ವ್ಯಕ್ತಿತ್ವ ವಿಕಸನವನ್ನು ಮಕ್ಕಳಿಗೆ ಮನವರಿಕೆ ಮಾಡಲಾಗುತ್ತಿಲ್ಲ: ಡಾ.ಎ.ಮಾಧವ ಉಡುಪ

Update: 2018-01-08 14:55 GMT

ಬೆಂಗಳೂರು, ಜ.8: ಪೀಳಿಗೆ ಅಂತರದಿಂದ ಮಕ್ಕಳಿಗೆ ಪೋಷಕರು ದಾರಿ ತೋರಿಸಲು ಸಾಧ್ಯವಾಗದೆ, ವ್ಯಕ್ತಿತ್ವ ವಿಕಸನವನ್ನು ಮಕ್ಕಳಿಗೆ ಮನವರಿಕೆ ಮಾಡಲಾಗುತ್ತಿಲ್ಲ ಎಂದು ಬರಹಗಾರ ಡಾ.ಎ.ಮಾಧವ ಉಡುಪ ಅಭಿಪ್ರಾಯಪಟ್ಟರು.

ನಗರದ ಆರ್‌ವಿ ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಆರ್‌ವಿಐಎಂ) ಕಾಲೇಜಿನ ಸಭಾಂಗಣದಲ್ಲಿ ನಿರಂತರ ಸಂಸ್ಥೆಯ ಆಯೋಜಿಸಿದ್ದ ಸ್ವಾಮಿ ವಿವೇಕಾನಂದ ಜಯಂತಿ ಮತ್ತು ‘ವಿವೇಕಾನಂದತ್ವದಿಂದ ಪರಿಪೂರ್ಣ ವ್ಯಕ್ತಿತ್ವ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪೀಳಿಗೆ ಅಂತರದಿಂದ ಮಕ್ಕಳಿಗೆ ಪೋಷಕರು ದಾರಿ ತೋರಿಸಲು ಸಾಧ್ಯವಾಗದೆ, ವ್ಯಕ್ತಿತ್ವ ವಿಕಸನವನ್ನು ಮಕ್ಕಳಿಗೆ ಮನವರಿಕೆ ಮಾಡಲಾಗುತ್ತಿಲ್ಲ. ಆದರೆ, ಯುವ ಜನತೆಗೆ ಕರೆ ನೀಡುವ ಈ ಕೃತಿಯಲ್ಲಿ ವ್ಯಕ್ತಿತ್ವ ವಿಕಸನಕ್ಕೆ ಸ್ಪಷ್ಟ ಸೂಚನೆ ಇದೆ. ವಿವೇಕಾನಂದರ ಆತ್ಮಶಕ್ತಿಯೇ ನಾನು ಕಂಡುಕೊಂಡ ಇದರ ಬಹುದೊಡ್ಡ ಆಯಾಮವಾಗಿದೆ ಎಂದು ನುಡಿದರು.

ಬಿ.ಕೆ.ವಿಲಾಯ್ ಮಾತನಾಡಿ, ಸ್ವಾಮಿ ವಿವೇಕಾನಂದರು ರಾಷ್ಟ್ರ ಧರ್ಮ, ಅಧ್ಯಾತ್ಮ ಮತ್ತು ರಾಷ್ಟ್ರ ಪ್ರೇಮ ಸಾರಿದವರು. ಅವರ ಚಿಕಾಗೊ ಭಾಷಣದಲ್ಲಿ ಭಾರತವು ಆಶ್ರಯ ನೀಡಿದ ದೇಶ, ಚರಿತ್ರೆದಲ್ಲಿ ಇದು ಪ್ರಮುಖವಾದ ಅಂಶವಾಗಿದ್ದು ಸಹಿಷ್ಣುತೆಯೇ ಈ ದೇಶದ ಸಂಸ್ಕಾರ ಎಂದು ನುಡಿದವರು. ನೈತಿಕತೆ ಮತ್ತು ಅಧ್ಯಾತ್ಮ ಸೇರಿದರೆ ಪರಿಪೂರ್ಣ ವ್ಯಕ್ತಿತ್ವ ಹೊಂದಲು ಸಾಧ್ಯ ಎಂದು ಹೇಳಿದರು.

ಕೃತಿಯನ್ನು ಲೋಕಾರ್ಪಣೆ ಮಾಡಿದ ಪ್ರೊ.ಕೆ.ರಘೋತ್ತಮ ರಾವ್ ಮಾತನಾಡಿ, ವಿವೇಕಾನಂದರು ನುಡಿದಂತೆ ಸಾಮರ್ಥ್ಯವನ್ನು ಸದುಪಯೋಗ ಪಡಿಸಿಕೊಳ್ಳುವುದಕ್ಕೆ ವಿಶ್ವಾಸ, ಸಕಾರಾತ್ಮಕ ಮನೋಭಾವ ಮತ್ತು ಪರೋಪಕಾರದ ಚಿಂತನೆ ಮನುಷ್ಯನಲ್ಲಿ ಇರಲೇಬೇಕಾದ ಗುಣಗಳು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷ ಮಲ್ಲೇಪುರಂ.ಜಿ.ವೆಂಕಟೇಶ್, ಆರ್‌ವಿಐಎಂ ಸಂಸ್ಥೆ ನಿರ್ದೇಶಕ ಡಾ.ಟಿ.ವಿ.ರಾಜು, ಎಂ.ವಿಶ್ವನಾಥ್ ಮತ್ತು ಉದಯಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News