ಬೆಂಗಳೂರಿನಲ್ಲಿ ಹಕ್ಕಿ ಜ್ವರ: 1 ಕಿ.ಮೀ ವ್ಯಾಪ್ತಿ ಸೋಂಕು ಪೀಡಿತ ವಲಯವೆಂದು ಸರಕಾರ ಘೋಷಣೆ

Update: 2018-01-08 15:11 GMT

ಬೆಂಗಳೂರು, ಜ. 8: ಬೆಂಗಳೂರು ನಗರ ಜಿಲ್ಲೆಯ ಪೂರ್ವ ತಾಲೂಕಿನ ಯಲಹಂಕ ಹೋಬಳಿ ದಾಸರಹಳ್ಳಿಯಲ್ಲಿ ಹಕ್ಕಿಜ್ವರಕ್ಕೆ ಕಾರಣವಾದ ಎಚ್-5 ರೋಗಾಣು ಇರುವುದು ದೃಢಪಟ್ಟಿದ್ದು, 1 ಕಿ.ಮೀ ವ್ಯಾಪ್ತಿಯ ಪ್ರದೇಶವನ್ನು ಸೋಂಕು ಪೀಡಿತ ಹಾಗೂ 1ರಿಂದ 10 ಕಿ.ಮೀ ಪ್ರದೇಶವನ್ನು ಸರ್ವೆಕ್ಷಣಾ ವಲಯವೆಂದು ರಾಜ್ಯ ಸರಕಾರ ಅಧಿಸೂಚನೆ ಹೊರಡಿಸಿದೆ.

ಹಕ್ಕಿಜ್ವರ ಸೋಂಕು ಪೀಡಿತ ವಲಯದ ಎಲ್ಲ 942 ಕೋಳಿಗಳನ್ನು ವೈಜ್ಞಾನಿಕ ಮರಣಕ್ಕೆ ಒಳಪಡಿಸಿ ವಿಲೇವಾರಿ ಮಾಡಲಾಗಿದೆ. ನೈರ್ಮಲ್ಯ ಮತ್ತು ಸೋಂಕುಗಳ ಕಾರ್ಯವು ಸೋಂಕು ಪೀಡಿತ ವಲಯದಲ್ಲಿ ಪೂರ್ಣಗೊಂಡಿದ್ದು, ಸರ್ವೇಕ್ಷಣಾ ವಲಯದಲ್ಲಿ ಮುಂದುವರೆದಿರುತ್ತದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ 3 ಕಿ.ಮೀ ವ್ಯಾಪ್ತಿಯಲ್ಲಿ ಪ್ರತಿಯೊಬ್ಬರ ಆರೋಗ್ಯ ತಪಾಸಣೆ ಮಾಡಲಾಗಿದೆ. ಕೇಂದ್ರ ಆರೋಗ್ಯ ಇಲಾಖೆ ತಜ್ಞರ ತಂಡ ರಾಜ್ಯಕ್ಕೆ ಆಗಮಿಸಿದ್ದು ಹಕ್ಕಿಜ್ವರ ಇರುವುದನ್ನು ದೃಢೀಕರಿಸಿರುತ್ತಾರೆ. ಹಾಗೂ ಕೇಂದ್ರ ಸರಕಾರ ಹೊರಡಿಸಿರುವ ಮಾರ್ಗಸೂಚಿಯಂತೆ ಕಟ್ಟುನಿಟ್ಟಾಗಿ ಸರ್ವೇಕ್ಷಣಾ ಕಾರ್ಯ ಮುಂದುವರೆಸಲಾಗಿದೆ ಎಂದು ತಿಳಿಸಲಾಗಿದೆ.

ಕೇಂದ್ರದ ಮಾರ್ಗಸೂಚಿಯನ್ವಯ ಸರ್ವೇಕ್ಷಣಾ ಕಾರ್ಯವು ಕಟ್ಟುನಿಟ್ಟಾಗಿ ಮುಂದುವರೆಯುತ್ತದೆ. ಸರ್ವೇಕ್ಷಣಾ ವಲಯದಲ್ಲಿ ಯಾವುದೇ ಕೋಳಿಗಳ ಅಸ್ವಾಭಾವಿಕ ಮರಣ ಹೊಂದಿರುವ ಬಗ್ಗೆ ವರದಿಯಾಗಿರುವುದಿಲ್ಲ. ಸಾರ್ವಜನಿಕರು ಆಂತಕಕ್ಕೆ ಒಳಗಾಗಬಾರದೆಂದು ಸೂಚಿಸಲಾಗಿದೆ. ಹೆಚ್ಚಿನ ಮಾಹಿತಿಗೆ ನಿಯಂತ್ರಣ ಕೊಠಡಿಯ ದೂ.ಸಂಖ್ಯೆ-1800 425 0012ಗೆ ಉಚಿತ ಕರೆ ಮಾಡಬಹುದು ಎಂದು ಕೋರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News