ಹುಬ್ಬಳ್ಳಿ-ಧಾರವಾಡ ಬಂದ್‌ಗೆ ಉತ್ತಮ ಪ್ರತಿಕ್ರಿಯೆ

Update: 2018-01-08 14:09 GMT

ಹುಬ್ಬಳ್ಳಿ/ಧಾರವಾಡ, ಜ. 8: ವಿಜಯಪುರ ದಲಿತ ಬಾಲಕಿ ಮೇಲಿನ ಅತ್ಯಾಚಾರ, ಕೊಲೆ, ಸಂವಿಧಾನ ಬದಲಾವಣೆ ಹೇಳಿಕೆ ನೀಡಿದ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಹಾಗೂ ಮಹಾರಾಷ್ಟ್ರದ ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ದಲಿತ ಸಂಘಟನೆಗಳ ಕರೆ ನೀಡಿದ್ದ ಹುಬ್ಬಳ್ಳಿ/ಧಾರವಾಡ ಅವಳಿನಗರ ಹಾಗೂ ಬೆಳಗಾವಿಯ ಚಿಕ್ಕೋಡಿ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬಂದ್ ಕರೆ ಹಿನ್ನೆಲೆಯಲ್ಲಿ ಅವಳಿನಗರಗಳಲ್ಲಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿತ್ತು. ಕೆಎಸ್ಸಾರ್ಟಿಸಿ, ನಗರ ಸಾರಿಗೆ ಬಸ್ ಸೇರಿದಂತೆ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಈ ಮಧ್ಯೆ ಕೆಲ ಕಿಡಿಗೇಡಿಗಳು ಇಲ್ಲಿನ ದೇಶಪಾಂಡೆ ನಗರದಲ್ಲಿ ಸಿಬ್ಬಂದಿಯನ್ನು ಕರೆದೊಯ್ಯುತ್ತಿದ್ದ ವಿಆರ್‌ಎಲ್ ಸಂಸ್ಥೆಗೆ ಸೇರಿದ ವಾಹನದ ಮೇಲೆ ಕಲ್ಲು ತೂರಾಟ ನಡೆಸಿ ಗಾಜು ಪುಡಿಗೈದಿದ್ದಾರೆಂದು ತಿಳಿದು ಬಂದಿದೆ.

ಪ್ರತಿಭಟನಾಕಾರರು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ, ಟಯರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಜಯಪುರ ದಲಿತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಕೊಲೆಗೈದ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ಪ್ರಕರಣ ಮುಚ್ಚಿಹಾಕಲು ಯತ್ನಿಸಿದ ಪೊಲೀಸ್ ಅಧಿಕಾರಿಗಳನ್ನು ಅಮಾನತ್ತು ಮಾಡಬೇಕು. ಸಂವಿಧಾನ ಬದಲಾವಣೆ ಹೇಳಿಕೆ ನೀಡಿದ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆಯನ್ನು ಸಂಪುಟದಿಂದ ಕೈಬಿಡಬೇಕು. ಮಹಾರಾಷ್ಟ್ರದ ಕೋರೆಗಾಂವ್‌ನಲ್ಲಿ ದಲಿತರ ಮೇಲೆ ದೌರ್ಜನ್ಯ ನಡೆಸಿದ ಆರೆಸೆಸ್ಸ್-ಸಂಘ ಪರಿವಾರದ ಗೂಂಡಾಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಭೂತ ದಹನ: ಸಂವಿಧಾನ ಬದಲಾವಣೆ ಹೇಳಿಕೆ ನೀಡಿದ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಅವರನ್ನು ಸಂಪುಟದಿಂದ ಕೈಬಿಡಬೇಕೆಂದು ಆಗ್ರಹಿಸಿ ದಲಿತ ಸಂಘಟನೆಗಳು ಕರೆ ನೀಡಿದ್ದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣ ಬಂದ್‌ ಯಶಸ್ವಿಯಾಗಿದೆ.

