳಿದರು.

ಬಂಜಾರರು ಕಾಡಿನಲ್ಲಿ ವಾಸಿಸುತ್ತಿದ್ದ ಜನ ನಗರೀಕರಣ ಪ್ರಭಾವದಿಂದ ನಗರಕ್ಕೆ ವಲಸೆ ಬಂದು ಬದುಕು ಕಟ್ಟಿಕೊಂಡು, ಸಮಾಜದಲ್ಲಿ ಉನ್ನತ ಸ್ತರಗಳಲ್ಲಿ ಸಾಧನೆ ಗೈದಿದ್ದಾರೆ. ಇಂದಿರಾಗಾಂಧಿ, ಸೋನಿಯಾಗಾಂಧಿ ಸಹ ಬಂಜಾರ ಸಮುದಾಯದ ಸಾಂಪ್ರದಾಯಿಕ ಉಡುಗೆಗಳನ್ನು ಧರಿಸಿದ್ದರು ಎಂದು ಇದೇ ವೇಳೆ ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಲಿಂಗಸೂರು ವಿಜಯ ಮಹಂತೇಶ್ವರ ಮಠದ ಸಿದ್ಧಲಿಂಗದೇವರು ಸ್ವಾಮೀಜಿ, ಶಾಸಕರಾದ, ಕೆ.ಶಿವಮೂರ್ತಿ ನಾಯ್ಕಾ, ಪಿ.ಸುಧಾಕರ್ ಲಾಲ್, ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ ಅಧ್ಯಕ್ಷ ಬಾಲರಾಜ್, ಮು.ಮಂ.ಆಪ್ತ ಕಾರ್ಯದರ್ಶಿ ಹೀರಾನಾಯ್ಕ, ಮಹಿಳಾ ಆಯೋಗ ಅಧ್ಯಕ್ಷೆ ನಾಗಲಕ್ಷ್ಮಿ ಬಾಯಿ, ಸಂಘದ ಅಧ್ಯಕ್ಷ ಕುಮಾರ್ ನಾಯ್ಕಿ ಸೇರಿದಂತೆ ಇನ್ನಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News