ಜ.9 ರಂದು ಅಮಿತ್ ಶಾ ಬೆಂಗಳೂರಿಗೆ ಆಗಮನ

Update: 2018-01-08 14:51 GMT

ಬೆಂಗಳೂರು, ಜ.8: ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯಲ್ಲಿ ಜ.10ರಂದು ನಡೆಯಲಿರುವ ಬಿಜೆಪಿ ಪರಿವರ್ತನಾ ರ್ಯಾಲಿಯಲ್ಲಿ ಪಾಲ್ಗೊಳ್ಳಲು ಮಂಗಳವಾರ ನಗರಕ್ಕೆ ಆಗಮಿಸಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಇದೇ ಸಂದರ್ಭದಲ್ಲಿ ರಾಜ್ಯದ ನಾಯಕರ ಜತೆ ಸರಣಿ ಸಭೆಗಳನ್ನು ನಡೆಸಲಿದ್ದಾರೆ.

ಹೊಸದಿಲ್ಲಿಯಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಅಮಿತ್ ಶಾ ಕಳೆದ ವಾರ ನಿಗದಿತ ಅವಧಿಗಿಂತ ಸುಮಾರು 5 ಗಂಟೆ ತಡವಾಗಿ ಬೆಂಗಳೂರಿಗೆ ಆಗಮಿಸಿದ್ದರು. ಇದರಿಂದಾಗಿ, ರಾಜ್ಯ ನಾಯಕರೊಂದಿಗೆ ಪೂರ್ಣ ಪ್ರಮಾಣದಲ್ಲಿ ಚರ್ಚೆ ನಡೆಸಲು ಸಾಧ್ಯವಾಗಿರಲಿಲ್ಲ.

ಆದುದರಿಂದ, ಒಂದು ದಿನ ಮುಂಚಿತವಾಗಿಯೆ ನಗರಕ್ಕೆ ಬರುತ್ತಿರುವ ಅಮಿತ್ ಶಾ, ಪಕ್ಷ ಸಂಘಟನೆ ಕುರಿತು ರಾಜ್ಯ ನಾಯಕರ ಜತೆ ಚರ್ಚೆ ನಡೆಸಲಿದ್ದಾರೆ. ಅಲ್ಲದೆ, ನ.2ರಿಂದ ಆರಂಭವಾಗಿರುವ ಪರಿವರ್ತನಾ ರ್ಯಾಲಿಗೆ ರಾಜ್ಯಾದ್ಯಂತ ಜನರಿಂದ ಸಿಗುತ್ತಿರುವ ಬೆಂಬಲ, ಅಭಿಪ್ರಾಯಗಳ ಬಗ್ಗೆಯೂ ಮಾಹಿತಿ ಪಡೆಯಲಿದ್ದಾರೆ.

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಪ್ರಚಾರ ವೈಖರಿ, ಕಾರ್ಯತಂತ್ರ, ಚುನಾವಣಾ ಹೊಸ್ತಿನಲ್ಲಿ ಅನ್ಯ ಪಕ್ಷದವರಿಂದ ವಲಸೆ ಬರುವ ಮುಖಂಡರಿಗೆ ಪಕ್ಷದಲ್ಲಿ ನೀಡಬೇಕಾದ ಸ್ಥಾನಮಾನಗಳ ವಿಚಾರಗಳ ಕುರಿತು ಪ್ರಮುಖ ನಾಯಕರೊಂದಿಗೆ ಅಮಿತ್ ಶಾ ವಿಚಾರ ವಿನಿಮಯ ಮಾಡಿಕೊಳ್ಳಲಿದ್ದಾರೆ.

ಬಿಜೆಪಿಯ ಪರಿವರ್ತನಾ ರ್ಯಾಲಿಯ ಸಮಾರೋಪ ಸಮಾರಂಭವು ಜ.28ರಂದು ನಡೆಯಲಿದ್ದು, ಪ್ರಧಾನಿ ನರೇಂದ್ರಮೋದಿ ಇದರಲ್ಲಿ ಪಾಲ್ಗೊಳ್ಳುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮದ ಪೂರ್ವಸಿದ್ಧತೆಗಳು, ಸ್ವರೂಪ, ಯಾವ ಸ್ಥಳದಲ್ಲಿ ಕಾರ್ಯಕ್ರಮ ಆಯೋಜಿಸಬೇಕು ಸೇರಿದಂತೆ ಇನ್ನಿತರ ಪ್ರಮುಖ ವಿಚಾರಗಳ ಬಗ್ಗೆಯೂ ಅಮಿತ್ ಶಾ ಚರ್ಚೆ ನಡೆಸಲಿದ್ದಾರೆ.

ನಗರದ ಖಾಸಗಿ ಹೊಟೇಲ್‌ನಲ್ಲಿ ಆಯೋಜಿಸಿರುವ ಈ ಸಮಾಲೋಚನಾ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಕೇಂದ್ರ ಸಚಿವರಾದ ಅನಂತ್‌ಕುಮಾರ್, ಡಿ.ವಿ.ಸದಾನಂದಗೌಡ, ರಮೇಶ್ ಜಿಗಜಿಣಗಿ, ಅನಂತ್‌ಕುಮಾರ್ ಹೆಗಡೆ, ವಿರೋಧ ಪಕ್ಷದ ನಾಯಕರಾದ ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ, ಬಿಜೆಪಿ ಸಂಘಟನಾ ಕಾರ್ಯದರ್ಶಿ ಸಂತೋಷ್ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News