ಉಕ್ಕಿನ ಮೇಲ್ಸೇತುವೆಗೆ ಮಧ್ಯಂತರ ತಡೆ ನೀಡಲು ಹೈಕೋರ್ಟ್ ನಕಾರ
ಬೆಂಗಳೂರು, ಜ.8: ನಗರದ ಶಿವಾನಂದ ಸರ್ಕಲ್ ಬಳಿ ನಿರ್ಮಿಸಲು ಉದ್ದೇಶಿಸಿರುವ ಉಕ್ಕಿನ ಮೇಲ್ಸೇತುವೆಗೆ ಮಧ್ಯಂತರ ತಡೆ ನೀಡಲು ಹೈಕೋರ್ಟ್ ನಿರಾಕರಿಸಿದೆ.
ಉಕ್ಕಿನ ಮೇಲ್ಸೇತುವೆ ನಿರ್ಮಾಣಕ್ಕೆ ತಡೆಯಾಜ್ಞೆ ನೀಡಲು ಕೋರಿ ಕುಮಾರ ಪಾರ್ಕ್ ಪೂರ್ವ ಭಾಗದ ನಿವಾಸಿ ಬಿ.ಪಿ.ಮಹೇಶ್ ಹಾಗೂ ಇತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ವಿಚಾರಣೆ ಪೂರ್ಣಗೊಳಿಸಿದ್ದ ಹಂಗಾಮಿ ನ್ಯಾಯಮೂರ್ತಿ ಎಚ್.ಜಿ.ರಮೇಶ್ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶ್‌ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ಈ ಆದೇಶ ನೀಡಿತು.
ಐಆರ್‌ಸಿ ಅನುಸಾರವಾಗಿಯೇ ಶಿವಾನಂದ ಸರ್ಕಲ್ ಬಳಿ ಉಕ್ಕಿನ ಮೇಲ್ಸೇತುವೆಯನ್ನು ನಿರ್ಮಿಸಲಾಗುತ್ತಿದೆ. ಈ ಮೇಲ್ಸೇತುವೆಗೆ ತಡೆ ನೀಡಿದರೆ ಇದರ ವೆಚ್ಚವೂ ಹೆಚ್ಚಾಗುತ್ತದೆ. ಹೀಗಾಗಿ, ಯಾವುದೆ ಕಾರಣಕ್ಕೂ ತಡೆ ನೀಡಲ್ಲ ಎಂದು ನ್ಯಾಯಪೀಠವು ಅಭಿಪ್ರಾಯಪಟ್ಟಿದೆ.
ಬಿಬಿಎಂಪಿ ಪರ ವಾದಿಸಿದ್ದ ಹಿರಿಯ ವಕೀಲ ಡಿ.ಎನ್.ನಂಜುಂಡರೆಡ್ಡಿ ಅವರು, ಬೆಂಗಳೂರು ನಗರದಲ್ಲಿ 14 ಮೇಲ್ಸೇತುವೆಗಳಿದ್ದು, ಅವುಗಳು ಭಾರತೀಯ ರಸ್ತೆ ಕಾಂಗ್ರೆಸ್(ಐಆರ್‌ಸಿ) ಮಾರ್ಗಸೂಚಿ ಅನುಸಾರವಾಗಿ 6, 7, 6.5, 6.9 ಮೀಟರ್ ಎತ್ತರವನ್ನು ಹೊಂದಿವೆ. ಆದರೆ, ಶಿವಾನಂದ ಸರ್ಕಲ್ ಬಳಿ ಜಾಗದ ಸಮಸ್ಯೆ ಇರುವುದರಿಂದ ಉಕ್ಕಿನ ಮೇಲ್ಸೇತುವೆಯ ಎತ್ತರವನ್ನು 4.5ನಿಂದ 5.5 ಮೀಟರ್‌ಗೆ ಎತ್ತರಿಸಲು ಬರುವುದಿಲ್ಲ. ಈ ಮೇಲ್ಸೇತುವೆಯಲ್ಲಿ ಸಂಚರಿಸುವ ವಾಹನಗಳಿಗೆ ಅತೀ ಕಡಿಮೆ ವೇಗದಲ್ಲಿ ಸಂಚರಿಸುವಂತೆ ಸೂಚನಾ ಫಲಕವನ್ನು ಅಳವಡಿಸಲಾಗುವುದು ಎಂದು ಪೀಠಕ್ಕೆ ತಿಳಿಸಿದ್ದರು.
ಅರ್ಜಿದಾರರ ಪರ ವಾದಿಸಿದ್ದ ವಕೀಲ ಅಶೋಕ್ ಬಿ. ಪಾಟೀಲ್ ಅವರು, ಶಿವಾನಂದ ಸರ್ಕಲ್ ಬಳಿ ನಿರ್ಮಿಸಲು ಉದ್ದೇಶಿಸಿರುವ ಉಕ್ಕಿನ ಮೇಲ್ಸೇತುವೆಯ ಎತ್ತರವನ್ನು 4.5 ಮೀಟರ್‌ಗೆ ಸೀಮಿತಗೊಳಿಸಿದರೆ ಐಆರ್‌ಸಿ ಮಾರ್ಗಸೂಚಿಗಳನ್ನು ಉಲ್ಲಂಘಿಸಿದಂತಾಗುತ್ತದೆ. ಹೀಗಾಗಿ, ಮೇಲ್ಸೇತುವೆಯ ನಿರ್ಮಾಣಕ್ಕೆ ತಡೆ ನೀಡಬೇಕೆಂದು ಪೀಠಕ್ಕೆ ಮನವಿ ಮಾಡಿದ್ದರು.
ವಕೀಲರ ವಾದ ಪ್ರತಿವಾದವನ್ನು ಆಲಿಸಿದ್ದ ನ್ಯಾಯಪೀಠವು ತೀರ್ಪನ್ನು ಕಾಯ್ದಿರಿಸಿತ್ತು. ಸೋಮವಾರ (ಜ.8) ಉಕ್ಕಿನ ಮೇಲ್ಸೇತುವೆಗೆ ಮಧ್ಯಂತರ ತಡೆ ನೀಡಲು ನಿರಾಕರಿಸಿ, ಅರ್ಜಿಯನ್ನು ವಜಾಗೊಳಿಸಿದೆ.