ಬೆಂಗಳೂರು: ಮತಯಂತ್ರದ ಬದಲಿಗೆ ಮತಪತ್ರ ಬಳಸಲು ಆಗ್ರಹ

Update: 2018-01-08 12:42 GMT

ಬೆಂಗಳೂರು, ಜ.8: ರಾಜ್ಯದಲ್ಲಿ ಮುಂದಿನ ಏಪ್ರಿಲ್-ಮೇನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಮತಯಂತ್ರದ ಬದಲಿಗೆ ಮತಪತ್ರಗಳನ್ನು ಬಳಕೆ ಮಾಡಬೇಕು ಎಂದು ಸಮಾಜವಾದಿ ಪಕ್ಷ ಆಗ್ರಹಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಅಧ್ಯಕ್ಷ ರಾಬಿನ್ ಮ್ಯಾಥ್ಯೂ, ದೇಶದಾದ್ಯಂತ ಮತಯಂತ್ರಗಳು ಪಾರದರ್ಶಕವಾಗಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. ಇತ್ತೀಚಿಗೆ ನಡೆದ ಉತ್ತರ ಪ್ರದೇಶ, ಗುಜರಾತ್ ಚುನಾವಣೆಗಳಲ್ಲಿ ಮತಯಂತ್ರವನ್ನು ತಿರುಚಲಾಗಿದೆ ಎನ್ನಲಾಗಿದೆ. ಹೀಗಾಗಿ, ಮತಯಂತ್ರದ ಬದಲಿಗೆ ಮತಪತ್ರಗಳನ್ನು ಬಳಕೆ ಮಾಡುವುದು ಸೂಕ್ತ ಎಂದರು.

ಸಮಾಜವಾದಿ ಪಕ್ಷ ರಾಜ್ಯಾದ್ಯಂತ ಬಲಿಷ್ಠವಾಗಿ ಸಂಘಟನೆಗೊಳ್ಳುತ್ತಿದೆ. ಮಾಜಿ ಶಾಸಕರು, ಸಂಸದರು ಪಕ್ಷಕ್ಕೆ ಸೇರ್ಪಡೆಯಾಗಲು ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಪಕ್ಷ ಬಲಿಷ್ಠವಿರುವ ಕಡೆಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುತ್ತಿದೆ ಎಂದು ತಿಳಿಸಿದರು.
ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ದಲಿತ, ಹಿಂದುಳಿದ, ಅಲ್ಪಸಂಖ್ಯಾತರ ಮೇಲಿನ ಹಲ್ಲೆ, ದೌರ್ಜನ್ಯ, ದಬ್ಬಾಳಿಕೆಗಳು ಹೆಚ್ಚಾಗಿವೆ. ಗೋ ರಕ್ಷಣೆ ಹೆಸರಿನಲ್ಲಿ ಅಮಾಯಕರನ್ನು ಹತ್ಯೆ ಮಾಡಲಾಗುತ್ತಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಕರ್ನಾಟಕಕ್ಕೆ ಬಂದು ಗೋ ಮಾಂಸ ನಿಷೇಧ ಮಾಡಿ ಎಂದು ಹೇಳುತ್ತಾರೆ. ಆದರೆ, ಉತ್ತರ ಪ್ರದೇಶದಲ್ಲಿಯೇ ಅತಿ ಹೆಚ್ಚು ಗೋ ಮಾಂಸ ರಫ್ತು ನಡೆಯುತ್ತದೆ. ಮೊದಲು ಅದನ್ನು ತಡೆಯಲಿ ಎಂದು ಹೇಳಿದರು.

ರಾಜ್ಯದಲ್ಲಿ ಕೋಮು ಗಲಭೆಗಳನ್ನು ಸೃಷ್ಟಿಸಿ ಹತ್ಯೆಗಳನ್ನು ಮಾಡುವ ಮೂಲಕ ಬಿಜೆಪಿ ತನ್ನ ರಾಜಕೀಯ ಹಿತಾಸಕ್ತಿಯನ್ನು ರಕ್ಷಿಸಿಕೊಳ್ಳಲು ಮುಂದಾಗುತ್ತಿದೆ ಎಂದ ಅವರು, ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರವೇಶ ಮಾಡಿದರೆ ಕ್ಷಣಾರ್ಧದಲ್ಲಿ ಮಹಾದಾಯಿ ಸಮಸ್ಯೆಯನ್ನು ಇತ್ಯರ್ಥಪಡಿಸಲು ಸಾಧ್ಯವಾಗುತ್ತದೆ. ಆದರೆ, ಪ್ರಧಾನಿಗೆ ಕರ್ನಾಟಕದ ಬಗ್ಗೆ ಒಂದಿಷ್ಟೂ ಕಾಳಜಿಯಿಲ್ಲ ಎಂದು ಅವರು ಕಿಡಿಕಾರಿದರು.

ಇದೇ ಸಂದರ್ಭದಲ್ಲಿ ಜನತಾದಳದ ಮುಖಂಡ ಸಿ.ಕೆ.ರವಿಚಂದ್ರರೆಡ್ಡಿ ಜನತಾದಳ ಇಬ್ಭಾಗಗೊಂಡು ಅಲ್ಲಿನ ಆಂತರಿಕ ಜಗಳ, ಗುಂಪುಗಾರಿಕೆಯಿಂದ ಬೇಸತ್ತು ಮೂಲ ಪಕ್ಷವಾದ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ ಎಂದು ರಾಬಿನ್ ಮ್ಯಾಥ್ಯೂ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News