ಕೆಎಸ್ಸಾರ್ಟಿಸಿ ಸೇರಿ ವಾಹನ ಸಾರಿಗೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಅಂಗಡಿ-ಮುಂಗಟ್ಟುಗಳನ್ನು ಮುಚ್ಚಲಾಗಿವೆ. ಶಾಲಾ ಕಾಲೇಜುಗಳಿಗೆ ಅಘೋಷಿತ ರಜೆ ಘೋಷಿಸಲಾಗಿತ್ತು. ಈ ನಡುವೆ ಪ್ರತಿಭಟನಾಕಾರರು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ಹುಬ್ಬಳ್ಳಿ/ಧಾರವಾಡ ಅವಳಿನಗರ ಬಂದ್ ಹಿನ್ನೆಲೆಯಲ್ಲಿ ಉಭಯ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಅಲ್ಲದೆ, ನಿಗದಿಯಾಗಿದ್ದ ಪರೀಕ್ಷೆಗಳನ್ನು ಮುಂದೂಡಲಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ನಗರದಲ್ಲಿ ಭಾರೀ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.

ಮುಂಡರಗಿ ಬಂದ್: ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಶಿಂಗಟಾಲೂರಿನ ದಲಿತ ಯುವತಿ ಶಾಂತವ್ವಳ ಸಾವು ಪ್ರಕರಣದ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ವಿವಿಧ ದಲಿತ ಸಂಘಟನೆಗಳು ಕರೆ ನೀಡಿದ್ದ ಮುಂಡರಗಿ ಪಟ್ಟಣ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಇತ್ತೀಚೆಗಷ್ಟೇ ವಿವಾಹವಾಗಿದ್ದ ಶಾಂತವ್ವಳನ್ನು ಪ್ರೀತಿಸುವ ನೆಪದಲ್ಲಿ ಕರೆತಂದಿದ್ದ ಪ್ರಕಾಶ್ ಎಂಬ ಯುವಕ ಮತ್ತು ಆತನ ಮನೆಯವರು ಸೇರಿ ಹತ್ಯೆ ಮಾಡಿದ್ದಾರೆ. ಪೊಲೀಸರು ಪ್ರಕರಣವನ್ನು ಆತ್ಮಹತ್ಯೆ ಎಂದು ಮುಚ್ಚಿ ಹಾಕಲು ಮುಂದಾಗಿದ್ದಾರೆಂದು ಆರೋಪಿಸಲಾಗಿದೆ.

ದಲಿತ ಸಂಘಟನೆಗಳ ಕಾರ್ಯಕರ್ತರು ಪಟ್ಟಣದಲ್ಲಿ ರ್ಯಾಲಿ ನಡೆಸಿ ತಹಶಿಲ್ದಾರರಿಗೆ ಮನವಿ ಸಲ್ಲಿಸಿದ್ದಾರೆ. ಪ್ರತಿಭಟನೆಯಲ್ಲಿ ದಲಿತ ಸಂಘಟನೆಗಳ ಮುಖಂಡರಾದ ಯಶೋಧಾ, ಮೋಹನ್ ಅಲಮೇಲಕರ, ಮುತ್ತುರಾಜ ಭಾಮನಿ,ಲಕ್ಷ್ಮಣ ದೊಡ್ಡಮನಿ, ಮಲ್ಲಿಕಾರ್ಜುನ್, ದೇವರಾಜ ಕಟ್ಟಿಮನಿ, ನಾರಾಯಣಸ್ವಾಮಿ, ಲಕ್ಷ್ಮಣ ತಗಡಿನಮನಿ, ಸುರೇಶ ನಂದೆಣ್ಣವರ್, ರಮೇಶ ಕಡೆಮನಿ, ಚಂದ್ರಶೇಖರ ಹರಿಜನ, ಅಶೋಕ ಕುಡುತಿನಿ ಹಾಜರಿದ್ದರು.

‘ದಲಿತ ಯುವತಿಯ ಮೈಮೇಲೆ ಸೀಮೆಎಣ್ಣೆ ಸುರಿದು ಹತ್ಯೆ ಮಾಡಲಾಗಿದೆ. ಆದರೆ, ಪೊಲೀಸರು ಆತ್ಮಹತ್ಯೆಯೆಂದು ಪ್ರಕರಣ ಮುಚ್ಚಿಹಾಕಲು ಯತ್ನಿಸಿದ್ದಾರೆ. ಹೀಗಾಗಿ ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಕೂಡಲೇ ಆರೋಪಿಗಳನ್ನು ಬಂಧಿಸಬೇಕು. ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು’
-ಯಶೋಧಾ ,ರಾಜ್ಯ ಸಂಚಾಲಕಿ, ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಮೇಲ್ವಿಚಾರಣಾ ಸಮಿತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News